ADVERTISEMENT

ದೇಶಿ ಕ್ರಿಕೆಟ್ ವೇಳಾಪಟ್ಟಿ ಸದ್ಯಕ್ಕಿಲ್ಲ

ಪಿಟಿಐ
Published 19 ಜುಲೈ 2020, 16:16 IST
Last Updated 19 ಜುಲೈ 2020, 16:16 IST
ಬಿಸಿಸಿಐ
ಬಿಸಿಸಿಐ   

ನವದೆಹಲಿ: ಪ್ರಸಕ್ತ ಋತುವಿನ ದೇಶಿ ಕ್ರಿಕೆಟ್‌ ವೇಳಾಪಟ್ಟಿಯ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಪೆಕ್ಸ್‌ ಕೌನ್ಸಿಲ್ ಸಭೆಯಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ಹೊರಹೊಮ್ಮಲಿಲ್ಲ.

ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗಳ ವೇಳಾಪಟ್ಟಿಯ ಕುರಿತು ಈ ಸಭೆಯಲ್ಲಿ ನಿರ್ಧಾರವಾಗುವ ನಿರೀಕ್ಷೆ ಇತ್ತು.

’ದೇಶಿ ಕ್ರಿಕೆಟ್ ವೇಳಾಪಟ್ಟಿಯ ಕುರಿತು ಚರ್ಚಿಸುವುದರಲ್ಲಿ ಅರ್ಥವೇ ಇಲ್ಲ. ಏಕೆಂದರೆ ಡಿಸೆಂಬರ್ ಮತ್ತು 2021ರ ಜನವರಿ ಅವಧಿಯಲ್ಲಿ ಕೋವಿಡ್ –19 ಪರಿಸ್ಥಿತಿ ಏನಿರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ‘ ಎಂದು ಶುಕ್ರವಾರ ನಡೆದಿದ್ದ ಸಭೆಯಲ್ಲಿ ಭಾಗವಹಿಸಿದ್ದವರೊಬ್ಬರು ತಿಳಿಸಿದ್ದಾರೆ.

ADVERTISEMENT

ದೇಶಿ ಕ್ರಿಕೆಟ್ ವೇಳಾಪಟ್ಟಿಯನ್ನು ಮೊಟಕುಗೊಳಿಸಿ ಮಿನಿ ಟೂರ್ನಿಗಳನ್ನಾಗಿ ಮಾಡಿದರೆ ಆಟಗಾರರು ತಲಾ 8–10 ಲಕ್ಷ ರೂಪಾಯಿ ಆದಾಯ ಕಳೆದುಕೊಳ್ಳಬೇಕಾಗಬಹುದು ಎಂದು ಬಿಸಿಸಿಐ ಮುಳಗಳು ಹೇಳಿವೆ.

ಪೋಷಾಕು ವಿನ್ಯಾಸಕ್ಕೆ ಟೆಂಡರ್

ಭಾರತ ಕ್ರಿಕೆಟ್ ತಂಡದ ಆಟಗಾರರ ಪೋಷಾಕು ಪ್ರಾಯೋಜಕರಿಗಾಗಿ ಹೊಸ ಟೆಂಡರ್ ಆಹ್ವಾನಿಸಿದೆ.

ಸದ್ಯ ಪ್ರಾಯೋಜಕರಾಗಿರುವ ನೈಕಿ ಕಂಪೆನಿಯ ಒಪ್ಪಂದವು ಸೆಪ್ಟೆಂಬರ್‌ನಲ್ಲಿ ಅಂತ್ಯಗೊಳ್ಳಲಿದೆ.

'ನೈಕಿಯು ನಾಲ್ಕು ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ₹ 30 ಕೋಟಿ ರಾಜಧನದ ಸಹಿತ ₹ 370 ಕೋಟಿಯ ಒಪ್ಪಂದವಾಗಿತ್ತು. ಈಗ ಅವರು ಒಪ್ಪಂದವನ್ನು ಮುಂದುವರಿಸುವ ಪ್ರಸ್ತಾವ ಕೊಟ್ಟಿಲ್ಲ. ಒಂದೊಮ್ಮೆ ಅವರು ಹೊಸದಾಗಿ ಪ್ರಸ್ತಾವ ಸಲ್ಲಿಸುವುದಾದರೆ ಅವಕಾಶ ಇದೆ'ಎಂದು ಮೂಲಗಳು ತಿಳಿಸಿವೆ.

ಬಿಸಿಸಿಐಗೆ ಡಿಜಿಟಲ್ ಸೇವೆಗಳನ್ನು ಒದಗಿಸುತ್ತಿರುವ ಪಲ್ಸ್‌ ಇನ್ನೋವೆಷನ್ಸ್‌ ನ ಒಪ್ಪಂದವನ್ನು ಮುಂದುವರಿಸುವ ಸಾಧ್ಯತೆ ಇದೆ. ಈ ಸಂಸ್ಥೆಯೇ ಬಿಸಿಸಿಐ ಮತ್ತು ಐಪಿಎಲ್ ಜಾಲತಾಣಗಳನ್ನೂ ನಿರ್ವಹಿಸುತ್ತಿದೆ.

ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯನ್ನು ನಗರದ ಹೊರವಲಯದಲ್ಲಿರುವ ನೂತನ ತಾಣಕ್ಕೆ ಸ್ಥಳಾಂತರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಆದರೆ ಕೊರೊನಾ ವೈರಸ್‌ ಹಾವಳಿ ಹತೋಟಿಗೆ ಬಂದ ನಂತರ ಈ ಪ್ರಕ್ರಿಯೆ ನಡೆಸಲು ಶಿಫಾರಸು ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.