ADVERTISEMENT

ದೇಶಿ ಕ್ರಿಕೆಟ್‌ನಲ್ಲಿ ಆಡುವುದು ಕಡ್ಡಾಯ: ಆಟಗಾರರಿಗೆ ಬಿಸಿಸಿಐನಿಂದ 10 ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 14:09 IST
Last Updated 17 ಜನವರಿ 2025, 14:09 IST
<div class="paragraphs"><p>ಬಿಸಿಸಿಐ&nbsp;</p></div>

ಬಿಸಿಸಿಐ 

   

ನವದೆಹಲಿ: ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಬೇಕಾದರೆ ಕಡ್ಡಾಯವಾಗಿ ದೇಶಿ ಕ್ರಿಕೆಟ್‌ನಲ್ಲಿ ಆಡಬೇಕು, ವಿದೇಶ ಕ್ರಿಕೆಟ್‌ ಪ್ರವಾಸದ ವೇಳೆ ಪತ್ನಿ, ಕುಟುಂಬ ಸದಸ್ಯರನ್ನು ಜೊತೆಗೆ ಇರಿಸಿಕೊಳ್ಳುವ ಅವಧಿ ಕಡಿತ ಸೇರಿದಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಆಟಗಾರರು ಪಾಲಿಸಬೇಕಾದ 10 ಮಾರ್ಗಸೂಚಿಗಳನ್ನು ಗುರುವಾರ ರಾತ್ರಿ ಪ್ರಕಟಿಸಿದೆ.

ತಂಡದಲ್ಲಿ ‘ಸ್ಟಾರ್‌ ಸಂಸ್ಕೃತಿ’ಗೆ ಕೊನೆಹಾಡುವುದು, ಶಿಸ್ತು ಮತ್ತು ಒಗ್ಗಟ್ಟು ಮೂಡಿಸುವ ಉದ್ದೇಶದಿಂದ ಈ ನಿಯಮಗಳನ್ನು ಮಂಡಳಿಯು ಜಾರಿಗೆ ತಂದಿದೆ.

ADVERTISEMENT

ಇದರಂತೆ ತಂಡದ ಎಲ್ಲ ಆಟಗಾರರು ಇನ್ನು ಮುಂದೆ ದೇಶಿ ಕ್ರಿಕೆಟ್‌ನಲ್ಲಿ ಆಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ರಣಜಿ ಸೇರಿದಂತೆ ದೇಶದ ಪ್ರಮುಖ ಟೂರ್ನಿಗಳನ್ನು ತಪ್ಪಿಸಿಕೊಳ್ಳುತ್ತಿದ್ದ ಆಟಗಾರರ ಮೇಲೆ ಚಾಟಿಬೀಸಿದೆ. ತಾರಾ ವರ್ಚಸ್ಸಿನ ಆಟಗಾರರು ದೇಶಿ ಕ್ರಿಕೆಟ್‌ ತಪ್ಪಿಸಿಕೊಳ್ಳುತ್ತಿದ್ದರು. ವಿರಾಟ್‌ ಕೊಹ್ಲಿ 2012ರ ನಂತರ ಒಂದೂ ರಣಜಿ ಟ್ರೋಫಿ ಪಂದ್ಯ ಆಡಿಲ್ಲ. ರೋಹಿತ್‌ ಶರ್ಮಾ 2015ರಲ್ಲಿ ಕೊನೆಯ ಬಾರಿ ರಣಜಿ ಟ್ರೋಫಿ ಪಂದ್ಯ ಆಡಿದ್ದರು. 

ಇತ್ತೀಚಿನ ಸರಣಿಗಳಲ್ಲಿ ತಂಡದ ಕಳಪೆ ನಿರ್ವಹಣೆಯ ಕಾರಣ ಈ ರೀತಿಯ ನಿರ್ಬಂಧಗಳನ್ನು ಹೇರುವಂತೆ ಮುಖ್ಯ ಕೋಚ್‌ ಗೌತಮ್ ಗಂಭೀರ್‌ ಅವರು ಪರಾಮರ್ಶೆ ಸಭೆಯಲ್ಲಿ ಸಲಹೆ ನೀಡಿದ್ದರು ಎನ್ನಲಾಗಿದೆ. ತವರಿನಲ್ಲಿ ನ್ಯೂಜಿಲೆಂಡ್ ಎದುರು 0–3 ಮುಖಭಂಗ ಅನುಭವಿಸಿದ್ದ ಭಾರತ, ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲೂ 1–3 ಹಿನ್ನಡೆ ಅನುಭವಿಸಿತ್ತು. ಹತ್ತು ವರ್ಷಗಳ ನಂತರ ಬಾರ್ಡರ್‌–ಗಾವಸ್ಕರ್‌ ಟ್ರೋಫಿ ಕಳೆದುಕೊಂಡಿತ್ತು.

ನಿಯಮಗಳನ್ನು ಪಾಲಿಸದಿದ್ದಲ್ಲಿ ಕೇಂದ್ರೀಯ ಗುತ್ತಿಗೆಯಲ್ಲಿ ಸಂಭಾವನೆ ಕಡಿತ ಮತ್ತು ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ನಿಷೇಧ ಹೇರಲಾಗುವುದು ಎಂದು ಮಂಡಳಿ ಎಚ್ಚರಿಕೆ ನೀಡಿದೆ.

ನಿಯಮದಲ್ಲಿ ವಿನಾಯಿತಿ ಅಗತ್ಯವಿದ್ದಲ್ಲಿ ಆಟಗಾರರು ಮುಖ್ಯ ಕೋಚ್‌ ಗಂಭೀರ್ ಅಥವಾ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರಕರ್ ಅವರಿಂದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. 45 ದಿನಗಳಿಗಿಂತ ಹೆಚ್ಚು ಅವಧಿ ಹೊಂದಿರುವ ವಿದೇಶ ಪ್ರವಾಸದ ವೇಳೆ ಆಟಗಾರರ ಜೊತೆ ಕುಟುಂಬ ಸದಸ್ಯರು ಎರಡು ವಾರ ಮಾತ್ರ ಇರಬಹುದು.

ಇತರ ಕೆಲವು ನಿಯಮಗಳು:

* ಸರಣಿಯ ವೇಳೆ ಆಟಗಾರರ ವೈಯಕ್ತಿಕ ಮ್ಯಾನೇಜರ್‌, ಬಾಣಸಿಗರಿಗೆ (ಷೆಫ್‌) ಅವಕಾಶವಿಲ್ಲ. ವಿಶೇಷ ಸಂದರ್ಭದಲ್ಲಿ ಬಿಸಿಸಿಐ ಅನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ.

* ಪ್ರವಾಸದ ವೇಳೆ ವಾಣಿಜ್ಯ ಜಾಹೀರಾತು ಶೂಟಿಂಗ್‌ನಲ್ಲಿ ಭಾಗಿಯಾವುದಕ್ಕೆ ನಿಷೇಧ ಹೇರಲಾಗಿದೆ.

* ಆಟಗಾರರ ಪಂದ್ಯಕ್ಕೆ ತೆರಳುವಾಗ ಮತ್ತು ಹಿಂತಿರುಗುವಾಗ, ನೆಟ್‌ ಪ್ರಾಕ್ಟೀಸ್‌ಗೆ ತೆರಳುವ ವೇಳೆ ಕುಟುಂಬ ಸದಸ್ಯರು ಅದೇ ಬಸ್‌ನಲ್ಲಿ ಪಯಣಿಸುವಂತಿಲ್ಲ. ಎಲ್ಲ ಆಟಗಾರರು ಟೀಮ್‌ ಬಸ್‌ನಲ್ಲೇ ತೆರಳಬೇಕು. ಪ್ರತ್ಯೇಕ ವ್ಯವಸ್ಥೆ ಮಾಡುವಂತಿಲ್ಲ.

* ವಿದೇಶ ಪ್ರವಾಸದ ವೇಳೆ ಒಯ್ಯುವ ಬ್ಯಾಗೇಜ್‌ ತೂಕಕ್ಕೆ ಮಿತಿ ವಿಧಿಸಲಾಗಿದೆ. ದೀರ್ಘ ಪ್ರವಾಸಕ್ಕೆ ತೆರಳುವ ವೇಳೆ ಬ್ಯಾಗೇಜ್ ತೂಕ 150 ಕೆ.ಜಿ. ಮೀರುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.