ADVERTISEMENT

ಏಷ್ಯಾ ಕಪ್ ಟಿ20 ಕ್ರಿಕೆಟ್: ನಾಲ್ಕರ ಘಟ್ಟಕ್ಕೂ ಮುನ್ನ ಭಾರತಕ್ಕೆ ‘ಅಭ್ಯಾಸ’

ಏಷ್ಯಾ ಕಪ್ ಟಿ20 ಕ್ರಿಕೆಟ್: ಸೂರ್ಯ ಬಳಗಕ್ಕೆ ಒಮನ್ ಎದುರಾಳಿ

ಪಿಟಿಐ
Published 18 ಸೆಪ್ಟೆಂಬರ್ 2025, 15:26 IST
Last Updated 18 ಸೆಪ್ಟೆಂಬರ್ 2025, 15:26 IST
ಅಭಿಷೇಕ್ ಶರ್ಮಾ 
ಅಭಿಷೇಕ್ ಶರ್ಮಾ    

ದುಬೈ: ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತ ಪ್ರವೇಶಿಸಿ ಆಗಿದೆ. ಅದಕ್ಕೂ ಮುನ್ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಒಮನ್ ತಂಡವನ್ನು ಶುಕ್ರವಾರ ಎದುರಿಸಲಿದೆ. 

ಅಬುಧಾಬಿಯಲ್ಲಿ ನಡೆಯಲಿರುವ ಈ ಪಂದ್ಯವು ಭಾರತಕ್ಕೆ ಅಭ್ಯಾಸ ಪಂದ್ಯವಾಗುವ ಸಾಧ್ಯತೆ ಇದೆ. ಭಾನುವಾರ ನಡೆಯುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತ ತಂಡವು ತನ್ನ ಬದ್ಧ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಎ ಗುಂಪಿನ ಪಂದ್ಯದಲ್ಲಿ ಸೂರ್ಯ ಬಳಗವು ಪಾಕ್ ವಿರುದ್ಧ ಜಯಿಸಿತ್ತು. 

ಕಳೆದೆರಡೂ ಪಮದ್ಯಗಳಲ್ಲಿ ಭಾರತದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಅಬ್ಬರದ ಆರಂಭ ನೀಡಿದ್ದರು. ಶುಭಮನ್ ಗಿಲ್ ಅವರು ಸ್ವಲ್ಪ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಪ್ರಯತ್ನಿಸಬೇಕು. ಪಾಕ್ ಎದುರಿನ ಪಂದ್ಯದಲ್ಲಿ ನಾಯಕ ಸೂರ್ಯ ಮಿಂಚಿದ್ದರು. ಆದರೆ ತಿಲಕ್ ವರ್ಮಾ ಅವರು ಲಯಕ್ಕೆ ಮರಳುವ ಅಗತ್ಯವಿದೆ.

ADVERTISEMENT

ಮಧ್ಯಮಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಅವರು ಕೂಡ ತಮಗೆ ಬ್ಯಾಟಿಂಗ್ ಮಾಡುವ ಅವಕಾಶ ದೊರೆತರೆ ಒಂದಿಷ್ಟು ರನ್‌ಗಳನ್ನು ಪೇರಿಸಲು ಪ್ರಯತ್ನಿಸಬಹುದು. ಏಕೆಂದರೆ; ಮುಂಬರುವ ಏಳು ದಿನಗಳಲ್ಲಿ ಮುರು ಪಂದ್ಯಗಳಲ್ಲಿ ಭಾರತ ಆಡಲಿದೆ. ಅರ್ಹತೆ ಗಿಟ್ಟಿಸಿದರೆ ಫೈನಲ್ ಕೂಡ ಆಡಬಹುದು. 

ಜತೀಂದರ್ ಸಿಂಗ್ ನಾಯಕತ್ವದ ಒಮನ್ ತಂಡವು ಮೊದಲು ಬ್ಯಾಟಿಂಗ್ ಮಾಡಿದರೆ, ಭಾರತದ ಬಲಾಢ್ಯ ಬೌಲಿಂಗ್ ಪಡೆಯನ್ನು ಎದುರಿಸುವುದು ಕಷ್ಟ. ಒಮನ್ ತಂಡವು ಆಡಿರುವ ಕಳೆದ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ 67 ಹಾಗೂ 130 ರನ್‌ ಗಳಿಸಿತ್ತು. ಭಾರತದ ಸ್ಪಿನ್ ಜೋಡಿ  ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತು  ವರುಣ್ ಚಕ್ರವರ್ತಿ ಅವರು ಇದುವರೆಗೂ ಬಹಳ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ್ದಾರೆ. ಜೊತೆಯಾಟಗಳಿಗೆ ಕಡಿವಾಣ ಹಾಕಿದ್ದಾರೆ. 

ಒಮನ್ ತಂಡದ ಯಾವ ಬ್ಯಾಟರ್‌ ಕೂಡ ಟೂರ್ನಿಯಲ್ಲಿ 30 ರನ್‌ಗಿಂತ ಹೆಚ್ಚಿನ ವೈಯಕ್ತಿಕ ಸ್ಕೋರ್ ದಾಖಲಿಸಿಲ್ಲ. ಪಾಕ್ ವಿರುದ್ಧದ ಪಂದ್ಯದಲ್ಲಿ ಹಮ್ಮದ್ ಮಿರ್ಜಾ 27 ರನ್ ಮತ್ತು ಆರ್ಯನ್ ಬಿಷ್ಟ್ ಅವರು ಯುಎಇ ವಿರುದ್ಧ  24 ರನ್ ಗಳಿಸಿದ್ದರು. 

ಭಾರತ ತಂಡದ ಮುಖ್ಯ ಕೋಚ್ ಈ ಪಂದ್ಯದಲ್ಲಿ ತಂಡ ಸಂಯೋಜನೆಯಲ್ಲಿ ಪ್ರಯೋಗ ಮಾಡುವ ಸಾಧ್ಯತೆ ಕಡಿಮೆ. ಆದರೆ ವೇಗಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ಮಾತ್ರ ವಿಶ್ರಾಂತಿ ನೀಡುವ ಸಾಧ್ಯತೆಯೂ ಇದೆ. ಆದ್ದರಿಂದ ಹರ್ಷಿತ್ ರಾಣಾಗೆ ಆಡುವ ಅವಕಾಶ ಸಿಗಬಹುದು. 

ಪಂದ್ಯ ಆರಂಭ: ರಾತ್ರಿ 8

ನೇರಪ್ರಸಾರ: 

ಕುಲದೀಪ್ ಯಾದವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.