ADVERTISEMENT

ಏಷ್ಯಾ ಕಪ್‌: ಕೊಹ್ಲಿ, ಸೂರ್ಯಕುಮಾರ್‌ ಯಾದವ್‌ ಅಬ್ಬರಕ್ಕೆ ನಲುಗಿದ ಹಾಂಗ್‌ಕಾಂಗ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2022, 15:54 IST
Last Updated 31 ಆಗಸ್ಟ್ 2022, 15:54 IST
ಸೂರ್ಯಕುಮಾರ್‌ ಯಾದವ್‌
ಸೂರ್ಯಕುಮಾರ್‌ ಯಾದವ್‌   

ದುಬೈ: ಹಾಂಗ್‌ಕಾಂಗ್‌ ತಂಡವನ್ನು ಹಣಿಯಬಹುದು, ಸುಲಭವಾಗಿ ಗೆಲ್ಲಬಹುದು ಎಂಬ ನಿರೀಕ್ಷೆಯೊಂದಿಗೆ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಇಳಿದ ನಾಯಕ ರೋಹಿತ್‌ ಶರ್ಮಾ ಪಡೆಗೆ ಆರಂಭದಲ್ಲಿ ಪ್ರಬಲ ಪ್ರತಿರೋಧ ವ್ಯಕ್ತವಾಯಿತು. ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಹಾಂಗ್‌ಕಾಂಗ್‌ ತಂಡವು ಸಂಘಟಿತ ದಾಳಿ ಮೂಲಕ ಭಾರತ ತಂಡವು ಬೃಹತ್‌ ಮೊತ್ತವನ್ನು ಪೇರಿಸಲು ಸಾಧ್ಯವಾಗದಂತೆ ತಡೆಯುವ ಪ್ರಯತ್ನ ನಡೆಸಿತು.

ಆದರೆ ಮೂರನೇ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ವಿರಾಟ್‌ ಕೊಹ್ಲಿ ಮತ್ತು ಸೂರ್ಯಕುಮಾರ್‌ ಯಾದವ್‌ ಹಾಂಗ್‌ಕಾಂಗ್‌ ಪ್ರಯತ್ನಕ್ಕೆ ಅನಿರೀಕ್ಷಿತ ತಿರುಗೇಟು ನೀಡಿದರು. ಮೂರು ಸಿಕ್ಸರ್‌ ಒಳಗೊಂಡ ಆಕರ್ಷಕ ಅರ್ಧಶತಕ ಕೊಹ್ಲಿ ಬ್ಯಾಟ್‌ನಿಂದ ಹೊರಹೊಮ್ಮಿತು. ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿದ ಸೂರ್ಯಕುಮಾರ್‌ ಕೇವಲ 24 ಎಸೆತಗಳಿಗೆ 6 ಭರ್ಜರಿ ಸಿಕ್ಸರ್‌ ಒಳಗೊಂಡ 68 ರನ್‌ಗಳ ಕೊಡುಗೆ ನೀಡಿದರು.

ಆರಂಭಿಕ ಬ್ಯಾಟರ್‌ಗಳಾದ ಕೆ.ಎಲ್‌.ರಾಹುಲ್‌ ಮತ್ತು ರೋಹಿತ್‌ ಶರ್ಮಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಅಬ್ಬರಿಸುವ ಯತ್ನದಲ್ಲಿ ಕ್ರಮವಾಗಿ 36, 21 ರನ್‌ಗಳಿಗೆ ಔಟಾದರು. ರಾಹುಲ್‌ ಬ್ಯಾಟ್‌ನಿಂದ 2 ಸಿಕ್ಸರ್‌ ಮತ್ತು ರೋಹಿತ್‌ ಬ್ಯಾಟ್‌ನಿಂದ 1 ಸಿಕ್ಸರ್‌ ಸಿಡಿಯಿತು.2 ವಿಕೆಟ್‌ ನಷ್ಟಕ್ಕೆ 192 ರನ್‌ ಪೇರಿಸಿದ ಭಾರತ ಕಠಿಣ ಗೆಲುವಿನ ಗುರಿಯನ್ನು ನೀಡಿತು.

ADVERTISEMENT

ಹಾಂಗ್‌ಕಾಂಗ್‍‌ ಪರ ಆಯುಷ್‌ ಶುಕ್ಲಾ, ಮೊಹಮ್ಮದ್‌ ಘಾಜನ್‌ಫರ್‌ ತಲಾ 1 ವಿಕೆಟ್‌ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.