ADVERTISEMENT

ಸಮತೋಲನದ ಏಕದಿನ ತಂಡ ಅಗತ್ಯ: ರಾಹುಲ್ ದ್ರಾವಿಡ್

ಹಾರ್ದಿಕ್‌, ಜಡೇಜ ಹೆಸರು ಪ್ರಸ್ತಾಪಿಸಿದ ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್

ಪಿಟಿಐ
Published 24 ಜನವರಿ 2022, 12:59 IST
Last Updated 24 ಜನವರಿ 2022, 12:59 IST
ಸಂಭ್ರಮದ ಕ್ಷಣವೊಂದರಲ್ಲಿ ಭಾರತ ಏಕದಿನ ತಂಡದ ಆಟಗಾರರು –ಪಿಟಿಐ ಚಿತ್ರ
ಸಂಭ್ರಮದ ಕ್ಷಣವೊಂದರಲ್ಲಿ ಭಾರತ ಏಕದಿನ ತಂಡದ ಆಟಗಾರರು –ಪಿಟಿಐ ಚಿತ್ರ   

ಕೇಪ್‌ಟೌನ್‌: ಭಾರತದ ಏಕದಿನ ಕ್ರಿಕೆಟ್ ತಂಡವು ಸಮತೋಲನವನ್ನು ಹೊಂದಿಲ್ಲ ಎಂದು ಹೇಳಿರುವ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜ ಅವರಂಥ ಆಟಗಾರರ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ದಕ್ಷಿಣ ಆಫ್ರಿಕಾ ಎದುರು ಭಾನುವಾರ ರಾತ್ರಿ ಕೊನೆಗೊಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 0–3ರಿಂದ ಸೋತಿತ್ತು. ಪಂದ್ಯದ ನಂತರ ಮಾತನಾಡಿದ ದ್ರಾವಿಡ್‌ ‘ಆರು, ಏಳು ಮತ್ತು ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ಆಲ್‌ರೌಂಡ್ ಆಟಗಾರರ ಪೈಕಿ ಕೆಲವರು ಈ ಸರಣಿಯಲ್ಲಿ ಆಡಲಿಲ್ಲ. ಮುಂದಿನ ಸರಣಿಗಳಿಗೆ ಅವರು ಲಭ್ಯ ಇರುತ್ತಾರೆ’ ಎಂದರು.

ಹಾರ್ದಿಕ್ ಪಾಂಡ್ಯ ಅವರು ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು ರವೀಂದ್ರ ಜಡೇಜ ಅವರಿಗೆ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡ ಕಾರಣ ಈ ಸರಣಿಗೆ ತಂಡವನ್ನು ಆಯ್ಕೆ ಮಾಡುವಾಗ ಲಭ್ಯ ಇರಲಿಲ್ಲ.

ADVERTISEMENT

‘ಹಾರ್ದಿಕ್ ಮತ್ತು ಜಡೇಜ ತಂಡಕ್ಕೆ ಮರಳಿದ ನಂತರ ತಂಡ ಬಲಿಷ್ಠವಾಗಲಿದೆ. ಆಗ ನಮ್ಮ ತಂತ್ರ ಮತ್ತು ಆಟದ ಶೈಲಿಯನ್ನು ಬದಲಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದ ಅವರು ‘ಈ ಸರಣಿಯಲ್ಲಿ ಕೆ.ಎಲ್‌.ರಾಹುಲ್ ತಮ್ಮ ನಾಯಕತ್ವದ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ’ ಎಂದರು.

‘ಏಕದಿನ ಸರಣಿಯ ಮೂರೂ ಪಂದ್ಯಗಳಲ್ಲಿ ತಂಡ ಬ್ಯಾಟಿಂಗ್ ವೈಫಲ್ಯ ಕಂಡಿದೆ. 20 ಮತ್ತು 40ನೇ ಓವರ್‌ಗಳ ನಡುವೆ ಈ ಸಮಸ್ಯೆ ಹೆಚ್ಚಾಗಿ ಕಾಡಿದೆ. ಕೆಲವು ಕೆಟ್ಟ ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಕಳೆದುಕೊಂಡಿದ್ದೇವೆ. ಅಂಥ ಲೋಪಗಳು ಕಾಣಿಸಿಕೊಳ್ಳದೇ ಇದ್ದಿದ್ದರೆ ತಂಡ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತು’ ಎಂದು ದ್ರಾವಿಡ್ ನುಡಿದರು.

ಭಾರತ ಏಕದಿನ ತಂಡಕ್ಕೆ ದಂಡ

ನಿಗದಿತ ಅವಧಿಯೊಳಗೆ ಬೌಲಿಂಗ್ ಪೂರ್ಣಗೊಳಿಸದ ಭಾರತ ಏಕದಿನ ತಂಡದ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ದಂಡ ಹಾಕಿದೆ. ಕೊನೆಯ ಏಕದಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಇನ್ನೂ ಎರಡು ಓವರ್‌ ಬಾಕಿ ಉಳಿದಿತ್ತು. ಆದ್ದರಿಂದ ಪಂದ್ಯದ ರೆಫರಿ ಆ್ಯಂಡಿ ಪೈಕ್ರಾಫ್ಟ್‌ ದಂಡ ವಿಧಿಸಲು ನಿರ್ಧರಿಸಿದರು.

ಫೀಲ್ಡ್ ಅಂಪೈರ್ ಮರಾಯಸ್ ಎರಾಸ್ಮಸ್‌ ಮತ್ತು ಬೋಂಗನಿ ಜೆಲೆ, ಮೂರನೇ ಅಂಪೈರ್ ಅಲಾವುದೀನ್ ಪಾಲೇಕರ್, ನಾಲ್ಕನೇ ಅಂಪೈರ್ ಅಡ್ರಿಯನ್ ಹೋಲ್ಡ್‌ ಸ್ಟಾಕ್ ಅವರು ನಿಧಾನಗತಿಯ ಬೌಲಿಂಗ್ ವಿವರವನ್ನು ಗಮನಕ್ಕೆ ತಂದಿದ್ದರು.

ಮಗಳ ಚಿತ್ರ ಪ್ರಕಟಿಸಬೇಡಿ: ಕೊಹ್ಲಿ

ಒಂದು ವರ್ಷ ವಯಸ್ಸಿನ ಮಗಳು ವಮಿಕಾಳ ಚಿತ್ರ ಅಥವಾ ವಿಡಿಯೊವನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಬೇಡಿ ಎಂದು ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್‌ ವಿರಾಟ್ ಕೊಹ್ಲಿ ಮತ್ತು ಪತ್ನಿ, ನಟಿ ಅನುಷ್ಕಾ ಶರ್ಮಾ ಕೋರಿದ್ದಾರೆ. ಕೇಪ್‌ಟೌನ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಗಳಿಸಿದ ಸಂದರ್ಭದಲ್ಲಿ ಸಂಭ್ರಮಿಸಿದ ಅನುಷ್ಕಾ ಅವರು ಎತ್ತಿಕೊಂಡಿದ್ದ ವಮಿಕಾಳ ಚಿತ್ರ ಮತ್ತು ವಿಡಿಯೊ ತುಣುಕುಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದವು. ಟ್ವಿಟರ್‌ನಲ್ಲಿ ವಮಿಕಾ ಎಂಬ ಹ್ಯಾಷ್‌ಟ್ಯಾಗ್‌ ಟ್ರೆಂಡ್ ಆಗಿತ್ತು.

ಈ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಮ್‌ ಪೋಸ್ಟ್ ಮಾಡಿರುವ ದಂಪತಿ ‘ಮಗಳ ಚಿತ್ರಗಳನ್ನು ಪ್ರಕಟಿಸಬೇಡಿ ಎಂದು ಈ ಹಿಂದೆಯೇ ಕೋರಿದ್ದೆವು. ಈಗ ಮತ್ತೆ ಮನವಿ ಮಾಡುತ್ತಿದ್ದೇವೆ, ದಯವಿಟ್ಟು ಆಕೆಯ ಚಿತ್ರಗಳು ಮತ್ತು ವಿಡಿಯೊವನ್ನು ಪೋಸ್ಟ್ ಮಾಡಬೇಡಿ. ಸಾಮಾಜಿಕ ತಾಣಗಳ ಬಗ್ಗೆ ತಿಳಿವಳಿಕೆ ಬಂದ ನಂತರ ಆಕೆಯೇ ಅವುಗಳನ್ನು ಬಳಸಲು ಶುರು ಮಾಡುತ್ತಾಳೆ’ ಎಂದು ಹೇಳಿದ್ದಾರೆ.

ಕೋವಿಡ್ ಆತಂಕದ ನಡುವೆಯೂ ವಿಶ್ವಾಸವಿಟ್ಟು ಟೆಸ್ಟ್ ಮತ್ತು ಏಕದಿನ ಸರಣಿ ಯಶಸ್ವಿಯಾಗಲು ನೆರವಾದ ಬಿಸಿಸಿಐ ಮತ್ತು ಭಾರತದ ಆಟಗಾರರಿಗೆ ಕೃತಜ್ಞತೆಗಳು ಸಲ್ಲಬೇಕು.

ಗ್ರೇಮ್ ಸ್ಮಿತ್‌ ಕ್ರಿಕೆಟ್ ದಕ್ಷಿಣ ಆಫ್ರಿಕಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.