ADVERTISEMENT

ಐಪಿಎಲ್ ನೀಲನಕ್ಷೆಗೆ ಹಸಿರು ನಿಶಾನೆ ತೋರುವುದೇ ಬಿಸಿಸಿಐ?

ಪಿಟಿಐ
Published 16 ಜುಲೈ 2020, 13:16 IST
Last Updated 16 ಜುಲೈ 2020, 13:16 IST
ಬಿಸಿಸಿಐ ಅಪೆಕ್ಸ್ ಸಮಿತಿ ಸಭೆಯಲ್ಲಿ ಬೆಂಗಳೂರಿನ ಎನ್‌ಸಿಎ ಬಗ್ಗೆಯೂ ಚರ್ಚೆ ನಡೆಯಲಿದೆ –ಪ್ರಜಾವಾಣಿ ಚಿತ್ರ
ಬಿಸಿಸಿಐ ಅಪೆಕ್ಸ್ ಸಮಿತಿ ಸಭೆಯಲ್ಲಿ ಬೆಂಗಳೂರಿನ ಎನ್‌ಸಿಎ ಬಗ್ಗೆಯೂ ಚರ್ಚೆ ನಡೆಯಲಿದೆ –ಪ್ರಜಾವಾಣಿ ಚಿತ್ರ   

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಪೆಕ್ಸ್ ಸಮಿತಿಯ ಮಹತ್ವದ ಸಭೆ ಶುಕ್ರವಾರ ನಡೆಯಲಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಕುರಿತು ಯಾವ ತೀರ್ಮಾನ ಹೊರಬೀಳುತ್ತದೆ ಎಂಬುದರ ಕುರಿತು ಕುತೂಹಲ ಮೂಡಿದೆ.

ಆನ್‌ಲೈನ್ ಮೂಲಕ ನಡೆಯಲಿರುವ ಸಭೆಯಲ್ಲಿ ಐಪಿಎಲ್ ಟೂರ್ನಿಯ ನೀಲನಕ್ಷೆ ಸಿದ್ಧಗೊಳ್ಳುವ ಸಾಧ್ಯತೆ ಇದ್ದು ದೇಶಿ ಟೂರ್ನಿಗಳ ಭವಿಷ್ಯದ ಬಗ್ಗೆಯೂ ಚರ್ಚೆ ನಡೆಯಲಿದೆ. ಭಾರತ ತಂಡದ ಭವಿಷ್ಯದ ಪ್ರವಾಸ ಮತ್ತು ಸರಣಿಗಳ ರೂಪುರೇಷೆಯೂ ಸಭೆಯ ಪ್ರಮುಖ ಅಂಶಗಳಲ್ಲಿ ಒಂದಾಗಲಿದೆ. ಭಾರತ ತಂಡದ ಶ್ರೀಲಂಕಾ ಹಾಗೂ ಜಿಂಬಾಬ್ವೆ ಪ್ರವಾಸ ಮತ್ತು ಇಂಗ್ಲೆಂಡ್ ತಂಡದ ಭಾರತ ಪ್ರವಾಸದ ಮೇಲೆ ಈಗಾಗಲೇ ಕರಿನೆರಳು ಬಿದ್ದಿದೆ.

’ಐಪಿಎಲ್ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸುವುದಕ್ಕೇ ಆದ್ಯತೆ. ಶ್ರೀಲಂಕಾ ಮತ್ತು ಯುಎಇಯಲ್ಲಿ ಟೂರ್ನಿ ಆಯೋಜಿಸಲು ಅವಕಾಶವಿದೆಯಾದರೂ ಅಲ್ಲಿಗೆ ಸ್ಥಳಾಂತರಿಸುವುದರಿಂದ ನಮ್ಮ ತಲೆನೋವು ಹೆಚ್ಚಾಗಲಿದೆ. ಅಧ್ಯಕ್ಷರು ಕೂಡ ಇದೇ ಆತಂಕವನ್ನು ವ್ಯಕ್ತಪಡಿಸಿದ್ದಾರೆ‘ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

’ಪರಿಸ್ಥಿತಿ ಈಗ ಗಂಭೀರವಾಗಿದೆ. ಆದ್ದರಿಂದ ಪಂದ್ಯ ನಡೆಸುವ ಸ್ಥಳಗಳನ್ನು ಈಗಲೇ ನಿಗದಿ ಮಾಡಲು ಸಾಧ್ಯವಿಲ್ಲ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಸಲು ಉದ್ದೇಶಿಸಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಂದಿನ ವಾರ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದ್ದು ಆ ನಂತರವೇ ಐಪಿಎಲ್‌ ಬಗ್ಗೆ ಸೂಕ್ತ ಯೋಜನೆ ಹಾಕಿಕೊಳ್ಳಲು ಸಾಧ್ಯ‘ ಎಂದು ಅಧಿಕಾರಿ ಹೇಳಿದರು.

ದೇಶಿ ಟೂರ್ನಿಗಳ ಆಯೋಜನೆಯ ತಲೆನೋವು

ದೇಶಿ ಟೂರ್ನಿಗಳ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಬೇಕು ಎಂಬುದು ಮಂಡಳಿಯನ್ನು ಕಾಡುತ್ತಿರುವ ದೊಡ್ಡ ಪ್ರಶ್ನೆ. ಪುರುಷರ ಮತ್ತು ಮಹಿಳೆಯರ ಟೂರ್ನಿಗಳು ಮಾತ್ರವಲ್ಲದೆ 23 ವರ್ಷದೊಳಗಿನ ಪುರುಷ ಮತ್ತು ಮಹಿಳೆಯರ, 19 ಮತ್ತು 16 ವರ್ಷದೊಳಗಿನ ಬಾಲಕರ, 19 ವರ್ಷದೊಳಗಿನ ಬಾಲಕಿಯರ ಟೂರ್ನಿಗಳ ಸಾವಿರಕ್ಕೂ ಹೆಚ್ಚು ಪಂದ್ಯಗಳನ್ನು ನಡೆಸಬೇಕಾಗಿದೆ.

’ರಣಜಿ ಟ್ರೋಫಿ ಟೂರ್ನಿಯ ವೇಳಾಪಟ್ಟಿಯನ್ನು ಮರುನಿಗದಿ ಮಾಡಬಹುದಾಗಿದೆ. ಆದರೆ ವಿಜಯ್ ಹಜಾರೆ, ದುಲೀಪ್ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗಳಿಗೆ ಸಂಬಂಧಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಸವಾಲು. ಈ ಪೈಕಿ ಯಾವುದಾದರೂ ಒಂದು ಟೂರ್ನಿಯನ್ನು ಕೈಬಿಡುವ ಅನಿವಾರ್ಯ ಸ್ಥಿತಿ ಒದಗಬಹುದು. ಇಲ್ಲವಾದರೆ ಕಿರಿಯರ ಟೂರ್ನಿಗಳ ಆಯೋಜನೆಗೆ ಸಮಯ ಹೊಂದಿಸುವುದು ಕಷ್ಟವಾಗಬಹುದು‘ ಎಂದು ಬಿಸಿಸಿಐ ಅಧಿಕಾರಿ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಸೌಲಭ್ಯಗಳ ಕುರಿತು ಕೂಡ ಚರ್ಚೆ ನಡೆಯಲಿದ್ದು ನೈಕಿ ಸಂಸ್ಥೆಯ ಜೊತೆಗಿನ ಒಪ್ಪಂದ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಹಾದಿಯ ಬಗ್ಗೆ, ಈಶಾನ್ಯ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳಿಗೆ ಸಬ್ಸಿಡಿ ನೀಡುವ ಬಗ್ಗೆ ಮತ್ತು ಬಿಹಾರ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿನ ಗೊಂದಲಗಳ ಬಗ್ಗೆಯೂ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.

ಶುಕ್ರವಾರದ ಸಭೆಯಲ್ಲಿ ಚರ್ಚೆಯಾಗಲಿರುವ ವಿಷಯಗಳು: 1–ಐಪಿಎಲ್‌ನ ಮುಂದಿನ ಹಾದಿ; 2–ದೇಶಿ ಟೂರ್ನಿಗಳ ವೇಳಾಪಟ್ಟಿ; 3–ಭಾರತ ತಂಡದ ಭವಿಷ್ಯದ ಪ್ರವಾಸ ಮತ್ತು ಸರಣಿಗಳು; 4–ಭಾರತದಲ್ಲಿ ಟ್ವೆಂಟಿ–20 ವಿಶ್ವಕಪ್ ಟೂರ್ನಿ ನಡೆಸುವುದಾದರೆ ತೆರಿಗೆ ವಿನಾಯಿತಿ; 5–ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಸೌಲಭ್ಯಗಳು; 6–ಬಿಸಿಸಿಐ ಮತ್ತು ಐಪಿಎಲ್‌ನ ಪ್ರಾಯೋಜಕತ್ವದ ಮುಂದುವರಿಕೆ; 7– ಬಿಸಿಸಿಐನಲ್ಲಿ ಇನ್ನಷ್ಟು ಸಿಬ್ಬಂದಿ ನೇಮಕ; 8–ಬಿಹಾರ ಕ್ರಿಕೆಟ್ ಸಂಸ್ಥೆಯ ಆಡಳಿತದ ಗೊಂದಲ; 9–ರಾಹುಲ್ ಜೊಹ್ರಿ ರಾಜೀನಾಮೆ ಹಿನ್ನೆಲೆಯಲ್ಲಿ ಹೊಸ ಸಿಇಒ ನೇಮಕ ಪ್ರಕ್ರಿಯೆ; 10–ಈಶಾನ್ಯ ರಾಜ್ಯಗಳ ಸಬ್ಸಿಡಿ; 11–ಪೋಷಾಕು ಪ್ರಾಯೋಜಕತ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.