ADVERTISEMENT

‘ನಾಡಾ’ ವ್ಯಾಪ್ತಿಗೆ ಬರಲು ಒಪ್ಪಿದ ಬಿಸಿಸಿಐ

ಪಿಟಿಐ
Published 9 ಆಗಸ್ಟ್ 2019, 18:50 IST
Last Updated 9 ಆಗಸ್ಟ್ 2019, 18:50 IST
ಬಿಸಿಸಿಐ
ಬಿಸಿಸಿಐ   

ನವದೆಹಲಿ: ಕೆಲ ವರ್ಷಗಳ ಪ್ರತಿರೋಧದ ನಂತರ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆಗೂ, ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ತಡೆ ಘಟಕ (ನಾಡಾ) ಪರಿಧಿಯಲ್ಲಿ ಒಳಗೊಳ್ಳಲು ಶುಕ್ರವಾರ ಒಪ್ಪಿಕೊಂಡಿದೆ.

ಬಿಸಿಸಿಐ ಈಗ ನಾಡಾ ವ್ಯಾಪ್ತಿಗೆ ಬರಲಿರುವುದರಿಂದ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ ಸ್ವರೂಪ ತಳೆಯುವತ್ತ ಸಾಗಿದೆ. ‘ನಾಡಾ’ದ ಮದ್ದು ಸೇವನೆ ಪ್ರತಿಬಂಧಕ ನಿಯಮಗಳಿಗೆ ಒಳಗೊಳ್ಳುವುದಾಗಿ ಮಂಡಳಿ ಲಿಖಿತವಾಗಿ ಪತ್ರ ನೀಡಿದೆ ಎಂದು ಕೇಂದ್ರ ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್‌ ಜುಲಾನಿಯಾ ತಿಳಿಸಿದರು. ಜುಲಾನಿಯಾ ಅವರು ಶುಕ್ರವಾರ ‘ನಾಡಾ’ ಮಹಾ ನಿರ್ದೇಶಕ ನವೀನ್ ಅಗರವಾಲ್‌ ಅವರೊಂದಿಗೆ ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಜೋಹ್ರಿ ಮತ್ತು ಜನರಲ್‌ ಮ್ಯಾನೇಜರ್‌ (ಕ್ರಿಕೆಟ್‌ ನಿರ್ವಹಣೆ) ಸಬಾ ಕರೀಮ್‌ ಅವರನ್ನು ಭೇಟಿ ಮಾಡಿದ್ದರು.

‘ಕ್ರಿಕೆಟಿಗರೆಲ್ಲರ ಮದ್ದು ಸೇವನೆ ಪರೀಕ್ಷೆಯನ್ನು ಇನ್ನು ಮುಂದೆ ‘ನಾಡಾ’ ನಡೆಸಲಿದೆ’ ಎಂದರು ಜುಲಾನಿಯಾ.

ADVERTISEMENT

ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ ಆಗುವುದರಿಂದ, ಸರ್ಕಾರಿ ನಿಯಮಗಳ ಪ್ರಕಾರ ಬಿಸಿಸಿಐಗೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ಬರುವಂತೆಯೂ ಒತ್ತಡ ಹೆಚ್ಚಾಗಲಿದೆ.

‘ಉದ್ದೀಪನ ಮದ್ದು ಸೇವನೆ ಪರೀಕ್ಷೆ ಗುಣಮಟ್ಟ, ಪರೀಕ್ಷಕರ ಸಾಮರ್ಥ್ಯ ಮತ್ತು ಮಾದರಿ ಸಂಗ್ರಹ– ಈ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಬಿಸಿಸಿಐ ಸ್ಪಷ್ಟತೆ ಬಯಸಿತ್ತು. ಏನು ಸೌಲಭ್ಯ ಬೇಕೊ ಅದನ್ನು ನೀಡುತ್ತೇವೆ. ಆದರೆ ಅದಕ್ಕೆ ಪಾವತಿ ಮಾಡಬೇಕಾಗುತ್ತದೆ ಎಂದು ಮಂಡಳಿಗೆ ತಿಳಿಸಿದ್ದೇವೆ. ಆದರೆ ಈ ಸೌಲಭ್ಯಗಳು ಎಲ್ಲ ರಾಷ್ಟ್ರೀಯ ಫೆಡರೇಷನ್‌ಗಳಿಗೆ ಒಂದೇ ರೀತಿ ಇರುತ್ತದೆ. ಅವರೂ ನೆಲದ ಕಾನೂನನ್ನು ಪಾಲಿಸಬೇಕಾಗುತ್ತದೆ’ ಎಂದು ಜುಲಾನಿಯಾ ತಿಳಿಸಿದರು.

‘ಬಿಸಿಸಿಐ ಕಾನೂನು ಪಾಲಿಸಲಿದೆ. ನಾವು ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ.ಆ ಬಗ್ಗೆ ಗಮನಹರಿಸುವುದಾಗಿ ಕ್ರೀಡಾ ಇಲಾಖೆ ಕಾರ್ಯದರ್ಶಿ ಭರವಸೆ ನೀಡಿದ್ದಾರೆ. ಉತ್ತಮ ಗುಣಮಟ್ಟದ ಪರೀಕ್ಷೆ ನಡೆಸಲು ಅಗತ್ಯವಿರುವ ಹೆಚ್ಚುವರಿ ವೆಚ್ಚವನ್ನು ಭರಿಸುವುದಾಗಿ ನಾವು ಒಪ್ಪಿಕೊಂಡಿದ್ದೇವೆ’ ಎಂದು ಜೋಹ್ರಿ ತಿಳಿಸಿದರು.

ನಾಡಾವ್ಯಾಪ್ತಿಗೆ ಬರಲು ಬಿಸಿಸಿಐ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತು. ‘ಬಿಸಿಸಿಐ ಸ್ವಾಯತ್ತ ಸಂಸ್ಥೆ. ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ ಆಲ್ಲ. ನೆರವಿಗೆ ಸರ್ಕಾರವನ್ನು ಅವಲಂಬಿಸಿಲ್ಲ’ ಎಂದು ವಾದಿಸಿತ್ತು.

ಪಂದ್ಯಾವಳಿಯಿಲ್ಲದ ಸಮಯದಲ್ಲಿ ಪರೀಕ್ಷೆಗೆ ಒಳಪಡುವ ‘ವೇರಬೌಟ್ಸ್‌ ಕಲಮು’ ಚರ್ಚಾರ್ಹ ವಿಷಯವಾಗಿತ್ತು. ತಾರಾ ವರ್ಚಸ್ಸಿನ ಕೆಲವು ಆಟಗಾರರು ಇದು ತಮ್ಮ ಖಾಸಗಿತನ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ದೂರಿದ್ದರು.

ಈ ಹಿಂದೆ ಕ್ರೀಡಾ ಸಚಿವಾಲಯವೂ ‘ನಾಡಾ’ದ ಪರಿಧಿಯೊಳಕ್ಕೆ ಬರುವಂತೆ ಬಿಸಿಸಿಐಗೆ ಸೂಚಿಸುತ್ತಾ ಬಂದಿತ್ತು.

ಕಾರಣ: ಉದಯೋನ್ಮುಖ ಆಟಗಾರ ಪ್ರಥ್ವಿ ಶಾ ಅವರ ಉದ್ದೀಪನ ಮದ್ದು ಸೇವನೆ ಪರೀಕ್ಷೆಯ ಪ್ರಕರಣ ನಿರ್ವಹಣೆ ಸರಿಯಾಗಿ ಆಗದಿರುವುದು ಮತ್ತು ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ನೀತಿ ನಿರೂಪಣೆಗೆ ಸಂಬಂಧಿಸಿ ‘ಎಲ್ಲೆ ಮೀರುತ್ತಿರುವುದು’ ಬಿಸಿಸಿಐ ‘ನಾಡಾ’ ಪರಿಧಿಯೊಳಗೆ ಸೇರಲು ಕಾರಣವಾಗಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರದ ಒತ್ತಡಕ್ಕೆ ತಲೆಬಾಗುವ ನಿರ್ಧಾರದಿಂದಾಗಿಆರ್ಥಿಕವಾಗಿ ಬಲಾಢ್ಯವಾಗಿದ್ದರೂ, ನಾಡಾ ಒಪ್ಪಂದಕ್ಕೆ ಬಿಸಿಸಿಐ ಸಹಿ ಹಾಕುವ ಮೂಲಕ ಸ್ವಾಯತ್ತೆ ಕಳೆದುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ. ‘ಬಿಸಿಸಿಐ ಸಿಇಒ (ಜೋಹ್ರಿ) ಸರ್ಕಾರವನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅವರು ಸರ್ಕಾರದ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.