ADVERTISEMENT

ಸ್ಥಳೀಯ ಮಟ್ಟದಲ್ಲಿ ಕೌಶಲಾಧಾರಿತ ತರಬೇತಿಗೆ ಚಿಂತನೆ

ಗುತ್ತಿಗೆ ಹೊಂದಿದ ಆಟಗಾರರಿಗೆ ತರಬೇತಿ ಶಿಬಿರ ನಡೆಸುವುದಿಲ್ಲ: ಬಿಸಿಸಿಐ ಹೇಳಿಕೆ

ಪಿಟಿಐ
Published 18 ಮೇ 2020, 19:30 IST
Last Updated 18 ಮೇ 2020, 19:30 IST
ಅರುಣ್‌ ಸಿಂಗ್‌ ಧುಮಾಲ್‌ (ಬಲ)
ಅರುಣ್‌ ಸಿಂಗ್‌ ಧುಮಾಲ್‌ (ಬಲ)   

ನವದೆಹಲಿ: ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಂಗಣಗಳನ್ನು ಅಥ್ಲೀಟುಗಳಿಗೆ ಮುಕ್ತಗೊಳಿಸಲು ಅವಕಾಶ ನೀಡಿದ್ದರೂ, ಮಂಡಳಿಯ ಗುತ್ತಿಗೆಗೆ ಒಳಪಟ್ಟಿರುವ ಕ್ರಿಕೆಟ್‌ ಆಟಗಾರರಿಗೆ ತರಬೇತಿ ಶಿಬಿರ ಆರಂಭಿಸುವ ಯಾವುದೇ ಯೋಚನೆ ಇಲ್ಲ ಎಂದು ಬಿಸಿಸಿಐ ಹೇಳಿದೆ. ಬದಲಾಗಿ ರಾಜ್ಯ ಅಸೋಸಿಯೇಷನ್‌ಗಳ ಸಹಯೋಗದೊಂದಿಗೆ ಸ್ಥಳೀಯ ಮಟ್ಟದಲ್ಲಿ ಅಭ್ಯಾಸ ಆರಂಭಿಸಲು ಅವಕಾಶ ನೀಡುವ ಕುರಿತು ಚಿಂತನೆ ನಡೆಸಿದೆ.

ಕೇಂದ್ರ ಗೃಹ ಸಚಿವಾಲಯವು ಭಾನುವಾರ ಹೊರಡಿಸಿರುವ ನಾಲ್ಕನೇ ಹಂತದ ಲಾಕ್‌ಡೌನ್‌ನ (ಮೇ 31ರವರೆಗೆ) ಮಾರ್ಗಸೂಚಿಗಳಲ್ಲಿ, ಕ್ರೀಡಾ ಸಂಕೀರ್ಣ ಹಾಗೂ ಅಂಗಣಗಳನ್ನು ಮುಕ್ತಗೊಳಿಸುವುದಾಗಿ ಹೇಳಿತ್ತು. ಆದರೆ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಅಂದರೆ ಆಟಗಾರರು ವೈಯಕ್ತಿಕವಾಗಿ ತರಬೇತಿ ಆರಂಭಿಸಬಹುದು ಎಂಬುದರ ಸೂಚನೆ ಇದಾಗಿದೆ.

‘ಮೇ 31ರವರೆಗಿನ ವಿಮಾನಯಾನ ನಿರ್ಬಂಧಗಳು ಹಾಗೂ ಜನರ ಓಡಾಟವನ್ನು ಗಮನದಲ್ಲಿಟ್ಟುಕೊಂಡು, ಗುತ್ತಿಗೆ ಹೊಂದಿದ ಆಟಗಾರರಿಗೆ ಕೌಶಲ ಆಧಾರಿತ ತರಬೇತಿ ಶಿಬಿರ ಆರಂಭಿಸುವ ಕುರಿತು ಕಾದು ನೋಡುತ್ತೇವೆ’ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್‌ ಸೋಮವಾರ ರಾತ್ರಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದರು.

ADVERTISEMENT

‘ರಾಜ್ಯ ಹಂತದಲ್ಲಿ ಜಾರಿ ಮಾಡಲಾಗಿರುವ ಲಾಕ್‌ಡೌನ್‌ನ ಮಾರ್ಗಸೂಚಿಗಳನ್ನು ಅಧ್ಯಯನ ಮಾಡಲಾಗುತ್ತಿದೆ. ರಾಜ್ಯ ಸಂಸ್ಥೆಗಳೊಂದಿಗೆ ಚರ್ಚಿಸಿ ಸ್ಥಳೀಯ ಮಟ್ಟದಲ್ಲಿ ಕೌಶಲ ಆಧಾರಿತ ತರಬೇತಿ ಆರಂಭಿಸಲು ರೂಪುರೇಷೆ ಸಿದ್ಧಪಡಿಸಲಾಗುವುದು’ ಎಂದು ಧುಮಾಲ್‌ ಹೇಳಿದ್ದರು.

‘ಕೊರೊನಾ ಹಿನ್ನೆಲೆಯಲ್ಲಿ ಉಂಟಾದ ಬಿಕ್ಕಟ್ಟಿನಲ್ಲಿ ಸುಧಾರಣೆ ಬಂದ ಬಳಿಕ, ಬಿಸಿಸಿಐ ಪದಾಧಿಕಾರಿಗಳು ತಂಡದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಇಡೀ ತಂಡಕ್ಕಾಗಿ ಸೂಕ್ತ ಯೋಜನೆ ರೂಪಿಸಲಿದ್ದಾರೆ. ಆಟಗಾರರ ಸುರಕ್ಷತೆ ಬಹಳ ಮುಖ್ಯ’ ಎಂದು ಅವರು‌ ನುಡಿದರು.

ಕೊರೊನಾ ಮಾಹಾಮಾರಿಯಿಂದ ಭಾರತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಮೂರು ಸಾವಿರ ಸಮೀಪಿಸಿದೆ. 95,000ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ದೃಢಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.