ADVERTISEMENT

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟಿಗರ ಸಂಭಾವನೆ ಶೇ 66 ರಷ್ಟು ಹೆಚ್ಚಳ

ಏಜೆನ್ಸೀಸ್
Published 3 ಏಪ್ರಿಲ್ 2023, 13:39 IST
Last Updated 3 ಏಪ್ರಿಲ್ 2023, 13:39 IST
   

ಮೆಲ್ಬರ್ನ್‌: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟಿಗರ ಸಂಭಾವನೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಾಗಿದ್ದು, ಕ್ರಿಕೆಟ್‌ ಆಸ್ಟ್ರೇಲಿಯಾದ (ಸಿಎ) ಗುತ್ತಿಗೆ ವ್ಯಾಪ್ತಿಯಲ್ಲಿರುವ ಕೆಲವು ಆಟಗಾರ್ತಿಯರು ವಾರ್ಷಿಕ ₹ 5.56 ಕೋಟಿಗೂ ಅಧಿಕ ವೇತನ ಪಡೆಯಲಿದ್ದಾರೆ.

ಸಿಎ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರ ಸಂ‌ಸ್ಥೆಯ ನಡುವಣ ಹೊಸ ಒಪ್ಪಂದದ ಪ್ರಕಾರ ವೃತ್ತಿಪರ ಕ್ರಿಕೆಟ್‌ ಆಟಗಾರ್ತಿಯರ ಸಂಭಾವನೆ ಶೇ 66 ರಷ್ಟು ಹೆಚ್ಚಳವಾಗಲಿದೆ. ಆಸ್ಟ್ರೇಲಿಯಾದ ದೇಸಿ ಟಿ20 ಲೀಗ್‌ ಮಹಿಳಾ ಬಿಗ್‌ಬ್ಯಾಷ್‌ನಲ್ಲಿ (ಡಬ್ಲ್ಯುಬಿಬಿಎಲ್‌) ಆಡುವ ಆಟಗಾರ್ತಿಯರ ಸಂಭಾವನೆ ಕೂಡಾ ಏರಿಕೆಯಾಗಲಿದೆ.

ಸಿಎ ಮತ್ತು ಡಬ್ಲ್ಯುಬಿಬಿಎಲ್‌ ಗುತ್ತಿಗೆ ಪಟ್ಟಿಯಲ್ಲಿರುವ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್‌ ಲ್ಯಾನಿಂಗ್‌ ಅವರು ವಾರ್ಷಿಕ ₹ 4.45 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಭಾರತದಲ್ಲಿ ನಡೆಯುವ ಡಬ್ಲ್ಯಪಿಎಲ್‌ ಮತ್ತು ಇಂಗ್ಲೆಂಡ್‌ನ ‘ದಿ ಹಂಡ್ರೆಡ್‌’ ಟೂರ್ನಿಯಲ್ಲಿ ಪಡೆಯುವ ವೇತನವನ್ನು ಸೇರಿಸಿದರೆ ಅವರ ವಾರ್ಷಿಕ ಗಳಿಕೆ ₹ 5.56 ಕೋಟಿ ದಾಟಲಿದೆ.

ADVERTISEMENT

ಸಿಎ ಗುತ್ತಿಗೆ ಪಟ್ಟಿಯಲ್ಲಿ ಮೆಗ್‌ ಲ್ಯಾನಿಂಗ್‌ ಬಳಿಕದ ಸ್ಥಾನಗಳಲ್ಲಿರುವ ಆರು ಆಟಗಾರ್ತಿಯರು ವಾರ್ಷಿಕ ₹ 2.78 ಕೋಟಿ ಗಳಿಸಲಿದ್ದಾರೆ. ಆಸ್ಟ್ರೇಲಿಯಾದ ರಾಷ್ಟ್ರೀಯ ತಂಡದಲ್ಲಿ ಇಲ್ಲದ, ಆದರೆ ಮಹಿಳಾ ಬಿಗ್‌ಬ್ಯಾಷ್‌ನಲ್ಲಿ ಆಡುವ ಆಟಗಾರ್ತಿಯರು ವಾರ್ಷಿಕ ₹ 84 ಲಕ್ಷ ಗಳಿಸಲಿದ್ದಾರೆ.

ಸಿಎ ಗುತ್ತಿಗೆ ಪಟ್ಟಿಯಲ್ಲಿರುವ ಆಟಗಾರ್ತಿಯರ ಸಂಖ್ಯೆಯನ್ನು 15 ರಿಂದ 18 ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಪುರುಷ ಕ್ರಿಕೆಟಿಗರ ಸಂಭಾವನೆಯಲ್ಲೂ ಏರಿಕೆಯಾಗಲಿದ್ದು, ಸಿಎ ಗುತ್ತಿಗೆ ವ್ಯಾಪ್ತಿಯಲ್ಲಿರುವ 24 ಆಟಗಾರರ ವಾರ್ಷಿಕ ಗಳಿಕೆ ಸರಾಸರಿ ಶೇ 7.5 ರಷ್ಟು ಹೆಚ್ಚಳವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.