ADVERTISEMENT

IPL ವೇಳಾಪಟ್ಟಿ‌: ಸೆಪ್ಟೆಂಬರ್‌ 19ರಿಂದ ನವೆಂಬರ್‌ 3ರವರೆಗೆ

ಅಬುಧಾಬಿಯಲ್ಲಿ ಉದ್ಘಾಟನೆ ಪಂದ್ಯ; ಮುಂಬೈ ಇಂಡಿಯನ್ಸ್‌–ಚೆನ್ನೈ ಸೂಪರ್ ಕಿಂಗ್ಸ್‌ ಮುಖಾಮುಖಿ

ಪಿಟಿಐ
Published 6 ಸೆಪ್ಟೆಂಬರ್ 2020, 18:54 IST
Last Updated 6 ಸೆಪ್ಟೆಂಬರ್ 2020, 18:54 IST
ರೋಹಿತ್ ಶರ್ಮಾ ಮತ್ತು ಮಹೇಂದ್ರಸಿಂಗ್ ಧೋನಿ
ರೋಹಿತ್ ಶರ್ಮಾ ಮತ್ತು ಮಹೇಂದ್ರಸಿಂಗ್ ಧೋನಿ   
""

ದುಬೈ: ಅಂತೂ ಇಂತೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ–20 ಟೂರ್ನಿಯ ವೇಳಾಪಟ್ಟಿಯು ಭಾನುವಾರ ಬಿಡುಗಡೆಯಾಯಿತು.

ಇದೇ 19ರಂದು ಅಬುಧಾಬಿಯಲ್ಲಿ ನಡೆಯಲಿರುವ ಉದ್ಘಾಟನೆ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ಸ್ ಅಪ್ ಚೆನ್ನೈ ಸೂಪರ್ ಕಿಂಗ್ಸ್‌ ಮುಖಾಮುಖಿಯಾಗಲಿವೆ.

20ರಂದು ನಡೆಯುವ ಟೂರ್ನಿಯ ಎರಡನೇ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕಣಕ್ಕಿಳಿಯಲಿದೆ.

ADVERTISEMENT

ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಸೆ.21ರಂದು ಸನ್‌ರೈಸರ್ಸ್‌ ಎದುರು ಸೆಣಸಲಿದೆ. ಈ ಎರಡೂ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.

ಸದ್ಯ ನವೆಂಬರ್‌ 3ರವರೆಗೆ ನಡೆಯುವ ಲೀಗ್ ಹಂತದ 48 ಪಂದ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟೂರ್ನಿಯ ಹತ್ತು ಡಬಲ್ ಹೆಡರ್ (ಒಂದೇ ದಿನ ಎರಡು ಪಂದ್ಯಗಳು) ನಡೆಯಲಿವೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ಪಂದ್ಯಗಳು ಆರಂಭವಾಗುತ್ತವೆ.

ದುಬೈನಲ್ಲಿ 24, ಅಬುಧಾಬಿಯಲ್ಲಿ 20 ಮತ್ತು ಶಾರ್ಜಾದಲ್ಲಿ 12 ಪಂದ್ಯಗಳು ನಡೆಯಲಿವೆ.

ಪ್ಲೇಆಫ್‌ ಮತ್ತು ಫೈನಲ್‌ ಪಂದ್ಯಗಳ ಸ್ಥಳ ಹಾಗೂ ದಿನಾಂಕಗಳನ್ನು ಪ್ರಕಟಿಸಿಲ್ಲ. ನವೆಂಬರ್ 10ರಂದು ಫೈನಲ್ ನಡೆಸಲಾಗುವುದು ಎಂದು ಈ ಮೊದಲು ಹೇಳಲಾಗಿದೆ.

ಭಾರತದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಟೂರ್ನಿಯನ್ನು ಯುಎಇಯಲ್ಲಿ ನಡೆಸಲಾಗುತ್ತಿದೆ. ಪಂದ್ಯಗಳು ನಡೆಯುವ ನಗರಗಳಲ್ಲಿ ಕ್ವಾರಂಟೈನ್ ನಿಯಮಗಳು ಭಿನ್ನವಾಗಿದ್ದ ಕಾರಣ ವೇಳಾಪಟ್ಟಿ ಸಿದ್ಧಪಡಿಸುವುದು ವಿಳಂಬವಾಗಿದೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.