ADVERTISEMENT

Ashes 2025| 69 ಎಸೆತದಲ್ಲಿ ಶತಕ ಸಿಡಿಸಿದ ಟ್ರಾವಿಸ್‌ ಹೆಡ್‌: ಹಲವು ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2025, 10:18 IST
Last Updated 22 ನವೆಂಬರ್ 2025, 10:18 IST
   

ಪರ್ತ್: ಇಂಗ್ಲೆಂಡ್‌ ವಿರುದ್ದದ ಆ್ಯಷಸ್‌ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್‌ ಹೆಡ್‌ ಕೇವಲ 69 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.

ಆಸೀಸ್ ಬೌಲಿಂಗ್‌ ದಾಳಿಗೆ ತತ್ತರಿಸಿದ ಪ್ರವಾಸಿ ಇಂಗ್ಲೆಂಡ್‌ ತಂಡವು 205 ರನ್ ಗುರಿ ನೀಡಿತ್ತು.

ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡವು, ಮಾರ್ನಸ್ ಲಾಬುಷೇನ್ ಬದಲಿಗೆ ಸ್ಪೋಟಕ ಆಟಗಾರ ಟ್ರಾವಿಸ್‌ ಹೆಡ್‌ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿತ್ತು.

ADVERTISEMENT

ಎರಡನೇ ಇನಿಂಗ್ಸ್‌ನಲ್ಲಿ 21 ರನ್‌ ಗಳಿಸಿದ್ದ ಹೆಡ್‌, ನಾಲ್ಕನೇ ಇನಿಂಗ್ಸ್‌ನಲ್ಲಿ ಸ್ಪೋಟಕ ಆಟಕ್ಕೆ ಒತ್ತು ನೀಡಿದರು. ಕೇವಲ 36 ಎಸೆತದಲ್ಲಿ ಅರ್ಧ ಶತಕ ಹಾಗೂ 69 ಎಸೆತದಲ್ಲೇ ಶತಕ ಸಿಡಿಸಿದರು.

83 ಎಸೆತಗಳಲ್ಲಿ 4 ಸಿಕ್ಸರ್‌, 16 ಬೌಂಡರಿ ಸಹಿತ 123 ರನ್‌ಗಳಿಸಿದ ಹೆಡ್‌, ಬ್ರೈಡನ್ ಕಾರ್ಸೆ ಎಸೆತದಲ್ಲಿ ಓಲಿ ಪೋಪ್‌ಗೆ ಕ್ಯಾಚ್‌ ನೀಡುವ ಮೂಲಕ ವಿಕೆಟ್‌ ಒಪ್ಪಿಸಿದರು.

ಟ್ರಾವಿಸ್‌ ಹೆಡ್‌ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು 8 ವಿಕೆಟ್‌ಗಳ ಜಯ ಸಾಧಿಸಿದೆ.

ಹೆಡ್‌ ಅವರ ಸ್ಪೋಟಕ ಶತಕವು ಹಲವು ದಾಖಲೆಗಳಿಗೆ ಕಾರಣವಾಯಿತು.

ಎರಡನೇ ವೇಗದ ಶತಕ: ಟ್ರಾವಿಸ್‌ ಹೆಡ್‌ 69 ಎಸೆತದಲ್ಲೇ ಶತಕ ಸಿಡಿಸುವ ಮೂಲಕ, ಆ್ಯಷಸ್‌ ಸರಣಿಯಲ್ಲಿ ಎರಡನೇ ಅತಿ ವೇಗದ ಶತಕ ಸಿಡಿಸಿದರು. 2006ರಲ್ಲಿ ಆ್ಯಡಂ ಗಿಲ್‌ಕ್ರಿಸ್ಟ್‌ 57 ಎಸೆತದಲ್ಲಿ ಶತಕ ಸಿಡಿಸಿದ್ದರು.

ಆಸೀಸ್‌ ಪರ 3ನೇ ವೇಗದ ಶತಕ: ಆಸ್ಟ್ರೇಲಿಯಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೂರನೇ ಅತಿ ವೇಗದ ಶತಕ ಇದಾಗಿದೆ. 57 ಎಸೆತದಲ್ಲಿ ಶತಕ ಸಿಡಿಸಿದ್ದ ಆ್ಯಡಂ ಗಿಲ್‌ಕ್ರಿಸ್ಟ್‌ ಮೊದಲ ಸ್ಥಾನದಲ್ಲಿದ್ದಾರೆ. ಜಾಕ್‌ ಜಾರ್ಜ್‌ 67 ಎಸೆತದಲ್ಲಿ ಶತಕ ಬಾರಿಸಿದ್ದರು. ಡೆವಿಡ್‌ ವಾರ್ನರ್‌ ಹಾಗೂ ಹೆಡ್‌ 69 ಎಸೆತದಲ್ಲಿ ಶತಕ ಸಿಡಿಸುವ ಮೂಲಕ ಜಂಟಿ 3ನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್‌ ಇತಿಹಾಸದಲ್ಲೇ 8ನೇ ವೇಗದ ಶತಕ: ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲಾದ 8ನೇ ವೇಗದ ಶತಕ ಇದಾಗಿದೆ. ಆಸೀಸ್‌ ವಿರುದ್ದ ಬ್ರೆಂಡನ್ ಮೆಕಲಮ್ 54 ಎಸೆತದಲ್ಲಿ ಶತಕ ಸಿಡಿಸಿದ್ದು, ವೇಗದ ಶತಕವಾಗಿದೆ.

ಆಸೀಸ್‌ ಪರ ಅತಿ ಹೆಚ್ಚು ಶತಕ: ಈ ದಶಕದಲ್ಲಿ ಆಸೀಸ್‌ ಪರ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎನ್ನುವ ಖ್ಯಾತಿಗೆ ಹೆಡ್‌ ಪಾತ್ರರಾಗಿದ್ದಾರೆ. 143 ಇನಿಂಗ್ಸ್‌ನಲ್ಲಿ 14 ಶತಕ ಸಿಡಿಸಿದ್ದಾರೆ.

ವೇಗದ ಶತಕ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರನೊಬ್ಬ ದಾಖಲಿಸಿದ ಜಂಟಿ ಅತಿ ವೇಗದ ಶತಕ ಇದಾಗಿದೆ. ಡೆವಿಡ್‌ ವಾರ್ನರ್‌ ಕೂಡ 69 ಎಸೆತದಲ್ಲೇ ಶತಕ ಸಿಡಿಸಿದ್ದರು.

ಚೇಸಿಂಗ್ ವೇಳೆ ವೇಗದ ಶತಕ: ಟೆಸ್ಟ್ ಕ್ರಿಕೆಟ್‌ನ 4ನೇ ಇನಿಂಗ್ಸ್‌ನಲ್ಲಿ ಚೇಸಿಂಗ್‌ ಮಾಡುವ ವೇಳೆ ದಾಖಲಾದ ಅತಿವೇಗದ ಶತಕ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.