ADVERTISEMENT

ಭಾರತದ ‘ಓಟ’ಕ್ಕೆ ಜೇಮ್ಸ್ ಕಡಿವಾಣ; ಇಂಗ್ಲೆಂಡ್‌ಗೆ ಆಘಾತ ಮಾಡಿದ ಸಿರಾಜ್‌

ಲಾರ್ಡ್ಸ್‌ ಟೆಸ್ಟ್‌: 5 ವಿಕೆಟ್ ಗೊಂಚಲು ಗಳಿಸಿದ ಆ್ಯಂಡರ್ಸನ್; ಜಡೇಜ ಉತ್ತಮ ಆಟದ ಕಾಣಿಕೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 20:33 IST
Last Updated 13 ಆಗಸ್ಟ್ 2021, 20:33 IST
ಜೇಮ್ಸ್
ಜೇಮ್ಸ್   

ಲಂಡನ್ (ಪಿಟಿಐ): ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಗುರುವಾರ ಕೆ.ಎಲ್. ರಾಹುಲ್ ಬ್ಯಾಟಿಂಗ್ ವೈಭವ ನೋಡಿದ್ದ ಕ್ರಿಕೆಟ್ ಪ್ರೇಮಿಗಳು ಶುಕ್ರವಾರ ಜೇಮ್ಸ್‌ ಆ್ಯಂಡರ್ಸನ್ ಬೌಲಿಂಗ್‌ನ ಅಂದ ಚೆಂದವನ್ನೂ ಕಣ್ತುಂಬಿಕೊಂಡರು.

39 ವರ್ಷದ ಆ್ಯಂಡರ್ಸನ್ (62ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್‌ನಿಂದಾಗಿ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ದಾಖಲಿಸುವ ಗುರಿ ಕೈಗೂಡಲಿಲ್ಲ. 126.1 ಓವರ್‌ಗಳಲ್ಲಿ 364 ರನ್ ಗಳಿಸಿ ಆಲೌಟ್ ಆಯಿತು. ಬ್ಯಾಟಿಂಗ್ ಆರಂಭಿಸಿದ ಆತಿಥೇಯ ತಂಡ 45 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 118 ರನ್ ಗಳಿಸಿತು.

ಜೇಮ್ಸ್ 31ನೇ ಬಾರಿ ಐದು ವಿಕೆಟ್‌ಗಳ ಗೊಂಚಲು ಗಳಿಸಿದರು. ಭಾರತದ ವಿರುದ್ಧ ಇದು ಏಳನೇಯದ್ದು. ತಂಡದ ಇನ್ನೊಬ್ಬ ವೇಗಿ ಮಾರ್ಕ್ ವುಡ್ ಕೂಡ ಎರಡು ವಿಕೆಟ್ ಗಳಿಸಿದರು.

ADVERTISEMENT

ಮೊದಲ ದಿನದಾಟದಲ್ಲಿ ಭಾರತ ತಂಡವು ರಾಹುಲ್ ಶತಕದ ಬಲದಿಂದ ಮೂರು ವಿಕೆಟ್‌ಗಳಿಗೆ 276 ರನ್ ಗಳಿಸಿತ್ತು. ರಾಹುಲ್ ಮತ್ತು ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿದ್ದರು.

ಎರಡನೇ ದಿನದಾಟದಲ್ಲಿ ಕೇವಲ 88 ರನ್‌ಗಳ ಅಂತರದಲ್ಲಿ ಏಳು ವಿಕೆಟ್‌ಗಳನ್ನು ತಂಡವು ಕಳೆದು ಕೊಂಡಿತು. ಇದರ ನಡುವೆಯೂ ರಿಷಭ್ ಪಂತ್ (37 ರನ್) ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ (40) ಎಂದಿನಂತೆ ತಮ್ಮ ಕಾಣಿಕೆ ನೀಡುವುದನ್ನು ತಪ್ಪಿಸಲಿಲ್ಲ. ಊಟದ ವಿರಾಮದ ವೇಳೆಗೆ ಭಾರತ ತಂಡವು ಎಳು ವಿಕೆಟ್‌ಗಳ ನಷ್ಟಕ್ಕೆ 346 ರನ್ ಗಳಿಸಿತ್ತು. ಮೊದಲ ಅವಧಿಯಲ್ಲಿ ರಾಹುಲ್ (129), ರಿಷಭ್ (37), ರಹಾನೆ (1) ಮತ್ತು ಖಾತೆ ತೆರೆಯದ ಮೊಹಮ್ಮದ್ ಶಮಿ ಔಟಾದರು.

ಈ ಇಬ್ಬರೂ ಎಡಗೈ ಬ್ಯಾಟ್ಸ್‌ಮನ್‌ ಗಳ ವಿಕೆಟ್‌ಗಳನ್ನೂ ಮಾರ್ಕ್ ವುಡ್ ಪಡೆದರು. ಇದರಿಂದಾಗಿ ಭಾರತ ತಂಡವು 400 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್ ಬೂಮ್ರಾ ಖಾತೆ ತೆರೆಯದೇ ನಿರ್ಗಮಿಸಿದರು.

ಸ್ಕೋರ್ ಕಾರ್ಡ್‌

ಭಾರತ (ಮೊದಲ ಇನಿಂಗ್ಸ್‌) 364 (126.1 ಓವರ್‌) (ಗುರುವಾರ 90 ಓವರ್‌ಗಳಲ್ಲಿ 3 ವಿಕೆಟ್‌ಗೆ 276)

ರಾಹುಲ್‌ ಸಿ ಸಿಬ್ಲಿ ಬಿ ರಾಬಿನ್ಸನ್‌ 129 (250ಎ, 4X12, 6X1), ರಹಾನೆ ಸಿ ರೂಟ್‌ ಬಿ ಆ್ಯಂಡರ್ಸನ್‌ 1 (23ಎ), ಪಂತ್‌ ಸಿ ಬಟ್ಲರ್ ಬಿ ವುಡ್‌ 37 (58ಎ, 4X5), ಜಡೇಜ ಸಿ ಆ್ಯಂಡರ್ಸನ್ ಬಿ ವುಡ್‌ 40 (120ಎ, 4X3), ಶಮಿ ಸಿ ಬರ್ನ್ಸ್ ಬಿ ಮೊಯಿನ್‌ 0 (2ಎ), ಇಶಾಂತ್‌ ಎಲ್‌ಬಿಡಬ್ಲ್ಯು ಆ್ಯಂಡರ್ಸನ್‌ 8 (29ಎ, 4X1), ಬೂಮ್ರಾ ಸಿ ಬಟ್ಲರ್‌ ಬಿ ಆ್ಯಂಡರ್ಸನ್‌ 0 (6ಎ), ಸಿರಾಜ್‌ ಔಟಾಗದೆ 0

ಇತರೆ (ಬೈ 8, ಲೆಗ್‌ಬೈ 5, ನೋಬಾಲ್ 2) 15

ವಿಕೆಟ್ ಪತನ: 4–278 (ಕೆ.ಎಲ್‌.ರಾಹುಲ್‌, 90.2), 5–282 (ಅಜಿಂಕ್ಯ ರಹಾನೆ, 91.1), 6–331 (ರಿಷಭ್ ಪಂತ್‌, 109.6), 7–336 (ಮೊಹಮ್ಮದ್ ಶಮಿ, 110.5), 8–362 (ಇಶಾಂತ್ ಶರ್ಮಾ, 123.6), 9–364 (ಜಸ್‌ಪ್ರೀತ್ ಬೂಮ್ರಾ, 125.6), 10–364 (ರವೀಂದ್ರ ಜಡೇಜ, 126.1)

ಬೌಲಿಂಗ್‌: ಜೇಮ್ಸ್ ಆ್ಯಂಡರ್ಸನ್‌ 29–7–62–5, ಒಲಿ ರಾಬಿನ್ಸನ್‌ 33–10–73–2, ಸ್ಯಾಮ್ ಕರನ್‌ 22–2–72–0, ಮಾರ್ಕ್ ವುಡ್‌ 24.1–2–91–2, ಮೋಯಿನ್ ಅಲಿ 18–1–53–1

ಇಂಗ್ಲೆಂಡ್‌ (ಮೊದಲ ಇನಿಂಗ್ಸ್‌) 3 ವಿಕೆಟ್‌ಗಳಿಗೆ 119 (45 ಓವರ್‌)

ರೋರಿ ಎಲ್‌ಬಿಡಬ್ಲ್ಯು ಶಮಿ 49 (136ಎ, 4X7), ಸಿಬ್ಲಿ ಸಿ ರಾಹುಲ್ ಬಿ ಸಿರಾಜ್‌ 11 (44ಎ, 4X1), ಹಮೀದ್‌ ಬಿ ಸಿರಾಜ್ 0 (1ಎ), ರೂಟ್‌ ಬ್ಯಾಟಿಂಗ್‌ 48 (75ಎ, 4X6), ಬೇಸ್ಟೊ ಬ್ಯಾಟಿಂಗ್ 6 (17 ಎ)

ಇತರೆ (ಲೆಗ್‌ಬೈ 2, ನೋಬಾಲ್ 3) 5

ವಿಕೆಟ್ ಪತನ: 1–23 (ಡಾಮ್ ಸಿಬ್ಲಿ, 14.2), 2–23 (ಹಸೀಬ್ ಹಮೀದ್‌, 14.3). 3–108 (ರೋರಿ ಬರ್ನ್ಸ್‌ , 41.2)

ಬೌಲಿಂಗ್‌: ಇಶಾಂತ್ ಶರ್ಮಾ 11–2–32–0, ಜಸ್‌ಪ್ರೀತ್ ಬೂಮ್ರಾ 9–3–23–0, ಮೊಹಮ್ಮದ್ ಶಮಿ 8–2–22–1, ಮೊಹಮ್ಮದ್ ಸಿರಾಜ್‌ 13–4–34–2, ರವೀಂದ್ರ ಜಡೇಜ 4–1–6–0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.