ADVERTISEMENT

‘ಕ್ರಿಕೆಟ್‌ ಬೆಟ್ಟಿಂಗ್ ಕಾನೂನುಬದ್ಧಗೊಳಿಸಿ’

ಪಿಟಿಐ
Published 17 ಸೆಪ್ಟೆಂಬರ್ 2019, 19:48 IST
Last Updated 17 ಸೆಪ್ಟೆಂಬರ್ 2019, 19:48 IST
ಅಜಿತ್‌ ಸಿಂಗ್ ಶೇಖಾವತ್
ಅಜಿತ್‌ ಸಿಂಗ್ ಶೇಖಾವತ್   

ಮೊಹಾಲಿ: ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಿಯಂತ್ರಣ ಕಾಯ್ದೆ ರಚಿಸಬೇಕು. ಬೆಟ್ಟಿಂಗ್‌ ಅನ್ನು ಕಾನೂನುಬದ್ಧಗೊಳಿಸಬೇಕು. ಇದರಿಂದ ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭ್ರಷ್ಟಾಚಾರ ನಿಗ್ರಹ ಪಡೆಯ ಮುಖ್ಯಸ್ಥ ಅಜಿತ್‌ಸಿಂಗ್ ಶೇಖಾವತ್ ಸಲಹೆ ನೀಡಿದ್ದಾರೆ.

‘ಈ ಪಿಡುಗುಗಳನ್ನು ನಿಯಂತ್ರಿಸುವುದು ಅಸಾಧ್ಯವೇನಲ್ಲ. ಆದರೆ ಅದಕ್ಕಾಗಿ ಒಂದು ವಿಶೇಷ ಕಾನೂನಿನ ಅಗತ್ಯವಿದೆ. ಸ್ಪಷ್ಟವಾದ ನಿಯಮ, ನಿರ್ದೇಶನವಿದ್ದರೆ ಪೊಲೀಸರ ಕಾರ್ಯನಿರ್ವಹಣೆಯೂ ಉನ್ನತ ಮಟ್ಟಕ್ಕೇರುತ್ತದೆ. ಆದ್ದರಿಂದ ಈ ಅವ್ಯವಹಾರಗಳಿಗೆ ಕಡಿವಾಣ ಹಾಕಬಹುದು’ ಎಂದು ಶೇಖಾವತ್ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಹೋದ ಒಂದು ವರ್ಷದಲ್ಲಿ ಒಟ್ಟು 12 ಮಂದಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟಿಗರು ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಚಾರಣೆಗೊಳಗಾಗಿದ್ದಾರೆ. ಈಚೆಗೆ ನಡೆದ ತಮಿಳುನಾಡು ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಫಿಕ್ಸಿಂಗ್ ಆರೋಪಗಳು ಕೇಳಿಬಂದಿವೆ. ಅಲ್ಲದೇ ಮಹಿಳಾ ಕ್ರಿಕೆಟ್ ಆಟಗಾರ್ತಿಯೊಬ್ಬರನ್ನು ಇಬ್ಬರು ಬುಕ್ಕಿಗಳು ಸಂಪರ್ಕಿಸಿದ ವಿಷಯವೂ ಬಹಿರಂಗವಾಗಿದೆ. ಮುಂಬೈ, ಕರ್ನಾಟಕ ಮತ್ತು ತಮಿಳುನಾಡುಗಳಿಂದ ಈ ಪ್ರಕರಣಗಳು ವರದಿಯಾಗಿವೆ.

ADVERTISEMENT

ಪುರುಷರ ಕ್ರಿಕೆಟ್‌ನಲ್ಲಿ ಇದುವರೆಗೆ ಫಿಕ್ಸಿಂಗ್ ದೂರುಗಳು ಕೇಳಿಬಂದಿದ್ದವು. ಇದೇ ಮೊದಲ ಸಲ ಮಹಿಳೆಯರ ವಿಭಾಗದಲ್ಲಿ ಇಂತಹದೊಂದು ಪ್ರಕರಣ ವರದಿಯಾಗಿದೆ. ಹೋದ ಫೆಬ್ರುವರಿಯಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿದೆ. ಸೋಮವಾರವಷ್ಟೇ ಐಸಿಸಿಯು ಇದರ ತನಿಖೆಗೆ ಸೂಚನೆ ನೀಡಿದೆ.

ಶೇಖಾವತ್ ಬಿಸಿಸಿಐಗೆ ನೇಮಕವಾಗುವ ಮುನ್ನ ರಾಜಸ್ಥಾನದ ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.