ನವದೆಹಲಿ: ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯಲ್ಲಿ ಖಾಲಿ ಇರುವ ಎರಡು ಸ್ಥಾನಗಳ ಭರ್ತಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ಅರ್ಜಿ ಆಹ್ವಾನಿಸಿದೆ. ಜೊತೆಗೆ ಮಹಿಳಾ ತಂಡದ ಆಯ್ಕೆ ಸಮಿತಿಯಲ್ಲಿನ ನಾಲ್ಕು ಸ್ಥಾನಗಳ ಭರ್ತಿಗೂ ಬಿಸಿಸಿಐ ಮುಂದಾಗಿದೆ.
ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯ ಸದಸ್ಯ ಎಸ್. ಶರತ್ ಅವರು ಬಿಸಿಸಿಐ ಜೂನಿಯರ್ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಪುನರ್ ನೇಮಕವಾಗಿದ್ದಾರೆ. ಜೊತೆಗೆ, ಎಸ್.ಎಸ್. ದಾಸ್ ಅಥವಾ ಸುಬ್ರತೊ ಬ್ಯಾನೆರ್ಜಿ ಅವರನ್ನು ಸಮಿತಿಯಿಂದ ಕೈಬಿಟ್ಟು ಆ ಜಾಗಕ್ಕೆ ಮತ್ತೊಬ್ಬರನ್ನು ನೇಮಿಸಲು ಬಿಸಿಸಿಐ ಮುಂದಾಗಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಜೂನಿಯರ್ ಆಯ್ಕೆ ಸಮಿತಿಯ ಮುಖ್ಯಸ್ಥ, ಕರ್ನಾಟಕದ ತಿಲಕ್ ನಾಯ್ಡು ಅವರ ಕಾರ್ಯಕ್ಷಮತೆ ಬಿಸಿಸಿಐಗೆ ತೃಪ್ತಿ ತಂದಿಲ್ಲ ಎಂದು ಮೂಲಗಳು ಹೇಳಿವೆ. ಅಲ್ಲದೆ, ಶರತ್ ಅವರು 2023ರ ವರೆಗೆ ಜೂನಿಯರ್ ಸಮಿತಿಯ ಮುಖ್ಯಸ್ಥರಾಗಿದ್ದು, ಯುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹಾಗಾಗಿ ಅವರನ್ನು ಮತ್ತೆ ಅದೇ ಸ್ಥಾನಕ್ಕೆ ಕೂರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ನೀತು ಡೇವಿಡ್ ನೇತೃತ್ವದ ಮಹಿಳಾ ತಂಡದ ಆಯ್ಕೆ ಸಮಿತಿಯ ಪುನರ್ ರಚನೆಗೆ ಬಿಸಿಸಿಐ ನಿರ್ಧರಿಸಿದ್ದು, ಹಾಲಿ ಸದಸ್ಯೆ ಶ್ಯಾಮ ಡೆ ಶಾ ಅವರನ್ನು ಹೊರತುಪಡಿಸಿ ಉಳಿದವರನ್ನು ಕೈಬಿಡಲಾಗುತ್ತದೆ ಎಂದು ತಿಳಿದುಬಂದಿದೆ.
ಅರ್ಹತಾ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 10 ಕೊನೆಯ ದಿನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.