ADVERTISEMENT

Asia Cup: ಭಾರತಕ್ಕೆ ಸುಲಭದ ತುತ್ತಾಗದ ಒಮಾನ್‌

ಪಿಟಿಐ
Published 20 ಸೆಪ್ಟೆಂಬರ್ 2025, 0:16 IST
Last Updated 20 ಸೆಪ್ಟೆಂಬರ್ 2025, 0:16 IST
<div class="paragraphs"><p>ಅರ್ಧಶತಕ ಗಳಿಸಿದ ಸಂಜು ಸ್ಯಾಮ್ಸನ್‌ ಬ್ಯಾಟಿಂಗ್ ವೈಖರಿ</p></div>

ಅರ್ಧಶತಕ ಗಳಿಸಿದ ಸಂಜು ಸ್ಯಾಮ್ಸನ್‌ ಬ್ಯಾಟಿಂಗ್ ವೈಖರಿ

   

ಕೃಪೆ: X / @BCCI

ಅಬುಧಾಬಿ: ಏಕಪಕ್ಷೀಯ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತ ತಂಡಕ್ಕೆ ‘ಅನನುಭವಿ’ ಒಮಾನ್‌ ಸುಲಭವಾಗಿ ಮಣಿಯಲಿಲ್ಲ. ಶುಕ್ರವಾರ ನಡೆದ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಪಡೆ 21 ರನ್‌ಗಳ ಪ್ರಯಾಸದ ಜಯ ಗಳಿಸಿತು.

ADVERTISEMENT

ಭಾರತಕ್ಕೆ ನಿರ್ಣಾಯಕವಲ್ಲದ ಈ ಪಂದ್ಯದಲ್ಲಿ ಒಮಾನ್‌ ಸುಲಭದ ಸುತ್ತಾಗ ಬಹುದೆಂಬ ನಿರೀಕ್ಷೆಯಿತ್ತು. ಆದರೆ, ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದ್ದ ಒಮಾನ್‌ ತಂಡವು ನಿರೀಕ್ಷೆಗೂ ಮೀರಿ ಪ್ರತಿರೋಧ ತೋರಿ ಗಮನ ಸೆಳೆಯಿತು. ಪ್ರಬಲ ಭಾರತ ತಂಡವನ್ನು 200ರೊಳಗೆ ನಿಯಂತ್ರಿಸಿದ್ದ ಒಮಾನ್, ಬ್ಯಾಟಿಂಗ್‌ನಲ್ಲೂ ಉತ್ತಮ ನಿರ್ವಹಣೆ ತೋರಿತು.

ಭಾರತ ತಂಡವು ಈ ಮೊದಲೇ ಸೂಪರ್‌ ಫೋರ್‌ ಹಂತಕ್ಕೆ ಸ್ಥಾನ ಕಾಯ್ದಿರಿಸಿತ್ತು. ಹೀಗಾಗಿ ಸೂರ್ಯಕುಮಾರ್‌ ಅವರು ಬ್ಯಾಟಿಂಗ್‌ಗೆ ಇಳಿಯದೆ ಉಳಿದ ಆಟಗಾರರಿಗೆ ‘ಅಭ್ಯಾಸ’ಕ್ಕೆ ಅವಕಾಶ ಮಾಡಿಕೊಟ್ಟರು. ವೇಗಿ ಜಸ್‌ಪ್ರೀತ್‌ ಬೂಮ್ರಾ ಮತ್ತು ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಅವರಿಗೆ ವಿಶ್ರಾಂತಿ ನೀಡಿ ಅರ್ಷದೀಪ್‌ ಸಿಂಗ್‌ ಮತ್ತು ಹರ್ಷಿತ್‌ ರಾಣಾಗೆ ಅವಕಾಶ ನೀಡಲಾಗಿತ್ತು. 

ಭಾರತ ನೀಡಿದ್ದ 189 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಒಮಾನ್‌ 4 ವಿಕೆಟ್‌ಗೆ 167 ರನ್‌ ಗಳಿಸಿ ಹೋರಾಟವನ್ನು ಮುಗಿಸಿತು. ಮೊದಲ ವಿಕೆಟ್‌ಗೆ ನಾಯಕ ಜತೀಂದರ್‌ ಸಿಂಗ್‌ (32) ಮತ್ತು ಆಮಿರ್‌ ಕಲೀಂ(64;46ಎ) ಅವರು 56 ರನ್‌ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಜತೀಂದರ್‌ ಔಟಾದ ಬಳಿಕ ಕಲೀಂ ಅವರನ್ನು ಸೇರಿಕೊಂಡ ಹಮ್ಮದ್‌ ಮಿರ್ಜಾ (51;33ಎ) ಅವರು ವೇಗದ ಮತ್ತು ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿ, ಎರಡನೇ ವಿಕೆಟ್‌ಗೆ 93 (55ಎ) ಸೇರಿಸಿ ಭಾರತದ ಪಾಳಯದಲ್ಲಿ ಆತಂಕ ಮೂಡಿಸಿದರು. ಆದರೆ, ಬೀಸಾಟವಾಡುತ್ತಿದ್ದ ಕಲೀಂ 18ನೇ ಓವರಿನಲ್ಲಿ ಔಟಾದ ಬಳಿಕ ಪಂದ್ಯದ ಮೇಲೆ ಭಾರತ ಮರಳಿ ಹಿಡಿತ ಸಾಧಿಸಿತು.

ಅರ್ಷದೀಪ್‌ ಸಿಂಗ್‌ ಅವರು ಟಿ20 ಮಾದರಿಯಲ್ಲಿ 100 ವಿಕೆಟ್‌ಗಳ (64 ಪಂದ್ಯ) ಮೈಲಿಗಲ್ಲು ತಲುಪಿದರು.

ಇದಕ್ಕೂ ಮೊದಲು ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ದುಕೊಂಡಿತು. ವಿಕೆಟ್‌ ಕೀಪರ್ ಸಂಜು ಸ್ಯಾಮ್ಸನ್ (56, 45ಎ) ತಮಗೆ ದೊರೆತ ಅವಕಾಶವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡು ಅರ್ಧ ಶತಕ ಬಾರಿಸಿದರು. ಹೀಗಾಗಿ, ಭಾರತ 8 ವಿಕೆಟ್‌ಗೆ 188 ರನ್‌ ಗಳಿಸಿತು.

ಉಪನಾಯಕ ಶುಭಮನ್‌ ಗಿಲ್‌(5) ಬೇಗನೇ ನಿರ್ಗಮಿಸಿದರು. ಈ ಟೂರ್ನಿಯಲ್ಲಿ ಮೊದಲ ಬಾರಿ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದ ಸಂಜು ತಮ್ಮ ಎಂದಿನ ಲಹರಿಯಲ್ಲಿ ಆಡದಿದ್ದರೂ ಉಪಯುಕ್ತ ಕಾಣಿಕೆ ನೀಡಿ ದರು. ಕೊಂಚ ಮಂದಗತಿಯ ಪಿಚ್‌ನಲ್ಲಿ ವಿಶ್ವಾಸದಿಂದ ಆಡಿ ತಲಾ ಮೂರು ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿದರು.  

ಅಭಿಷೇಕ್ ಶರ್ಮಾ (38, 15ಎ, 4x5, 6x2) ಎಂದಿನ ರೀತಿಯಲ್ಲಿ ಬೀಸಾಟವಾಡಿದರು. ಎಂಟನೇ ಓವರ್‌ ನಲ್ಲಿ ರಾಮನಂದಿ ಬೌಲಿಂಗ್‌ನಲ್ಲಿ ಆಫ್‌ಸೈಡ್‌ ಆಚೆ ಹೋಗುತ್ತಿದ್ದ ಚೆಂಡನ್ನು ಹೊಡೆಯಲು ಹೋಗಿ ವಿಕೆಟ್‌ ಕೀಪರ್‌ ವಿನಾಯಕ ಶುಕ್ಲಾಗೆ ಕ್ಯಾಚಿತ್ತರು. ಅಭಿಷೇಕ್‌–ಸಂಜು ಎರಡನೇ ವಿಕೆಟ್‌ಗೆ 66 ರನ್‌ ಜತೆಯಾಟ ಆಡಿದರು.

ಏಳನೇ ಕ್ರಮಾಂಕದಲ್ಲಿ ಆಡಿದ ತಿಲಕ್‌ ವರ್ಮಾ (29, 18ಎ) ಕೂಡ ವೇಗವಾಗಿ ರನ್ ಗಳಿಸಿದರು. ಟಾಸ್‌ ಗೆದ್ದು ಬ್ಯಾಟಿಂಗಿಗೆ ಇಳಿಯುವಾಗಲೇ ಭಾರತ, ಪಾಕ್‌ ವಿರುದ್ಧದ ಪಂದ್ಯಕ್ಕೆ ಅಭ್ಯಾಸವಾಗಿ ಪೂರ್ಣ 20 ಓವರುಗಳನ್ನು ಆಡುವ ಗುರಿಹೊಂದಿದಂತೆ ಕಂಡಿತ್ತು.

ಒಮಾನ್‌ ವೇಗಿಗಳಾದ ಶಾ ಫೈಸಲ್, ಜಿತೆನ್ ರಾಮನಂದಿ, ಎಡಗೈ ಸ್ಪಿನ್ನರ್ ಅಮೀರ್ ಕಲೀಮ್ ಅವರು ತಲಾ ಎರಡು ವಿಕೆಟ್‌ಗಳನ್ನು ಪಡೆದು ಭಾರತ ನಾಗಾಲೋಟದಲ್ಲಿ ಸಾಗದಂತೆ ಕಡಿವಾಣ ಹಾಕಿದರು.

ಸ್ಕೋರುಗಳು

ಭಾರತ: 20 ಓವರುಗಳಲ್ಲಿ 8 ವಿಕೆಟ್‌ಗೆ 188 (ಅಭಿಷೇಕ್‌ ಶರ್ಮಾ 38, ಸಂಜು ಸ್ಯಾಮ್ಸನ್‌ 56, ತಿಲಕ್‌ ವರ್ಮಾ 29; ಶಾ ಫೈಸಲ್ 23ಕ್ಕೆ2, ಜಿತೆನ್ ರಾಮನಂದಿ 33ಕ್ಕೆ2, ಆಮಿರ್ ಕಲೀಂ 31ಕ್ಕೆ2)

ಒಮಾನ್‌: 20 ಓವರುಗಳಲ್ಲಿ 4 ವಿಕೆಟ್‌ಗೆ 167 (ಜತೀಂದರ್‌ ಸಿಂಗ್‌ 32, ಆಮಿರ್ ಕಲೀಂ 64, ಹಮ್ಮದ್‌ ಮಿರ್ಜಾ 51; ಹಾರ್ದಿಕ್‌ ಪಾಂಡ್ಯ 26ಕ್ಕೆ2)

ಫಲಿತಾಂಶ: ಭಾರತಕ್ಕೆ 21 ರನ್‌ಗಳ ಜಯ

ಪಂದ್ಯದ ಆಟಗಾರ: ಸಂಜು ಸ್ಯಾಮ್ಸನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.