ADVERTISEMENT

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್: ಬುಮ್ರಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಅಶ್ವಿನ್

ಪಿಟಿಐ
Published 13 ಮಾರ್ಚ್ 2024, 12:13 IST
Last Updated 13 ಮಾರ್ಚ್ 2024, 12:13 IST
<div class="paragraphs"><p>ರವಿಚಂದ್ರನ್ ಅಶ್ವಿನ್</p></div>

ರವಿಚಂದ್ರನ್ ಅಶ್ವಿನ್

   

ಪಿಟಿಐ ಚಿತ್ರ

ದುಬೈ: ತಮ್ಮ ನೂರನೇ ಟೆಸ್ಟ್‌ನಲ್ಲಿ ಪಡೆದ 9 ವಿಕೆಟ್‌ಗಳ ನೆರವಿನಿಂದ ಆಫ್ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್, ಬುಧವಾರ ಪ್ರಕಟವಾದ ಐಸಿಸಿ ರ‍್ಯಾಂಕಿಂಗ್‌ನ ಬೌಲರ್‌ಗಳ ಪಟ್ಟಿಯಲ್ಲಿ ಮರಳಿ ಅಗ್ರಸ್ಥಾನಕ್ಕೇರಿದ್ದಾರೆ. ನಾಯಕ ರೋಹಿತ್‌ ಶರ್ಮಾ ಬ್ಯಾಟರ್‌ಗಳ ಪಟ್ಟಿಯಲ್ಲಿ ಟಾಪ್‌ ಟೆನ್‌ಗೆ ಮರಳಿದ್ದು, ಆರನೇ ಸ್ಥಾನಕ್ಕೇರಿದ್ದಾರೆ.

ADVERTISEMENT

ಧರ್ಮಶಾಲಾದಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ಅಶ್ವಿನ್‌ ಉತ್ತಮ ಲಯ ಕಂಡುಕೊಂಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಕಬಳಿಸಿದ್ದ ಅವರು ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದು, ಭಾರತ ಟೆಸ್ಟ್‌ ಗೆಲುವಿನ ಅಂತರವನ್ನು 4–1ಕ್ಕೆ ಹೆಚ್ಚಿಸಿತ್ತು.

ಈ ಸಾಧನೆ ಅಶ್ವಿನ್ ಅವರಿಗೆ ಇದುವರೆಗೆ ಅಗ್ರಸ್ಥಾನದಲ್ಲಿದ್ದ ತಂಡದ ಸಹ ಆಟಗಾರ ಜಸ್‌ಪ್ರೀತ್‌ ಬೂಮ್ರಾ ಅವರನ್ನು ಹಿಂದೆಹಾಕಲು ನೆರವಾಗಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

ಧರ್ಮಶಾಲಾದಲ್ಲಿ ಶತಕ ಬಾರಿಸಿದ್ದ ರೋಹಿತ್ ಐದು ಸ್ಥಾನ ಬಡ್ತಿ ಪಡೆದು ಆರನೇ ಸ್ಥಾನಕ್ಕೇರಿದ್ದಾರೆ. ಅಗ್ರಸ್ಥಾನದಲ್ಲಿರುವ ಕೇನ್‌ ವಿಲಿಯಮ್ಸನ್‌ಗೂ ಅವರಿಗೂ 108 ಪಾಯಿಂಟ್‌ಗಳ ಅಂತರವಿದೆ.

ಯಶಸ್ವಿ ಜೈಸ್ವಾಲ್ ಎರಡು ಸ್ಥಾನ ಬಡ್ತಿ ಪಡೆದು ಎಂಟನೇ ಸ್ಥಾನದಲ್ಲಿದ್ದರೆ, ಶುಭಮನ್ ಗಿಲ್‌ 11 ಸ್ಥಾನಗಳಷ್ಟು ಮೇಲೇರಿ 20ನೇ ಸ್ಥಾನದಲ್ಲಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್‌.

ಬೂಮ್ರಾ ಅವರು ಆಸ್ಟ್ರೇಲಿಯಾದ ಪೇಸ್‌ ಬೌಲರ್ ಜೋಶ್‌ ಹ್ಯಾಜಲ್‌ವುಡ್‌ ಜೊತೆ ಎರಡನೇ ಸ್ಥಾನ ಹಂಚಿಆರು ವಿಎಕಟ್‌ ಕೊಂಡಿದ್ದಾರೆ. ಹ್ಯಾಜಲ್‌ವುಡ್‌ ಅವರು ನ್ಯೂಜಿಲೆಂಡ್‌ ವಿರುದ್ಧ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆರು ವಿಕೆಟ್‌ ಪಡೆದಿದ್ದರು.

ಧರ್ಮಶಾಲಾ ಟೆಸ್ಟ್‌ ಪಂದ್ಯದಲ್ಲಿ ಮಿಂಚಿದ್ದ ಕುಲದೀಪ್ ಯಾದವ್ ಕೂಡ 15 ಸ್ಥಾನ ಜಿಗಿದಿದ್ದು, 16ನೇ ಸ್ಥಾನದಲ್ಲಿ ನೆಲೆಸಿದ್ದಾರೆ. ಆ ಪಂದ್ಯದಲ್ಲಿ ಅವರು ಪಂದ್ಯದ ಆಟಗಾರನಾಗಿದ್ದರು. ನ್ಯೂಜಿಲೆಂಡ್‌ನ ವೇಗಿ ಮ್ಯಾಟ್‌ ಹೆನ್ರಿ ಕೂಡ ಆರು ಸ್ಥಾನ ಮೇಲೇರಿ 12ನೇ ಸ್ಥಾನದಲ್ಲಿದ್ದಾರೆ. ಇದು ಅವರ ಶ್ರೇಷ್ಠ ರ‍್ಯಾಂಕಿಂಗ್‌.

ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಅವರ ಅಗ್ರಸ್ಥಾನಕ್ಕೆ ಚ್ಯುತಿ ಬಂದಿಲ್ಲ. ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ (ಎಂಟನೇ) ಮತ್ತು ಮ್ಯಾಟ್‌ ಹೆನ್ನಿ (11ನೇ) ಕೂಡ ಬಡ್ತಿ ಪಡೆದವರಲ್ಲಿ ಒಳಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.