ಪೆಲ್ಲೆಕೆಲ್ಲೆ : ಮಧ್ಯಮ ಕ್ರಮಾಂಕದ ಬ್ಯಾಟರ್ ಚರಿತ್ ಅಸಲಂಕ ಅವರನ್ನು ಪ್ರವಾಸಿ ಭಾರತ ತಂಡದ ವಿರುದ್ಧ ಇದೇ 27ರಂದು ಆರಂಭವಾಗುವ ಟಿ20 ಸರಣಿಗೆ ಶ್ರೀಲಂಕಾ ತಂಡದ ನಾಯಕರಾಗಿ ನೇಮಕ ಮಾಡಲಾಗಿದೆ.
ಮೂರು ಟಿ20 ಪಂದ್ಯಗಳು ಕ್ರಮವಾಗಿ ಜುಲೈ 27, 28 ಮತ್ತು 30ರಂದು ನಡೆಯಲಿವೆ. ಈ ಹಿಂದೆ ನಾಯಕರಾಗಿದ್ದ ಸ್ಪಿನ್ ಆಲ್‌ರೌಂಡರ್ ವನಿಂದು ಹಸರಂಗ ಅವರು ಕಳೆದ ತಿಂಗಳ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡದ ಕಳಪೆ ನಿರ್ವಹಣೆ ಕಾರಣ ಪದತ್ಯಾಗ ಮಾಡಿದ್ದರು.
27 ವರ್ಷದ ಅಸಲಂಕ ಅವರು ಈ ಹಿಂದೆಯೂ ನಾಯಕರಾಗಿ ಅನುಭವ ಹೊಂದಿದ್ದಾರೆ. ಐಸಿಸಿ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಹಸರಂಗ ಅವರನ್ನು ಅಮಾನತು ಮಾಡಿತ್ತು. ಆ ವೇಳೆ ಅವರು ಬಾಂಗ್ಲಾದೇಶ ಪ್ರವಾಸಕ್ಕೆ (2 ಟಿ0 ಪಂದ್ಯ) ತಂಡವನ್ನು ಮುನ್ನಡೆಸಿದ್ದರು. ವಿಶ್ವಕಪ್ ತಂಡಕ್ಕೆ ಉಪನಾಯಕರಾಗಿದ್ದರು.
19 ವರ್ಷದೊಳಗಿನವರ ತಂಡಕ್ಕೆ ನಾಯಕರಾಗಿದ್ದ ಅವರು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಜಾಫ್ನಾ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದಾರೆ.
ತಂಡದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. 16 ಮಂದಿಯ ತಂಡದಲ್ಲಿ ಅನುಭವಿಗಳ ಜೊತೆ ಯುವಮುಖಗಳೂ ಇವೆ.
ಅನುಭವಿ ಆಲ್‌ರೌಂಡರ್‌ಗಳಾದ ಆ್ಯಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವ, ವಿಕೆಟ್ ಕೀಪರ್ ಸದೀರ ಸಮರವಿಕ್ರಮ ಮತ್ತು ಎಡಗೈ ವೇಗದ ಬೌಲರ್ ದಿಲ್ಶನ್ ಮದುಶಂಕ ಅವರನ್ನು ಕೈಬಿಡಲಾಗಿದೆ. ಇವರು ಟಿ20 ವಿಶ್ವಕಪ್ ತಂಡದಲ್ಲಿದ್ದರು.
34 ವರ್ಷ ವಯಸ್ಸಿನ ಬ್ಯಾಟರ್ ದಿನೇಶ್ ಚಾಂಡಿಮಲ್ ತಂಡಕ್ಕೆ ಮರಳಿದ್ದಾರೆ. ಅವರು 2022ರ ಫೆಬ್ರುವರಿಯಲ್ಲಿ ಕೊನೆಯ ಸಲ ಆಡಿದ್ದರು. ಕುಶಲ್ ಜೆ.ಪೆರೀರಾ ಕೂಡ ತಂಡಕ್ಕೆ ವಾಪಸಾಗಿದ್ದಾರೆ.
ಆಲ್‌ರೌಂಡರ್ ಚಮಿಂದು ವಿಕ್ರಮಸಿಂಘೆ ಅವರನ್ನು ಮೊದಲ ಬಾರಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ವೇಗದ ಬೌಲರ್ ಆಗಿರುವ ಅವರು ಚೆನ್ನೈನ ಎಂಆರ್‌ಎಫ್ ಪೇಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ತೋರಿದ ಉತ್ತಮ ಪ್ರದರ್ಶನಕ್ಕೆ ಅವರಿಗೆ ಈ ಬಳುವಳಿ ನೀಡಲಾಗಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ಟಿ20 ತಂಡ ಸೋಮವಾರ ರಾತ್ರಿ ಇಲ್ಲಿಗೆ ಬಂದಿಳಿದಿದೆ.
ತಂಡ ಹೀಗಿದೆ:
ಚರಿತ್ ಅಸಲಂಕ (ನಾಯಕ), ಪಥುಮ್ ನಿಸಾಂಕ, ಕುಶಲ್ ಪೆರೀರಾ (ವಿಕೆಟ್ ಕೀಪರ್), ಅವಿಷ್ಕಾ ಫೆರ್ನಾಂಡೊ, ಕುಶಲ್ ಮೆಂಡಿಸ್, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ದಸುನ್ ಶನಕ, ವನಿಂದು ಹಸರಂಗ, ದುನಿತ್ ವೆಲ್ಲಾಳಗೆ, ಮಹೀಶ ತೀಕ್ಷಣ, ಚಮಿಂದು ವಿಕ್ರಮಸಿಂಘೆ, ಮತೀಶ ಪಥಿರಾಣ, ನುವಾನ್ ತುಷಾರ, ದುಷ್ಮಂತ ಚಮೀರ ಮತ್ತು ಬಿನುರ ಫೆರ್ನಾಂಡೊ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.