ಲಾಹೋರ್: ‘ನನ್ನ ಒಪ್ಪಿಗೆಯಿಲ್ಲದೆ ಯಾರೂ ಕೂಡ ಏಷ್ಯಾ ಕಪ್ ಟ್ರೋಫಿಯನ್ನು ಮುಟ್ಟುವಂತಿಲ್ಲ’ ಎಂದು ಎಸಿಸಿ ಅಧ್ಯಕ್ಷ ಮೊಹಸಿನ್ ನಖ್ವಿ ಅವರು ಆದೇಶಿಸಿದ್ದಾರೆ.
ಸೆ.28 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಫೈನಲ್ ಪಂದ್ಯದ ನಂತರ, ಎಸಿಸಿ ಅಧ್ಯಕ್ಷ ಮೊಹಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತೀಯ ಆಟಗಾರರು ನಿರಾಕರಿಸಿದ್ದರು. ನಂತರ ಟ್ರೋಫಿಯನ್ನು ನಖ್ವಿಯೇ ಕೊಂಡೊಯ್ದಿದ್ದರು.
‘ದುಬೈನ ಎಸಿಸಿ ಕಚೇರಿಯಲ್ಲಿ ಈಗಲೂ ಏಷ್ಯಾ ಕಪ್ ಟ್ರೋಫಿ ಇದೆ. ನನ್ನ ಉಪಸ್ಥಿತಿ ಹಾಗೂ ಒಪ್ಪಿಗೆಯಿಲ್ಲದೆ ಅದನ್ನು ಸ್ಥಳಾಂತರಿಸುವಂತಿಲ್ಲ ಎಂದು ಮೊಹಸಿನ್ ನಖ್ವಿ ಆದೇಶಿಸಿದ್ದಾರೆ’ ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಮೊಹಸಿನ್ ನಖ್ವಿ ಅವರ ನಡೆಯ ಕುರಿತು ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿದ್ದು, ಮುಂದಿನ ಐಸಿಸಿ ಸಭೆಯಲ್ಲಿ ಈ ವಿಷಯದ ಕುರಿತು ಧ್ವನಿ ಎತ್ತುವ ಸಾಧ್ಯತೆಯಿದೆ.
ಆಪರೇಷನ್ ಸಿಂಧೂರ ನಂತರ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಬಿಗಡಾಯಿಸಿದ್ದು, ಈ ಬಾರಿಯ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕ್ ಆಟಗಾರರಿಗೆ ಹಸ್ತಲಾಘವ ಮಾಡಲು ಭಾರತೀಯ ಆಟಗಾರರು ನಿರಾಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.