ADVERTISEMENT

ರಾಜಕೀಯಕ್ಕೆ ಬಾಂಗ್ಲಾ ಕ್ರಿಕೆಟ್‌ ತಾರೆ ಶಕೀಬ್‌: ಅವಾಮಿ ಲೀಗ್‌ನಿಂದ ಸ್ಪರ್ಧೆ

ಏಜೆನ್ಸೀಸ್
Published 19 ನವೆಂಬರ್ 2023, 13:57 IST
Last Updated 19 ನವೆಂಬರ್ 2023, 13:57 IST
ಬಾಂಗ್ಲಾ ತಂಡದ ನಾಯಕ ಶಕೀಬ್‌ ಅಲ್‌ ಹಸನ್‌
ಬಾಂಗ್ಲಾ ತಂಡದ ನಾಯಕ ಶಕೀಬ್‌ ಅಲ್‌ ಹಸನ್‌   

ಢಾಕಾ: ಬಾಂಗ್ಲಾದೇಶದ ಕ್ರಿಕೆಟ್‌ ತಾರೆ ಶಕಿಬ್‌ ಅಲ್ ಹಸನ್ ಅವರು ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದಾರೆ. ಬಾಂಗ್ಲಾದೇಶ ಅವಾಮಿ ಲೀಗ್‌ ಪರ ಅವರು ಮುಂಬರುವ ಜನವರಿ 7ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ.

ಮೂರು ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಲು ಅವರು ಶನಿವಾರ ಅರ್ಜಿಗಳನ್ನು ಪಡೆದಿರುವುದಾಗಿ ಅವಾಮಿ ಲೀಗ್ ಜಂಟಿ ಕಾರ್ಯದರ್ಶಿ ಬಹಾವುದ್ದೀನ್ ನಸೀಮ್ ಎಎಫ್‌ಪಿಗೆ ತಿಳಿಸಿದ್ದಾರೆ.

ವಿಪಕ್ಷಗಳು ಚುನಾವಣೆ ಬಹಿಷ್ಕರಿಸಲು ಮುಂದಾಗಿವೆ.

ADVERTISEMENT

‘ಅವರು (ಶಕಿಬ್‌) ಸೆಲೆಬ್ರಿಟಿ. ಜೊತೆಗೆ ಯುವ ಸಮುದಾಯದಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದಾರೆ’ ಎಂದು ನಸೀಮ್ ಹೇಳಿದ್ದಾರೆ.

ಶಕೀಬ್ ಅವರ ಉಮೇದುವಾರಿಕೆಯನ್ನು ಪ್ರಧಾನಿ ಶೇಕ್‌ ಹಸೀನಾ ನೇತೃತ್ವದ ಆಡಳಿತ ಪಕ್ಷದ ಸಂಸದೀಯ ಮಂಡಳಿ ಖಚಿತಪಡಿಸಲು ಬಾಕಿಯಿದೆ.

ಅವರು ನೈರುತ್ಯ ಭಾಗದ ತವರು ಜಿಲ್ಲೆ ಮಗುರಾ ಅಥವಾ ಢಾಕಾದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ.

ಬಾಂಗ್ಲಾದೇಶ ತಂಡದ ಮೂರೂ ಮಾದರಿಗಳಲ್ಲಿ ತಂಡದ ನಾಯಕರಾಗಿದ್ದ ಶಕಿಬ್ ಬೆರಳಿನ ಗಾಯದಿಂದ ಈಗ ತಂಡದಿಂದ ಹೊರಗುಳಿದಿದ್ದಾರೆ.

ಬಾಂಗ್ಲಾ ತಂಡದ ಮಾಜಿ ನಾಯಕ ಮಷ್ರಫೆ ಮೊರ್ತಾಜಾ ಅವರು 2018ರಲ್ಲಿ ರಾಜಕೀಯ ರಂಗಕ್ಕೆ ಇಳಿದು ಅದೇ ವರ್ಷ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾಗಿದ್ದರು. ನಂತರವೂ ಅವರು 2019ರ ವಿಶ್ವಕಪ್‌ನಲ್ಲಿ ಆಡಿದ್ದರು. ನಂತರ ರಾಜಕೀಯದಲ್ಲಿ ಗಮನ ಕೇಂದ್ರೀಕರಿಸಲು ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.