ನವದೆಹಲಿ: ಭಾರತ ತಂಡದ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ಇದೇ 22 ರಿಂದ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕರನ್ನಾಗಿ ಶುಕ್ರವಾರ ನೇಮಕ ಮಾಡಲಾಗಿದೆ.
ಈ ವರ್ಷ ಡೆಲ್ಲಿ ತಂಡಕ್ಕೆ ಸೇರ್ಪಡೆ ಗೊಂಡಿದ್ದ ಹಿರಿಯ ಆಟಗಾರ ಕೆ.ಎಲ್.ರಾಹುಲ್ ಅವರು ರೇಸ್‌ನಿಂದ ಹಿಂದೆಸರಿದಿದ್ದರು. ಹೀಗಾಗಿ ಅನುಭವಿ ಅಕ್ಷರ್ ಪಟೇಲ್ ಅವರು ನಾಯಕರಾಗುವ ನಿರೀಕ್ಷೆಯಿತ್ತು.
2019ರಿಂದ ಡೆಲ್ಲಿ ತಂಡದಲ್ಲಿರುವ, 31 ವರ್ಷ ವಯಸ್ಸಿನ ಅಕ್ಷರ್ ಪಟೇಲ್ ಅವರನ್ನು ಕಳೆದ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ₹16.50 ಕೋಟಿ ಮೊತ್ತಕ್ಕೆ ತನ್ನಲ್ಲೇ ಉಳಿಸಿಕೊಂಡಿತ್ತು. ಡೆಲ್ಲಿ ತಂಡಕ್ಕೆ 82 ತಂಡಗಳನ್ನು ಆಡಿರುವ ಪಟೇಲ್, 967 ರನ್ ಗಳಿಸಿದ್ದು, 62 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಕಾನಮಿ ದರ 7ರ ಅಸುಪಾಸಿನಲ್ಲಿದೆ.
ಒಟ್ಟಾರೆ ಮೂರು ತಂಡಗಳ ಪರ 150 ಐಪಿಎಲ್ ಪಂದ್ಯಗಳನ್ನು ಆಡಿರುವ ಅಕ್ಷರ್ 1,653 ರನ್ ಗಳಿಸಿದ್ದು, 123 ವಿಕೆಟ್‌ಗಳನ್ನು ಪಡೆದಿದ್ದಾರೆ. 2016ರಲ್ಲಿ ಪಂಜಾಬ್ ಪರ ಐದು ಎಸೆತಗಳಲ್ಲಿ ಹ್ಯಾಟ್ರಿಕ್ ಸೇರಿದಂತೆ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು.
ಅಕ್ಷರ್ ಅವರು ದೇಶೀಯ ಕ್ರಿಕೆಟ್‌ನಲ್ಲಿ 2024–25ನೇ ಸಾಲಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಪಿ ಕ್ರಿಕೆಟ್‌ನಲ್ಲಿ ಗುಜರಾತ್ ತಂಡವನ್ನು ಮುನ್ನಡೆಸಿದ್ದರು.
ಈ ವರ್ಷದ ಆರಂಭದಲ್ಲಿ ಭಾರತ ಟಿ20 ತಂಡಕ್ಕೆ ಉಪ ನಾಯಕರಾಗಿದ್ದರು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅವರು 4.35ರ ಇಕಾನಮಿಯಲ್ಲಿ 5 ವಿಕೆಟ್‌ಗಳನ್ನು ಪಡೆದಿದ್ದರು. 27.25ರ ಸರಾಸರಿಯಲ್ಲಿ 109 ರನ್ ಹೊಡೆದಿದ್ದರು.
‘ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ದೊರಕಿರುವುದು ನನಗೊದಗಿದ ಗೌರವ. ನನ್ನ ಮೇಲೆ ವಿಶ್ವಾಸವಿಟ್ಟ ಫ್ರಾಂಚೈಸಿ ಮಾಲೀಕರಿಗೆ ಮತ್ತು ನೆರವು ಸಿಬ್ಬಂದಿಗೆ ಕೃತಜ್ಞನಾಗಿದ್ದೇನೆ’ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಅಕ್ಷರ್ ತಿಳಿಸಿದ್ದಾರೆ.
ಈ ಹಿಂದಿನ ಐಪಿಎಲ್‌ನಲ್ಲಿ ಡೆಲ್ಲಿ ತಂಡವನ್ನು ರಿಷಭ್ ಪಂತ್ ಅವರು ಮುನ್ನಡೆಸಿದ್ದರು. ಆದರೆ ಮೆಗಾ ಆಕ್ಷನ್‌ನಲ್ಲಿ ಅವರನ್ನು ಲಖನೌ ಸೂಪರ್ ಜೈಂಟ್ಸ್ ಖರೀದಿಸಿತ್ತು. ಡೆಲ್ಲಿ ತಂಡದಲ್ಲಿ ಅನುಭವಿಗಳಾದ ಕೆ.ಎಲ್.ರಾಹುಲ್, ಫಾಫ್ ಡುಪ್ಲೆಸಿ, ಮಿಚೆಲ್ ಸ್ಟಾರ್ಕ್ ಮೊದಲಾದ ಆಟಗಾರರಿದ್ದಾರೆ. ಇಂಥ ಆಟಗಾರರಿಂದ ಉತ್ತಮ ಆಟ ಪಡೆಯುವ ಸವಾಲು ಅಕ್ಷರ್ ಮುಂದಿದೆ. ಐಪಿಎಲ್‌ನಲ್ಲಿ ಇನ್ನೂ ಪ್ರಶಸ್ತಿ ಗೆಲ್ಲದೇ ಇರುವ ಮೂರು ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಒಂದಾಗಿದೆ. ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಇನ್ನೆರಡು ತಂಡಗಳಾಗಿವೆ.
ಅಕ್ಷರ್ ನೇಮಕದ ಮೂಲಕ ಐದು ತಂಡಗಳಿಗೆ ನಾಯಕರ ನೇಮಕ ಪೂರ್ಣಗೊಂಡಂತೆ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಜತ್ ಪಾಟೀದಾರ್, ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಅಜಿಂಕ್ಯ ರಹಾನೆ, ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ರಿಷಭ್ ಪಂತ್ ಮತ್ತು ಪಂಜಾಬ್ ಕಿಂಗ್ಸ್‌ಗೆ ಶ್ರೇಯಸ್ ಅಯ್ಯರ್ ಈ ಮೊದಲು ನಾಯಕರಾಗಿ ನೇಮಕಗೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯವನ್ನು ವಿಶಾಖಪಟ್ಟಣದಲ್ಲಿ ಮಾರ್ಚ್ 24ರಂದು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.