ADVERTISEMENT

Test Cricket | ಆಸ್ಟ್ರೇಲಿಯಾ ಎ ನೆರವಿಗೆ ಕೊನ್ಸ್ಟಾಸ್‌, ಕ್ಯಾಂಪ್‌ಬೆಲ್

ಪಿಟಿಐ
Published 16 ಸೆಪ್ಟೆಂಬರ್ 2025, 13:28 IST
Last Updated 16 ಸೆಪ್ಟೆಂಬರ್ 2025, 13:28 IST
ಸ್ಯಾಮ್‌ ಕೊನ್ಸ್ಟಾಸ್‌
ಸ್ಯಾಮ್‌ ಕೊನ್ಸ್ಟಾಸ್‌   

ಲಖನೌ: ಸ್ಯಾಮ್‌ ಕೊನ್ಸ್ಟಾಸ್‌ ಬಿರುಸಿನ 109 ರನ್ ಬಾರಿಸಿ ಆಸ್ಟ್ರೇಲಿಯಾ ಎ ತಂಡ, ಮಂಗಳವಾರ ಆರಂಭವಾದ ಮೊದಲ ‘ಟೆಸ್ಟ್‌’ ಪಂದ್ಯದಲ್ಲಿ ತಮ್ಮ ತಂಡ 5 ವಿಕೆಟ್‌ಗೆ 337 ರನ್‌ಗಳ ಉತ್ತಮ ಮೊತ್ತ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಂದು ಹಂತದಲ್ಲಿ ಭಾರಿ ಮೊತ್ತದತ್ತ ದಾಪುಗಾಲಿಟ್ಟಿದ್ದ ಪ್ರವಾಸಿ ತಂಡಕ್ಕೆ ಸ್ಪಿನ್ನರ್ ಹರ್ಷ ದುಬೆ ಮೂರು ವಿಕೆಟ್ ಪಡೆದು ಕಡಿವಾಣ ಹಾಕಿದರು.

ಕಳೆದ ವರ್ಷದ ಕೊನೆಯಲ್ಲಿ ಭಾರತ ವಿರುದ್ಧ ಸರಣಿಯ ವೇಳೆ ಪದಾರ್ಪಣೆ ಮಾಡಿದ್ದ, 19 ವರ್ಷ ವಯಸ್ಸಿನ ಯುವತಾರೆ ಕೊನ್ಸ್ಟಾಸ್‌ 144 ಎಸೆತಗಳ ಆಟದಲ್ಲಿ ಹತ್ತು ಬೌಂಡರಿ, ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಮೊದಲ ವಿಕೆಟ್‌ಗೆ ಅವರು ಕ್ಯಾಂಪ್‌ಬೆಲ್‌ ಕೆಲ್ಲವೆ (88, 97ಎ) ಜೊತೆ ಕೇವಲ 37.1 ಓವರುಗಳಲ್ಲಿ 198 ರನ್ ಸೇರಿಸಿದ್ದರು. ಕೆಲ್ಲವೆ 10 ಬೌಂಡರಿ, ಎರಡು ಸಿಕ್ಸರ್ ಹೊಡೆದರು.

ಆದರೆ ಆರಂಭ ಆಟಗಾರರು ಸೇರಿದಂತೆ ನಾಲ್ವರು ಮುಂದಿನ 26 ರನ್‌ಗಳ ಅಂತರದಲ್ಲಿ ನಿರ್ಗಮಿಸಿದ್ದರಿಂದ ಭಾರತ ನಿಟ್ಟುಸಿರುಬಿಟ್ಟಿತು. ಕೊನ್ಸ್ಟಾಸ್ ಮತ್ತು ಟೆಸ್ಟ್‌ ತಂಡದ ಮಾಜಿ ಆಟಗಾರ ನಥಾನ್ ಮೆಕ್‌ಸ್ವೀನಿ (1) ಅವರ ವಿಕೆಟ್‌ಗಳನ್ನು ದುಬೆ (88ಕ್ಕೆ3) ಪಡೆದರು.

ADVERTISEMENT

ಕೂಪರ್ ಕಾನೊಲಿ (70 ಮತ್ತು ಲಿಯಾಮ್ ಸ್ಕಾಟ್‌ (ಅಜೇಯ 47) ಅವರು 113 ರನ್ ಸೇರಿಸಿ ಆತಿಥೇಯರು ಮೇಲುಗೈ ಪಡೆಯದಂತೆ ತಡೆದರು.

ಆಸ್ಟ್ರೇಲಿಯಾ ಈ ಪ್ರವಾಸದಲ್ಲಿ ನಾಲ್ಕು ದಿನಗಳ ಎರಡು ‘ಟೆಸ್ಟ್‌’ ಪಂದ್ಯಗಳನ್ನು ಆಡಲಿದೆ. ನಂತರ ಕಾನ್ಪುರಕ್ಕೆ ತೆರಳಿ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ ಎ: 73 ಓವರುಗಳಲ್ಲಿ 5ಕ್ಕೆ337 (ಸ್ಯಾಮ್‌ ಕೊನ್ಸ್ಟಾಸ್‌ 109, ಕ್ಯಾಂಪ್‌ಬೆಲ್‌ ಕೆಲ್ಲವೆ 88, ಕೂಪರ್‌ ಕಾನೊಲಿ 70, ಲಿಯಾಮ್ ಸ್ಕಾಟ್‌ ಔಟಾಗದೇ 47; ಹರ್ಷ ದುಬೆ 88ಕ್ಕೆ3, ಖಲೀಲ್ ಅಹ್ಮದ್ 46ಕ್ಕೆ1, ಗುರ್ನೂರ್‌ ಬ್ರಾರ್ 47ಕ್ಕೆ1) ವಿರುದ್ಧ ಭಾರತ ಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.