ADVERTISEMENT

ಆ್ಯಷಸ್: ಆಸೀಸ್ ಆಟಗಾರ ಟ್ರಾವಿಸ್ ಹೆಡ್‌ಗೆ ಕೋವಿಡ್; 4ನೇ ಟೆಸ್ಟ್‌ನಿಂದ ಹೊರಕ್ಕೆ

ಪಿಟಿಐ
Published 31 ಡಿಸೆಂಬರ್ 2021, 12:32 IST
Last Updated 31 ಡಿಸೆಂಬರ್ 2021, 12:32 IST
ಟ್ರಾವಿಸ್ ಹೆಡ್
ಟ್ರಾವಿಸ್ ಹೆಡ್   

ಸಿಡ್ನಿ: ಆಸ್ಟ್ರೇಲಿಯಾದ ಆಟಗಾರ ಟ್ರಾವಿಸ್ ಹೆಡ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ವಿಕ್ಟೋರಿಯಾ ಸರ್ಕಾರದ ಆರೋಗ್ಯ ಮಾರ್ಗಸೂಚಿಯಂತೆ ಟ್ರಾವಿಸ್ ಹೆಡ್ ಹಾಗೂ ಅವರ ಜತೆಗಾರ್ತಿ ಏಳು ದಿನ ಮೆಲ್ಬರ್ನ್‌ನಲ್ಲೇ ಪ್ರತ್ಯೇಕ ವಾಸದಲ್ಲಿರಲಿದ್ದಾರೆ.

ನಿಯಮಿತ ಕೋವಿಡ್ ಟೆಸ್ಟ್ ಭಾಗವಾಗಿ ಎಲ್ಲ ಆಟಗಾರರನ್ನು ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ದುರದೃಷ್ಟವಶಾತ್, ಟ್ರಾವಿಸ್ ಹೆಡ್ ಅವರಿಗೆ ಕೋವಿಡ್ ದೃಢಪಟ್ಟಿದೆ. ಆದರೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ADVERTISEMENT

ಹೋಬರ್ಟ್‌ನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದ (ಜ.14) ವೇಳೆಗೆ ಟ್ರಾವಿಸ್ ಹೆಡ್ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.

ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಗಬ್ಬಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸೇರಿದಂತೆ 62ರ ಸರಾಸರಿಯಲ್ಲಿ 248 ರನ್ ಗಳಿಸಿರುವ ಹೆಡ್, ರನ್ ಬೇಟೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಟ್ರಾವಿಸ್ ಹೆಡ್ ಸ್ಥಾನವನ್ನು ತುಂಬಿಕೊಳ್ಳುವ ನಿಟ್ಟಿನಲ್ಲಿ ಮಿಚೆಲ್ ಮಾರ್ಷ್, ನಿಕ್ ಮ್ಯಾಡಿನ್ಸನ್ ಹಾಗೂ ಜೋಶ್ ಇಂಗ್ಲಿಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಕೋವಿಡ್ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಎರಡನೇ ಪಂದ್ಯದಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಆಡಿರಲಿಲ್ಲ. ಇದಾದ ಬಳಿಕ ಇಂಗ್ಲೆಂಡ್ ಕ್ಯಾಂಪ್‌ನಲ್ಲೂ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು.

ಐದು ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯನ್ನು ಇನ್ನೂ ಎರಡು ಪಂದ್ಯಗಳು ಬಾಕಿ ಉಳಿದಿರುವಂತೆಯೇ ಆಸ್ಟ್ರೇಲಿಯಾ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಸಿಡ್ನಿಯಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯ ಜ.5ರಂದು ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.