ADVERTISEMENT

Bihar Cricket: 24 ವರ್ಷದ ಹರ್ಷವರ್ಧನ್ ಬಿಹಾರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ

ಪಿಟಿಐ
Published 29 ಸೆಪ್ಟೆಂಬರ್ 2025, 14:38 IST
Last Updated 29 ಸೆಪ್ಟೆಂಬರ್ 2025, 14:38 IST
   

ಪಟ್ನಾ: ಬಿಹಾರ ಕ್ರಿಕೆಟ್‌ ಸಂಸ್ಥೆಯ (ಬಿಸಿಎ) ಅಧ್ಯಕ್ಷರಾಗಿ 24 ವರ್ಷದ ಹರ್ಷವರ್ಧನ್‌ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಅವರು, ಬಿಸಿಎ ಇತಿಹಾಸದಲ್ಲೇ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ.

ಚುನಾವಣಾಧಿಕಾರಿ ಎಂ. ಮುದಾಸ್ಸಿರ್‌ (ನಿವೃತ್ತ ಐಎಸ್ಎಸ್‌ ಅಧಿಕಾರಿ) ಅವರ ಮೇಲ್ವಿಚಾರಣೆಯಲ್ಲಿ ನಡೆದ ಚುನಾವಣೆ ವೇಳೆ ಹರ್ಷವರ್ಧನ್‌ ಹೆಸರನ್ನು ಘೋಷಿಸಲಾಗಿದೆ.

ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಹರ್ಷವರ್ಧನ್‌, 'ಬಿಸಿಎಗೆ ಅತ್ಯಂತ ಕಿರಿಯ ಅಧ್ಯಕ್ಷನಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಕರ್ತವ್ಯದ ಹೊಣೆಯನ್ನೂ ನೆನಪಿಸುತ್ತದೆ. ನಾನು ಹೊಸ ತಲೆಮಾರಿನ ಕ್ರಿಕೆಟ್‌ ಆಡಳಿತಗಾರರ ಪ್ರತಿನಿಧಿಯಾಗಿದ್ದೇನೆ. ನಮ್ಮ ತಂಡದೊಂದಿಗೆ ಒಟ್ಟಾಗಿ ಕೆಲಸ ಮಾಡಲಿದ್ದೇನೆ. ರಾಜ್ಯ ಕ್ರಿಕೆಟ್‌ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತೇನೆ' ಎಂದು ಭರವಸೆ ನೀಡಿದ್ದಾರೆ.

ADVERTISEMENT

ಹರ್ಷವರ್ಧನ್‌ ಅವರು ಬಿಸಿಎ ಮಾಜಿ ಅಧ್ಯಕ್ಷ ರಾಕೇಶ್ ತಿವಾರಿ ಅವರ ಪುತ್ರ.

ಪ್ರಿಯಾ ಕುಮಾರಿ ಅವರು ಉಪಾಧ್ಯಕ್ಷರಾಗಿ, ಜಿಯಾವುಲ್‌ ಅರ್ಫಿನ್‌ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಅಭಿಷೇಕ್‌ ನಂದನ್‌, ಜಂಟಿ ಕಾರ್ಯದರ್ಶಿಯಾಗಿ ರೋಹಿತ್‌ ಕುಮಾರ್‌ ಹೊಣೆ ನಿಭಾಯಿಸಲಿದ್ದಾರೆ.

'ಮೂಲಸೌಕರ್ಯ ಉತ್ತಮಪಡಿಸುವುದು, ರಾಜ್ಯದಾದ್ಯಂತ ಯುವ ಹಾಗೂ ಮಹತ್ವಾಕಾಂಕ್ಷಿ ಆಟಗಾರರಿಗೆ ಅವಕಾಶಗಳನ್ನು ಸೃಷ್ಟಿಸುವುದರ ಮೂಲಕ ಕ್ರಿಕೆಟ್‌ ಅನ್ನು ತಳಮಟ್ಟದಿಂದ ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ. ಎಲ್ಲರೂ ಒಂದಾಗಿ ಬಿಹಾರ ಕ್ರಿಕೆಟ್‌ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಬದ್ಧರಾಗಿದ್ದೇವೆ' ಎಂದು ಬಿಸಿಎ ಹೇಳಿಕೆ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.