ADVERTISEMENT

ಮಹಿಳಾ ಕ್ರಿಕೆಟ್: ಕಿಮ್ ದಾಳಿಗೆ ಕುಸಿದ ಭಾರತ ಎ ತಂಡ

ಆಸ್ಟ್ರೇಲಿಯಾ ಎ ತಂಡಕ್ಕೆ ಸರಣಿ ಕೈವಶ

ಪಿಟಿಐ
Published 9 ಆಗಸ್ಟ್ 2025, 14:58 IST
Last Updated 9 ಆಗಸ್ಟ್ 2025, 14:58 IST
ಆಸ್ಟ್ರೇಲಿಯಾ ಎ ತಂಡದ ಕಿಮ್ ಗಾರ್ಥ್‌   –ಎಎಫ್‌ಪಿ ಚಿತ್ರ
ಆಸ್ಟ್ರೇಲಿಯಾ ಎ ತಂಡದ ಕಿಮ್ ಗಾರ್ಥ್‌   –ಎಎಫ್‌ಪಿ ಚಿತ್ರ   

ಮೆಕೆ, ಆಸ್ಟ್ರೇಲಿಯಾ: ವೇಗದ ಬೌಲರ್ ಕಿಮ್ ಗಾರ್ಥ್ ಅವರ ಅಮೋಘ ಬೌಲಿಂಗ್ ಬಲದಿಂದ ಆಸ್ಟ್ರೇಲಿಯಾ ಎ ಮಹಿಳೆಯರ ಕ್ರಿಕೆಟ್ ತಂಡವು  ಭಾರತ ಎ ವಿರುದ್ಧದ ಪಂದ್ಯದಲ್ಲಿ ಜಯಿಸಿತು. ಇದರೊಂದಿಗೆ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಗಳಿಸಿತು. 

ಶನಿವಾರ ನಡೆದ  ಎರಡನೇ ಪಂದ್ಯದಲ್ಲಿ ಭಾರತ ತಂಡವು ಟಾಸ್ ಗೆದ್ದಿತು. ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಲೀಸಾ ಹೀಲಿ (70; 44ಎಸೆತ) ಅವರ ಅರ್ಧಶತಕದ ಬಲದಿಂದ ಆಸ್ಟ್ರೇಲಿಯಾ ಎ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 187 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಹೀಲಿ ಮತ್ತು ತಹಲಿಯಾ ವಿಲ್ಸನ್ (43; 35ಎ)  ಅವರುಮೊದಲ ವಿಕೆಟ್ ಜೊತೆಯಾಟದಲ್ಲಿ 95 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.  

ಭಾರತ ಎ ತಂಡದ ಸ್ಪಿನ್ನರ್ ರಾಧಾ ಯಾದವ್ ಅವರು 11ನೇ ಓವರ್‌ನಲ್ಲಿ ತಹಲಿಯಾ ಮತ್ತು 15ನೇ ಓವರ್‌ನಲ್ಲಿ ಅಲೀಸಾ ವಿಕೆಟ್‌ಗಳನ್ನು ಗಳಿಸಿದರು. ಅನಿಕಾ ಲಿಯಾರಾಯ್ಡ್ (35; 21ಎ) ಮತ್ತು ಕರ್ಟ್ನಿ ವೆಬ್ (ಔಟಾಗದೇ 26; 13ಎ) ಅವರ ಬೀಸಾಟದ ಬಲದಿಂದ ದೊಡ್ಡ ಮೊತ್ತ ಪೇರಿಸಲು ಆತಿಥೇಯ ಬಳಗಕ್ಕೆ ಸಾಧ್ಯವಾಯಿತು. 

ADVERTISEMENT

ಗುರಿ ಬೆನ್ನಟ್ಟಿದ ಭಾರತ ಎ ತಂಡವು ಕಿಮ್ ಗಾರ್ಥ್ (7ಕ್ಕೆ4) ಅವರ ದಾಳಿಗೆ ತತ್ತರಿಸಿತು. 15.1 ಓವರ್‌ಗಳಲ್ಲಿ 73 ರನ್ ಗಳಿಸಲಷ್ಠೇ ತಂಡಕ್ಕೆ ಸಾಧ್ಯವಾಯಿತು. ವೃಂದಾ ದಿನೇಶ್ (21; 27ಎ) ಮತ್ತು ಮಿನು ಮಣಿ (20; 15ಎ) ಅವರನ್ನು ಬಿಟ್ಟರೆ ಉಳಿದವರು ಎರಡಂಕಿ ಮೊತ್ತ ದಾಟಲಿಲ್ಲ. 

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ ಎ: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 187 (ತಹಲಿಯಾ ವಿಲ್ಸನ್ 43, ಅಲೀಸಾ ಹೀಲಿ 70, ಅನಿಕಾ ಲಿಯಾರಾಯ್ಡ್ 35, ಕರ್ಟ್ನಿ ವೆಬ್ ಔಟಾಗದೇ 26, ರಾಧಾ ಯಾದವ್ 35ಕ್ಕೆ2, ಪ್ರೇಮಾ ರಾವತ್ 26ಕ್ಕೆ1) ಭಾರತ ಎ: 15.1 ಓವರ್‌ಗಳಲ್ಲಿ 73 (ವೃಂದಾ ದಿನೇಶ್ 21, ಮಿನು ಮಣಿ 20,  ಕಿಮ್ ಗಾರ್ಥ್ 7ಕ್ಕೆ4, ಅಮಿ ಲೂಯಿಸ್ 17ಕ್ಕೆ2, ಟೆಸ್ ಫ್ಲಿಂಟಾಫ್ 23ಕ್ಕ2) ಫಲಿತಾಂಶ: ಆಸ್ಟ್ರೇಲಿಯಾ ಎ ತಂಡದ 114 ರನ್‌ಗಳ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.