ADVERTISEMENT

ಏಷ್ಯಾ ಕಪ್‌: ಬಾಂಗ್ಲಾಗೆ ಅಫ್ಗನ್‌ ಸವಾಲು

ಆತ್ಮವಿಶ್ವಾಸದಲ್ಲಿ ನಬಿ ಬಳಗ

ಪಿಟಿಐ
Published 29 ಆಗಸ್ಟ್ 2022, 19:30 IST
Last Updated 29 ಆಗಸ್ಟ್ 2022, 19:30 IST
ಅಫ್ಗಾನಿಸ್ತಾನ ತಂಡದ ಫಜಲ್‌ಹಕ್‌ ಫರೂಕಿ
ಅಫ್ಗಾನಿಸ್ತಾನ ತಂಡದ ಫಜಲ್‌ಹಕ್‌ ಫರೂಕಿ   

ಶಾರ್ಜಾ: ಮೊದಲ ಪಂದ್ಯದಲ್ಲಿ ದೊರೆತ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಅಫ್ಗಾನಿಸ್ತಾನ ತಂಡ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಎರಡನೇ ಪಂದ್ಯದಲ್ಲಿ ಮಂಗಳವಾರ ಬಾಂಗ್ಲಾದೇಶವನ್ನು ಎದುರಿಸಲಿದೆ.

ಶ್ರೀಲಂಕಾ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿದ್ದ ಅಫ್ಗಾನಿಸ್ತಾನ, ಗೆಲುವಿನ ಓಟ ಮುಂದುವರಿಸುವ ತವಕಲ್ಲಿದೆ. ಮತ್ತೊಂದೆಡೆ ಶಕೀಬ್‌ ಅಲ್‌ ಹಸನ್‌ ನೇತೃತ್ವದ ಬಾಂಗ್ಲಾ ತಂಡ, ಶುಭಾರಂಭದ ನಿರೀಕ್ಷೆಯಲ್ಲಿದೆ.

ಟಿ20 ಮಾದರಿಯಲ್ಲಿ ಬಾಂಗ್ಲಾ ತಂಡ ಈಚೆಗೆ ಉತ್ತಮ ಪ್ರದರ್ಶನ ನೀಡಿಲ್ಲ. ಕಳೆದ ವಿಶ್ವಕಪ್‌ ಬಳಿಕ ಆಡಿದ್ದ 13 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಗೆಲುವು ಪಡೆದಿದೆ. ಆದ್ದರಿಂದ ಅಫ್ಗನ್‌ ಎದುರಿನ ಪಂದ್ಯವನ್ನು ಗಂಭೀರವಾಗಿ ತೆಗೆದುಕೊಂಡಿದೆ.

ADVERTISEMENT

ಲಂಕಾ ವಿರುದ್ಧ ಮಿಂಚಿದ್ದ ಅಫ್ಗಾನಿಸ್ತಾನದ ವೇಗದ ಬೌಲರ್‌ಗಳನ್ನು ಎದುರಿಸುವ ಸವಾಲು ಬಾಂಗ್ಲಾ ಬ್ಯಾಟರ್‌ಗಳ ಮುಂದಿದೆ. ಫಜಲ್‌ಹಕ್‌ ಫರೂಕಿ ಮತ್ತು ನವೀನ್‌ ಉಲ್‌ ಉಕ್‌ ಅವರು ಲಂಕಾ ತಂಡದ ಬೆನ್ನೆಲುಬು ಮುರಿದಿದ್ದರು.

‘ಟೂರ್ನಿಯ ಮೊದಲ ಪಂದ್ಯ ಮಹತ್ವದ್ದು. ಏಕೆಂದರೆ ಉತ್ತಮ ಆರಂಭ ಪಡೆದರೆ ಆಟಗಾರರ ಅತ್ಮವಿಶ್ವಾಸ ಹೆಚ್ಚುತ್ತದೆ’ ಎಂದು ಬಾಂಗ್ಲಾ ತಂಡದ ಆಲ್‌ರೌಂಡರ್‌ ಮೆಹೆದಿ ಹಸನ್‌ ಹೇಳಿದ್ದಾರೆ.

‘ಎರಡೂ ತಂಡಗಳಲ್ಲಿ ಉತ್ತಮ ಸ್ಪಿನ್ನರ್‌ಗಳು ಇರುವುದರಿಂದ ಇಲ್ಲಿನ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡಿದರೆ ಒಳ್ಳೆಯದು. ಅಫ್ಗನ್‌ ತಂಡ ನಮಗಿಂತ ಬಲಿಷ್ಠವೋ, ದುರ್ಬಲವೋ ಎಂಬ ಬಗ್ಗೆ ನಾನು ಅಭಿಪ್ರಾಯ ಹೇಳುವುದಿಲ್ಲ. ಪಂದ್ಯದ ದಿನ ಉತ್ತಮ ಆಟವಾಡುವ ತಂಡ ಗೆಲ್ಲುತ್ತದೆ’ ಎಂದಿದ್ದಾರೆ.

ಶನಿವಾರ ನಡೆದಿದ್ದ ಪಂದ್ಯದಲ್ಲಿ ಅಫ್ಗಾನಿಸ್ತಾನ, ಶ್ರೀಲಂಕಾ ತಂಡವನ್ನು 105 ರನ್‌ಗಳಿಗೆ ಆಲೌಟ್‌ ಮಾಡಿತ್ತು. ಆ ಬಳಿಕ ಕೇವಲ 10.1 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಈ ಗುರಿಯನ್ನು ತಲುಪಿತ್ತು.

ಪಂದ್ಯ ಆರಂಭ: ಸಂಜೆ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.