ADVERTISEMENT

ಮುಂದಿನ ಐಪಿಎಲ್ ಭಾರತದಲ್ಲಿ: ಸೌರವ್ ಗಂಗೂಲಿ ವಿಶ್ವಾಸ

ರಾಯಿಟರ್ಸ್
Published 16 ಅಕ್ಟೋಬರ್ 2021, 12:22 IST
Last Updated 16 ಅಕ್ಟೋಬರ್ 2021, 12:22 IST
ಬಿಸಿಸಿಐ
ಬಿಸಿಸಿಐ   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಮುಂದಿನ ಆವೃತ್ತಿಯ ಪಂದ್ಯಗಳನ್ನು ಭಾರತದಲ್ಲೇ ನಡೆಸಲು ಸಾಧ್ಯವಾಗುವಂಥ ವಾತಾವರಣ ನಿರ್ಮಾಣವಾಗಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಮುಕ್ತಾಯಗೊಂಡ 14ನೇ ಆವೃತ್ತಿಯನ್ನು ಭಾರತದಲ್ಲಿ ಆರಂಭಿಸಲಾಗಿತ್ತು. ಆದರೆ ಬಯೊಬಬಲ್‌ನಲ್ಲಿದ್ದ ಆಟಗಾರರ ಪೈಕಿ ಕೆಲವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಕಾರಣ ಸ್ಥಗಿತಗೊಳಿಸಿ ಯುಎಇಗೆ ಸ್ಥಳಾಂತರಿಸಲಾಗಿತ್ತು. ದುಬೈನಲ್ಲಿ ನಡೆದ ಫೈನಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮಣಿಸಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆದ್ದುಕೊಂಡಿತ್ತು.

ಈ ಬಾರಿ ಎಂಟು ತಂಡಗಳು ಚಾಂಪಿಯನ್ ಪಟ್ಟಕ್ಕೇರಲು ಸೆಣಸಿದ್ದವು. ಮುಂದಿನ ಬಾರಿ ಇನ್ನೂ ಎರಡು ತಂಡಗಳನ್ನು ಸೇರಿಸಲು ಬಿಸಿಸಿಐ ಮುಂದಾಗಿದೆ. ‘ಐಪಿಎಲ್‌ ಭಾರತದ ಟೂರ್ನಿ. ಮುಂದಿನ ಆವೃತ್ತಿ ಭಾರತದಲ್ಲೇ ನಡೆಯುವ ವಿಶ್ವಾಸವಿದೆ’ ಎಂದು ಆನ್‌ಲೈನ್ ಸಂವಾದದಲ್ಲಿ ಗಂಗೂಲಿ ಹೇಳಿದರು.

ADVERTISEMENT

‘ದುಬೈನಲ್ಲಿ ಫೈನಲ್ ಪಂದ್ಯ ನಡೆದ ಸಂದರ್ಭದಲ್ಲಿ ಜನರು ಖುಷಿಯಿಂದ ಸಂಭ್ರಮಿಸಿದ್ದರು. ಭಾರತದಲ್ಲಿ ಇದಕ್ಕೂ ಹೆಚ್ಚು ಸಂಭ್ರಮ ಎದ್ದು ಕಾಣುತ್ತದೆ. ಪ್ರತಿ ಪಂದ್ಯಕ್ಕೂ ಅಲ್ಲಿ ಗ್ಯಾಲರಿಗಳು ತುಂಬುತ್ತವೆ. ಹೀಗಾಗಿ ಟೂರ್ನಿಯನ್ನು ತವರಿಗೆ ತೆಗೆದುಕೊಂಡು ಹೋಗಲು ಎಲ್ಲ ಬಗೆಯ ಪ್ರಯತ್ನವನ್ನೂ ನಡೆಸಲಾಗುವುದು’ ಎಂದು ಅವರು ತಿಳಿಸಿದರು.

'ಮುಂದಿನ ಏಳು–ಎಂಟು ತಿಂಗಳಲ್ಲಿ ಭಾರತದಲ್ಲಿ ಕೋವಿಡ್ ಪರಿಸ್ಥಿತಿ ತೀರಾ ಭಿನ್ನ ಆಗಿರಲಿದೆ. ಆದ್ದರಿಂದ ಅಭಿಮಾನಿಗಳಿಂದ ಕಿಕ್ಕಿರಿದ ಗ್ಯಾಲರಿಗಳನ್ನೊಳಗೊಂಡ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯುವ ಸಾಧ್ಯತೆ ಇದೆ’ ಎಂದು ಭಾರತ ತಂಡದ ಮಾಜಿ ನಾಯಕ ಗಂಗೂಲಿ ಹೇಳಿದರು.

ತಾವು ಪ್ರಚಾರ ರಾಯಭಾರಿ ಆಗಿರುವ ಮೈ ಇಲೆವನ್ ಸರ್ಕಲ್ ಒಳಗೊಂಡ ಫ್ಯಾಂಟಸಿ ಸ್ಪೋರ್ಟ್ಸ್ ವೇದಿಕೆಗಳಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿಯ ಪ್ರಚಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಶನಿವಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.