ADVERTISEMENT

ಐಪಿಎಲ್‌: ಟೆಂಡರ್‌ ದಾಖಲೆ ಖರೀದಿ ಅವಧಿ ವಿಸ್ತರಣೆ

ಎರಡು ಫ್ರಾಂಚೈಸ್‌ಗಳಿಗೆ ಅವಕಾಶ; ಬಿಸಿಸಿಐಗೆ ₹ 7000 ಕೋಟಿ ಮೊತ್ತ ಸಂಗ್ರಹದ ಗುರಿ

ಪಿಟಿಐ
Published 13 ಅಕ್ಟೋಬರ್ 2021, 12:17 IST
Last Updated 13 ಅಕ್ಟೋಬರ್ 2021, 12:17 IST
ಬಿಸಿಸಿಐ
ಬಿಸಿಸಿಐ   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಹೊಸ ತಂಡಗಳು ಟೆಂಡರ್‌ಗೆ ಸಂಬಂಧಿಸಿದ ದಾಖಲೆಗಳನ್ನು ಖರೀದಿಸಲು ನಿಗದಿ ಮಾಡಿರುವ ಅವಧಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಸ್ತರಿಸಿದೆ.

ಐಪಿಎಲ್‌ ಆಡಳಿತ ಸಮಿತಿಯು ಟೆಂಡರ್‌ಗೆ ಆಹ್ವಾನದ (ಐಟಿಟಿ) ದಾಖಲೆಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದು ₹ 10 ಮರುಪಾವತಿ ಇಲ್ಲದ ಮೊತ್ತವನ್ನು ಇದಕ್ಕಾಗಿ ನಿಗದಿ ಮಾಡಲಾಗಿತ್ತು. ದಾಖಲೆ ಖರೀದಿಗೆ ಆರಂಭದಲ್ಲಿ ಆಗಸ್ಟ್‌ 31 ಕೊನೆಯ ದಿನವಾಗಿತ್ತು. ನಂತರ ಅದನ್ನು ಅಕ್ಟೋಬರ್ 10ರ ವರೆಗೆ ವಿಸ್ತರಿಸಲಾಗಿತ್ತು. ಈಗ ಅವಧಿ ಇದೇ 20ರ ವರೆಗೆ ಮುಂದುವರಿಯಲಿದ್ದು ಹೊಸ ಎರಡು ಫ್ರಾಂಚೈಸ್‌ಗಳ ತಲಾ ವೆಚ್ಚ ₹ 3500 ಕೋಟಿಗೂ ಕಡಿಮೆ ಆಗುವುದಿಲ್ಲ. ಆಸಕ್ತ ಕಂಪನಿಗಳ ಮನವಿಯ ಮೇರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಹೇಳಲಾಗಿದೆ.

2022ರ ಐಪಿಎಲ್‌ನಲ್ಲಿ ಎರಡು ಹೊಸ ತಂಡಗಳನ್ನು ಸೇರಿಸಲು ಬಿಸಿಸಿಐ ನಿರ್ಧರಿಸಿದ್ದು ಅಹಮದಾಬಾದ್‌, ಲಖನೌ ಅಥವಾ ಪುಣೆಯ ಫ್ರಾಂಚೈಸ್‌ಗಳು ಇವುಗಳ ಮಾಲೀಕತ್ವ ಹೊಂದಿರಲಿವೆ. ಕೊಟಕ್‌ ಗ್ರೂಪ್‌, ಅರಬಿಂದೊ ಫಾರ್ಮ, ಟೊರೆಂಟ್ ಫಾರ್ಮ, ಆರ್‌ಪಿ–ಸಂಜೀವ್‌ ಗೋಯೆಂಕಾ ಗ್ರೂಪ್‌, ಬಿರ್ಲಾ ಗ್ರೂಪ್ ಮತ್ತು ಅದಾನಿ ಗ್ರೂಪ್‌ಗಳು ಹೊಸ ತಂಡಗಳನ್ನು ಕಣಕ್ಕೆ ಇಳಿಸಲು ಆಸಕ್ತಿ ತೋರಿವೆ.

ADVERTISEMENT

ಹೊಸ ತಂಡಗಳನ್ನು ಸೇರಿಸುವ ಮೂಲಕ ಒಟ್ಟು ಕನಿಷ್ಠ ₹7000 ಕೋಟಿ ಮೊತ್ತ ಸಂಗ್ರಹಿಸುವುದು ಬಿಸಿಸಿಐ ಉದ್ದೇಶ. ಪ್ರತಿ ತಂಡಕ್ಕೂ ಮೂಲ ಬೆಲೆಯಾಗಿ ₹2000 ಕೋಟಿ ನಿಗದಿ ಮಾಡಲಾಗಿದೆ. ಯುಎಇಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ಮೊದಲ ಪಂದ್ಯದ ಮರುದಿನವಾದ ಅಕ್ಟೋಬರ್‌ 25ರಂದು ದುಬೈನಲ್ಲಿ ಹೊಸ ತಂಡಗಳು ಅನಾವರಣಗೊಳ್ಳಲಿವೆ. ವಿಶ್ವಕಪ್‌ನ ಮೊದಲ ಹಣಾಹಣಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.