ADVERTISEMENT

ಆಸ್ಟ್ರೇಲಿಯಾ–ಜಿಂಬಾಬ್ವೆ ಕ್ರಿಕೆಟ್‌ ಸರಣಿ ಮುಂದಕ್ಕೆ

ಪಿಟಿಐ
Published 30 ಜೂನ್ 2020, 7:59 IST
Last Updated 30 ಜೂನ್ 2020, 7:59 IST
ಆಸ್ಟ್ರೇಲಿಯಾ ಕ್ರಿಕೆಟ್–ಸಾಂಕೇತಿಕ ಚಿತ್ರ
ಆಸ್ಟ್ರೇಲಿಯಾ ಕ್ರಿಕೆಟ್–ಸಾಂಕೇತಿಕ ಚಿತ್ರ   

ಮೆಲ್ಬರ್ನ್‌: ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ತಂಡಗಳ ನಡುವಣ ಏಕದಿನ ಕ್ರಿಕೆಟ್‌ ಸರಣಿಯನ್ನು ಕೊರೊನಾ ವೈರಾಣುವಿನ ಬಿಕ್ಕಟ್ಟಿನಿಂದಾಗಿ ಮುಂದೂಡಲಾಗಿದೆ.

ಉಭಯ ತಂಡಗಳ ನಡುವಣ ಮೂರು ಪಂದ್ಯಗಳ ಸರಣಿಯು ಆಸ್ಟ್ರೇಲಿಯಾದಲ್ಲಿ ಈ ವರ್ಷದಆಗಸ್ಟ್‌ನಲ್ಲಿ ನಡೆಯಬೇಕಿತ್ತು.

‘ಸದ್ಯದ ಪರಿಸ್ಥಿತಿಯಲ್ಲಿಜೀವ ಸುರಕ್ಷಾ (ಬಯೋ ಸೆಕ್ಯುರ್‌) ವಾತಾವರಣದಲ್ಲಿ ಸರಣಿ ಆಯೋಜಿಸುವುದು ಕಷ್ಟ. ಜೊತೆಗೆ ಆಟಗಾರರು, ನೆರವು ಸಿಬ್ಬಂದಿ ಹಾಗೂ ಇತರ ಅಧಿಕಾರಿಗಳ ಸುರಕ್ಷತೆಗೂ ಒತ್ತು ನೀಡಬೇಕಿದೆ. ಹೀಗಾಗಿ ಸರಣಿಯನ್ನು ಮುಂದೂಡಿದ್ದೇವೆ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಆಟಗಾರರ ಹಿತದೃಷ್ಟಿಯಿಂದ ಸಿಎ ಹಾಗೂ ಜಿಂಬಾಬ್ವೆ ಕ್ರಿಕೆಟ್‌ ಈ ನಿರ್ಧಾರ ಕೈಗೊಂಡಿವೆ. ಸರಣಿ ಮುಂದೂಡಿದ್ದರಿಂದ ನಮಗೂ ಬೇಸರವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಈ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಜಿಂಬಾಬ್ವೆ ಕ್ರಿಕೆಟ್‌ ಜೊತೆ ಚರ್ಚಿಸಿ ಸರಣಿಯ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ’ ಎಂದು ಸಿಎ ಹಂಗಾಮಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನಿಕ್‌ ಹಾಕ್ಲಿ ಹೇಳಿದ್ದಾರೆ.

‘ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನಾಡಲು ನಮ್ಮ ತಂಡದವರು ಉತ್ಸುಕರಾಗಿದ್ದರು. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಸಮಯದಲ್ಲಿ ಸರಣಿ ನಡೆಸುವುದು ಸೂಕ್ತವಲ್ಲ. ಹೀಗಾಗಿ ಇದನ್ನು ಮುಂದೂಡಲಾಗಿದೆ’ ಎಂದು ಜಿಂಬಾಬ್ವೆ ಕ್ರಿಕೆಟ್‌ನ ಹಂಗಾಮಿ ವ್ಯವಸ್ಥಾಪಕ ನಿರ್ದೇಶಕ ಗಿವ್‌ಮೋರ್‌ ಮಕೋನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.