ADVERTISEMENT

ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನ

ಪಿಟಿಐ
Published 14 ಮೇ 2024, 3:26 IST
Last Updated 14 ಮೇ 2024, 3:26 IST
ಬಿಸಿಸಿಐ
ಬಿಸಿಸಿಐ   

ನವದೆಹಲಿ: ಮುಂದಿನ ತಿಂಗಳು ಅಮೆರಿಕ ಮತ್ತು ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನೊಂದಿಗೆ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಹೀಗಾಗಿ, ಮುಂದಿನ ಮೂರೂವರೆ ವರ್ಷಗಳ ಅವಧಿಗೆ ಮುಖ್ಯ ಕೋಚ್ ಹುದ್ದೆಗಾಗಿ ಬಿಸಿಸಿಐ ಸೋಮವಾರ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

‘ಆಯ್ಕೆ ಪ್ರಕ್ರಿಯೆಯು ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಆಯ್ಕೆಯಾದ ಹೊಸ ಕೋಚ್‌ ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಅವರ ಅವಧಿಯು 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. ದ್ರಾವಿಡ್ ಅವರು ಟಿ20 ವಿಶ್ವಕಪ್ ನಂತರ ಕೋಚ್‌ ಹುದ್ದೆಯಲ್ಲಿ ಮುಂದುವರಿಯಲು ಬಯಸಿದರೆ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಚೆಗೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.