ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶಗಳ ಆಟಗಾರರು ಗುರುವಾರ ಇಲ್ಲಿಗೆ ಬಂದು ತಲುಪಿದರು. ಐಪಿಎಲ್ಶನಿವಾರ ಆರಂಭವಾಗಲಿದೆ.
ವಿವಿಧ ಫ್ರ್ಯಾಂಚೈಸ್‌ಗಳಲ್ಲಿ ಆಡುವ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಜೋಫ್ರಾ ಆರ್ಚರ್ ಹಾಗೂ ಜೋಸ್ ಬಟ್ಲರ್ ಸೇರಿದಂತೆ ಒಟ್ಟು 21 ಆಟಗಾರರು ಇಂಗ್ಲೆಂಡ್‌ನಿಂದ ವಿಶೇಷ ವಿಮಾನದ ಮೂಲಕ ದುಬೈ ತಲುಪಿದರು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿಯು ಬುಧವಾರ ಮುಕ್ತಾಯವಾಗಿತ್ತು.
ವಾರ್ನರ್ ಹಾಗೂ ಕೆಲವು ಆಟಗಾರರು ಕೋವಿಡ್–19 ಸೋಂಕಿನ ಮುಂಜಾಗ್ರತೆಯಾಗಿ ಪಿಪಿಇ ಕಿಟ್ ಧರಿಸಿದ್ದರು. ಎಲ್ಲ ಆಟಗಾರರೂ ದುಬೈನಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ.
ಏಯಾನ್ ಮಾರ್ಗನ್, ಟಾಮ್ ಬ್ಯಾಂಟನ್ ಹಾಗೂ ಪ್ಯಾಟ್ ಕಮಿನ್ಸ್ ಅವರು, ತಮ್ಮ ತಂಡ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಗಿರುವ ಅಬುಧಾಬಿಗೆ ತೆರಳಿದರು.
ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮಾತ್ರ ಅಬುಧಾಬಿಯಲ್ಲಿವೆ. ಇನ್ನುಳಿದ ಆರೂ ತಂಡಗಳು ದುಬೈನಲ್ಲಿ ತಂಗಿವೆ.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರಿಗೆ 36 ತಾಸುಗಳು ಕ್ವಾರಂಟೈನ್ ಮಾತ್ರ ಇರಲಿದೆ. ಈ ಮೊದಲು ಆರು ದಿನಗಳ ಪ್ರತ್ಯೇಕವಾಸ ಕಡ್ಡಾಯವಾಗಿತ್ತು. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಯುಎಇ ಅಧಿಕಾರಿಗಳೊಂದಿಗೆ ಚರ್ಚಿಸಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರ ಕ್ವಾರಂಟೈನ್ ಅವಧಿಯಲ್ಲಿ ವಿನಾಯಿತಿ ಕೊಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.