ಏಷ್ಯಾ ಕಪ್
(ಚಿತ್ರ ಕೃಪೆ: X/@ACCMedia1)
ದುಬೈ: ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಮಂಗಳವಾರ ಇಲ್ಲಿ ಆರಂಭವಾಗುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಫೇವರಿಟ್ ಆಗಿದೆ ಎನ್ನುವುದು ನಿಜ. ಆದರೆ ಅದಕ್ಕಿಂತ ಮುಖ್ಯವಾಗಿ ಭಾರತ ತಂಡಕ್ಕೂ, ಪಾಕಿಸ್ತಾನ ಸೇರಿದಂತೆ ಇತರ ಏಳು ತಂಡಗಳಿಗೂ ಸಾಕಷ್ಟು ಅಂತರವಿದೆ ಎನ್ನುವುದೇ ಸೂಕ್ತ.
ಅಫ್ಗಾನಿಸ್ತಾನ ತಂಡವು, ಅಬುಧಾಬಿಯಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಂಗ್‌ಕಾಂಗ್ ತಂಡವನ್ನು ಎದುರಿಸಲಿದೆ. ಆದರೆ ಎಲ್ಲರ ಕಣ್ಣು ಇರುವುದು ದುಬೈ ಮೇಲೆ. ಇಲ್ಲಿ ತಾರಾಖಚಿತ ಭಾರತ ತಂಡ ಬುಧವಾರ ನಡೆಯುವ ಪಂದ್ಯದಲ್ಲಿ ಯುಎಇ ತಂಡವನ್ನು ಸದೆಬಡಿದು ಅಭಿಯಾನ ಆರಂಭಿಸುವ ಗುರಿಹೊಂದಿದೆ.
ಭಾರತ ತಂಡದ ಮೇಲೆ ನಿರೀಕ್ಷೆಯ ಭಾರವಿದೆ. ಈ ಟೂರ್ನಿಯ ದಾಖಲೆಗಳತ್ತ ಕಣ್ಣುಹೊರಳಿಸಿದರೆ, ತಂಡದ ನಿರ್ವಹಣೆ ಉತ್ತಮವಾಗಿದೆ. ಮಾತ್ರವಲ್ಲ, ಸಮತೋಲನದ ದೃಷ್ಟಿಯಿಂದಲೂ ತಂಡ ಸಶಕ್ತವಾಗಿದೆ.
ಭಾರತ ತಂಡದಲ್ಲಿ ಪ್ರತಿಭೆಗಳು ಹೇರಳವಾಗಿವೆ. ಏಷ್ಯಾ ಕಪ್‌ಗೆ 17 ಸದಸ್ಯರ ತಂಡವನ್ನು ಆಯ್ಕೆ ಮಾಡುವ ಅವಕಾಶ ಆಯ್ಕೆ ಸಮಿತಿಗೆ ಇತ್ತು. ಆದರೆ ಸಮಿತಿಗೆ ಎಷ್ಟೊಂದು ವಿಶ್ವಾಸ ಮತ್ತು ಭರವಸೆಯಿತ್ತು ಎಂದರೆ ಅದು 15 ಮಂದಿಯ ತಂಡವನ್ನು ಆಯ್ಕೆ ಮಾಡಿತು. ಅನುಭವಿ ಶ್ರೇಯಸ್ ಅಯ್ಯರ್ ಮತ್ತು ಯಶಸ್ವಿ ಜೈಸ್ವಾಲ್ ಅಂಥ ಆಟಗಾರರನ್ನೇ ಕೈಬಿಟ್ಟಿತು.
ಭಾರತ ಈ ಹಿಂದೆ ಎಂಟು ಬಾರಿ (ಏಳು ಬಾರಿ ಏಕದಿನ ಮಾದರಿ, ಒಮ್ಮೆ ಟಿ20 ಮಾದರಿ) ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಒಂಬತ್ತನೇ ಬಾರಿ ಗೆದ್ದರೂ ಅದು ಸೂರ್ಯಕುಮಾರ್ ಅವರಿಗಾಗಲಿ, ಹೆಡ್ ಕೋಚ್ ಗೌತಮ್ ಗಂಭೀರ್ ಅವರಿಗಾಗಲಿ ಹೆಚ್ಚಿನ ಶ್ರೇಯಸ್ಸು ತಂದುಕೊಡದು. ಆದರೆ, ಟಿ20 ವಿಶ್ವಕಪ್‌ಗೆ ಕೆಲವೇ ತಿಂಗಳು ಇರುವಾಗ ಭಾರತವು ಈಗ ಟ್ರೋಫಿ ಗೆಲ್ಲದೇ ಹೋದರೆ ಟೀಕೆಗಳಿಗೆ ಆಹಾರವಾಗಲಿದೆ.
2026ರ ಫೆಬ್ರುವರಿ–ಮಾರ್ಚ್‌ನ ವಿಶ್ವಕಪ್ ಆರಂಭಕ್ಕೆ ಮುನ್ನ, ಭಾರತ ತಂಡಕ್ಕೆ (ಇಲ್ಲಿ ಫೈನಲ್ ತಲುಪಿದಲ್ಲಿ) ಸುಮಾರು 20 ಪಂದ್ಯಗಳು ಆಡಲು ಇವೆ. ಈ ಅವಧಿಯಲ್ಲಿ ವಿಶ್ವಕಪ್‌ಗೆ ಸೂಕ್ತ ರೀತಿಯಲ್ಲಿ ಸಂಯೋಜನೆ ಕಂಡುಕೊಳ್ಳುವುದು ತಂಡದ ಮುಂದಿರುವ ಗುರಿ.
ಸೂರ್ಯ ಅವರು ನಾಯಕರಾಗಿ ಶೇ 80 ವಿಜಯದ ದಾಖಲೆ ಹೊಂದಿದ್ದಾರೆ. ಈಗ ಅವರ ತಂಡದಲ್ಲಿ ಉಪನಾಯಕ ಶುಭಮನ್ ಗಿಲ್ ಇದ್ದಾರೆ. ಮುಂಬರುವ ವರ್ಷಗಳಲ್ಲಿ ಗಿಲ್, ಮುಂಬೈನ ಆಟಗಾರನಿಂದ ನಾಯಕತ್ವದ ಹೊಣೆ ವಹಿಸಬಹುದು.
ಭಾರತ ತಂಡಕ್ಕೆ ಯಾರಿಂದ ಸವಾಲು ಎದುರಾಗಬಹುದು ಎಂಬ ಪ್ರಶ್ನೆಗೆ ಉತ್ತರ ಸುಲಭವಲ್ಲ. ಸಲ್ಮಾನ್ ಅಲಿ ಅಘಾ ನೇತೃತ್ವದ ಪಾಕಿಸ್ತಾನ ತಂಡ ಹೊಸಬರಿಂದ ಕೂಡಿದೆ. ಶ್ರೀಲಂಕಾ ತಂಡ ಪರಿವರ್ತನೆಯ ಹಂತದಲ್ಲಿದೆ.
ಪಾಕ್ ತಂಡ, ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಕೈಬಿಟ್ಟು, ಹೆಸರುಗಳು ಮುಖ್ಯವಲ್ಲ ಎಂಬ ಸಂದೇಶ ರವಾನಿಸಿದೆ. ಆದರೆ ಆ ತಂಡದ ಯಶಸ್ಸು, ಶಹೀನ್ ಶಾ ಅಫ್ರೀದಿ, ಹ್ಯಾರಿಸ್ ರವೂಫ್ ಮತ್ತು ಹಸನ್ ಅಲಿ ಅವರ ಬೌಲಿಂಗ್ ಪಡೆಯ ಮೇಲಿದೆ.
ತ್ರಿಕೋನ ಸರಣಿಯ ಫೈನಲ್‌ನಲ್ಲಿ ಭಾನುವಾರ 75 ರನ್‌ಗಳಿಂದ ಅಫ್ಗಾನಿಸ್ತಾನ ತಂಡವನ್ನು ಸೋಲಿಸಿರುವ ಕಾರಣ ಪಾಕಿಸ್ತಾನ ಸ್ವಲ್ಪ ಉತ್ಸಾಹದಲ್ಲಿದೆ. ಶಾರ್ಜಾದ ಮಂದಗತಿಯ ಟ್ರ್ಯಾಕ್‌ನಲ್ಲಿ ಪಾಕ್ ಸ್ಪಿನ್ನರ್‌ಗಳು ಕೈಚಳಕ ತೋರಿದ್ದರು.
ಚರಿತ್ ಅಸಲಂಕಾ ನೇತೃತ್ವವದ ಶ್ರೀಲಂಕಾವನ್ನು ದುರ್ಬಲವೆಂದು ಹೇಳುವಂತಿಲ್ಲ. ಆದರೆ ಆರರಿಂದ ಏಳು ಪಂದ್ಯಗಳನ್ನು ಗೆಲ್ಲುವ ಸ್ಥಿರ ಪ್ರದರ್ಶನ ನೀಡಲು ಅದು ಸಮರ್ಥವೇ ಎಂಬ ಪ್ರಶ್ನೆಯಿದೆ. ಬಾಂಗ್ಲಾದೇಶ ಅನುಭವಿಗಳನ್ನು ಕಳೆದುಕೊಂಡಿದೆ. ಬಿ ಗುಂಪಿನಲ್ಲಿ ಲಂಕಾ, ಅಫ್ಗಾನಿಸ್ತಾನ ಮೇಲ್ನೋಟಕ್ಕೆ ಶಕ್ತ ತಂಡವಾಗಿ ಕಾಣುತ್ತಿದೆ.
ಅಫ್ಗನ್ ಸ್ಪಿನ್ನರ್‌ಗಳಾದ ರಶೀದ್ ಖಾನ್, ನೂರ್ ಅಹ್ಮದ್ ಮತ್ತು ಉದಯೋನ್ಮುಖ ಆಟಗಾರ ಘಜನ್‌ಫರ್ ಅವರು ಮಧ್ಯಮ ಹಂತದ ಓವರುಗಳಲ್ಲಿ ಸವಾಲಾಗಬಲ್ಲವರು. ಅದರ ಬ್ಯಾಟಿಂಗ್ ಸರದಿಯೂ ಶಕ್ತವಾಗಿದೆ.
ಆತಿಥೇಯ ಯುಎಇ, ಹಾಂಗ್‌ಕಾಂಗ್ ತಂಡ ಒಮಾನ್ ತಂಡಗಳಿಗೆ ಇಲ್ಲಿ ಅನುಭವ ಸಂಪಾದಿಸುವ ಅವಕಾಶ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.