ADVERTISEMENT

ವಿಜಯೋತ್ಸವ ಮಾರ್ಗಸೂಚಿ: 3 ಸದಸ್ಯರ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 18:34 IST
Last Updated 14 ಜೂನ್ 2025, 18:34 IST
-
-   

ನವದೆಹಲಿ (ಪಿಟಿಐ): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಪ್ರಶಸ್ತಿ ಜಯಿಸಿದ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ಕುರಿತು ಶನಿವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲಾಯಿತು.

ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಕ್ರಮವಹಿಸಲು ಮಾರ್ಗಸೂಚಿ ರೂಪಿಸುವ ನಿರ್ಧಾರಕೈಗೊಳ್ಳಲಾಯಿತು. ಅದಕ್ಕಾಗಿ ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಯಿತು. 

‘ಬೆಂಗಳೂರಿನಲ್ಲಿ ಸಂಭವಿಸಿದಂತಹ ದುರ್ಘಟನೆಗಳು ಮರುಕಳಿಸದಂತೆ ಕ್ರಮವಹಿಸುವುದು ಅಗತ್ಯವಾಗಿದೆ. ಆದ್ದರಿಂದ ಒಂದು ಮಾರ್ಗಸೂಚಿ ರೂಪಿಸಲು ಸಮಿತಿಯನ್ನು ರಚಿಸಲಾಗಿದೆ’ ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ADVERTISEMENT

ಜೂನ್ 4ರಂದು ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಮೃತರಾಗಿದ್ದರು. 56 ಮಂದಿ ಗಾಯಗೊಂಡಿದ್ದರು. 

ರಣಜಿ ಟ್ರೋಫಿ ಮಾದರಿ ಪರಿಷ್ಕರಣೆ

ಅಕ್ಟೋಬರ್ 15ರಿಂದ ಫೆಬ್ರುವರಿ 28ರವರೆಗೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಸಲದ ಟೂರ್ನಿಯು ಎರಡು ಭಾಗಗಳಲ್ಲಿ ನಡೆಯಲಿದೆ.  

ಮೊದಲ ಹಂತವು ಅ.15 ರಿಂದ ನ.19ರವರೆಗೆ ನಡೆಯುವುದು. ಎರಡನೇಯದ್ದು ಜ.22ರಿಂದ ಫೆ.1 ರವರೆಗೆ ನಡೆಯಲಿದೆ. ನಾಕೌಟ್ ಹಂತವು ಫೆ. 6 ರಿಂದ 28ರವರೆಗೆ ಆಯೋಜನೆಯಾಗಲಿದೆ. 

ದುಲೀಪ್ ಟ್ರೋಫಿ ಟೂರ್ನಿಯನ್ನು ಮತ್ತೆ ವಲಯ ತಂಡಗಳ ಮಾದರಿಯಲ್ಲಿ ನಡೆಸಲಾಗುವುದು. ಆಗಸ್ಟ್ 28ರಿಂದ ಸೆಪ್ಟೆಂಬರ್‌ 15ರವರೆಗೆ ಟೂರ್ನಿ ನಡೆಯಲಿದೆ. ತಂಡಗಳನ್ನು ವಲಯ  ಆಯ್ಕೆ ಸಮಿತಿಗಳು ಆಯ್ಕೆ ಮಾಡಲಿವೆ ಎಂದು ಬಿಸಿಸಿಐ ತಿಳಿಸಿದೆ.

ಇರಾನಿ ಕಪ್ ಟೂರ್ನಿಯು ಅಕ್ಟೋಬರ್ 1 ರಿಂದ 5ರವರೆಗೆನಡೆಯುವುದು.

ಟಿ20 ಸೂಪರ್ ಲೀಗ್

ಸೈಯದ್ ಮುಷ್ತಾದ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಪ್ಲೇಟ್ ಗುಂಪಿನಲ್ಲಿ ಸೂಪರ್ ಲೀಗ್  ಜಾರಿ ಮಾಡಲಾಗುತ್ತಿದೆ. ಹೋದ ವರ್ಷದವರೆಗೂ ಕ್ವಾರ್ಟರ್‌ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಹಂತದಲ್ಲಿ ನಾಕೌಟ್ ಪಂದ್ಯಗಳು ನಡೆದಿದ್ದವು. ಈಗ ಸೂಪರ್ ಲೀಗ್ ಮಾಡುವುದರಿಂದ 3 ಪಂದ್ಯಗಳು ಹೆಚ್ಚಾಗಲಿವೆ. 

ಎ ಮತ್ತು ಬಿ ಗುಂಪಿನ ಅಗ್ರ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಟೂರ್ನಿಯು ನವೆಂಬರ್‌ 26 ರಿಂದ ಡಿಸೆಂಬರ್ 18ರವರೆಗೆ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.