ADVERTISEMENT

ನಾಳೆ ಐಸಿಸಿ ಸಭೆ; ವಿಶ್ವಕಪ್ ನಿರ್ಧಾರಕ್ಕೆ ಕಾಲಾವಕಾಶ ಕೋರಲಿದೆ ಬಿಸಿಸಿಐ?

ಕೋವಿಡ್ ಕಾಲದ ಸ್ಥಿತಿಗತಿ ವಿಶ್ಲೇಷಣೆ ಸಾಧ್ಯತೆ

ಪಿಟಿಐ
Published 31 ಮೇ 2021, 11:08 IST
Last Updated 31 ಮೇ 2021, 11:08 IST
ಐಸಿಸಿ
ಐಸಿಸಿ   

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಆಡಳಿತ ಮಂಡಳಿ ಸಭೆ ವರ್ಚುವಲ್ ಆಗಿ ಮಂಗಳವಾರ ನಡೆಯಲಿದ್ದು ಟಿ20 ವಿಶ್ವಕಪ್ ಆಯೋಜನೆ ಬಗ್ಗೆ ನಿರ್ಧಾರ ಕೈಗೊಳ್ಳಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ಸಮಯಾವಕಾಶ ಕೋರುವ ಸಾಧ್ಯತೆ ಇದೆ.

ಸಭೆಯಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದುಬೈಗೆ ತೆರಳಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಅವರು ವರ್ಚುವಲ್ ಆಗಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿ ಆಯೋಜನೆ ಬಗ್ಗೆ ಎಮಿರೇಟ್ ಕ್ರಿಕೆಟ್ ಮಂಡಳಿ ಜೊತೆ ಚರ್ಚಿಸಲು ಅವರು ದುಬೈಗೆ ಹೋಗಿದ್ದಾರೆ.

ಕೋವಿಡ್ ಕಾಲದಲ್ಲಿ ಕ್ರಿಕೆಟ್ ಟೂರ್ನಿಗಳ ಸ್ಥಿತಿಗತಿಗಳ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ. ಅದು ಬಿಟ್ಟರೆ ವಿಶೇಷವಾಗಿ ಚರ್ಚಿಸಲು ಗಂಭೀರ ವಿಷಯಗಳು ಇಲ್ಲ. ವಿಶ್ವಕಪ್ ಟೂರ್ನಿಗೆ ಸಂಬಂಧಿಸಿ ಸಭೆಯಲ್ಲಿ ಚರ್ಚಿಸಿದ ನಂತರ ಜುಲೈ ಒಂದರಂದು ನಡೆಯಲಿರುವ ವಿಶೇಷ ಸಭೆಯಲ್ಲಿ ಬಿಸಿಸಿಐ ತೀರ್ಮಾನ ಕೈಗೊಳ್ಳಲಿದೆ. ಜುಲೈ 18ರಿಂದ ನಡೆಯಲಿರುವ ವಾರ್ಷಿಕ ಸಮಾವೇಶದಲ್ಲಿ ಐಸಿಸಿ ಅಂತಿಮ ನಿರ್ಧಾರ ಪ್ರಕಟಿಸಲಿದೆ.

ADVERTISEMENT

‘ದೇಶದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೂ ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬರಲಿಲ್ಲ. ಹೀಗಾಗಿ ಟೂರ್ನಿ ಆಯೋಜನೆಗೆ ಸಂಬಂಧಿಸಿ ಭರವಸೆ ಕೊಡಲು ಸಾಧ್ಯವಿಲ್ಲ. ಅಧ್ಯಕ್ಷರು ಮತ್ತು ಕಾರ್ಯದರ್ಶಿ ಒಂದು ತಿಂಗಳ ಕಾಲಾವಕಾಶ ಕೋರಲು ಸಜ್ಜಾಗಿದ್ದಾರೆ. ಸರ್ಕಾರದ ಜೊತೆಯೂ ನಿರಂತರ ಸಂಪರ್ಕದಲ್ಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಐಸಿಸಿ ಆಯೋಜಿಸುವ ಅಂತರರಾಷ್ಟ್ರೀಯ ಟೂರ್ನಿಗಳಿಗೆ ಸಂಬಂಧಿಸಿ ತೆರಿಗೆ ರಿಯಾಯಿತಿ ಪಡೆಯುವ ಕುರಿತು ಕೂಡ ಗೊಂದಲಗಳಿವೆ. ಸರ್ಕಾರದ ಜೊತೆ ಈ ಕುರಿತು ನಿರಂತರ ಮಾತುಕತೆ ನಡೆಯುತ್ತಿದೆ. ‘ಕೋವಿಡ್‌ನಿಂದ ಉಂಟಾಗಿರುವ ವಿಷಮ ಸ್ಥಿತಿಯಲ್ಲೂ ಕ್ರಿಕೆಟ್ ಟೂರ್ನಿಗೆ ಭಾರತ ಸರ್ಕಾರ ₹ 1000 ಕೋಟಿ ತೆರಿಗೆ ವಿನಾಯಿತಿ ನೀಡಲು ಸಿದ್ಧವಿದೆ. ಇದು ಶ್ಲಾಘನೀಯ ಬೆಳವಣಿಗೆ’ ಎ‌ಂದು ಮೂಲಗಳು ಹೇಳಿವೆ.

ಭವಿಷ್ಯದ ಕಾರ್ಯಯೋಜನೆಗಳು
ದ್ವಿಪಕ್ಷೀಯ ಸರಣಿಗಳನ್ನು ಹೊರತುಪಡಿಸಿ 2023ರಿಂದ 2031ರ ವರೆಗಿನ ತಂಡಗಳ ಪ್ರವಾಸ ಮತ್ತು ಟೂರ್ನಿಗಳಿಗೆ ಸಂಬಂಧಿಸಿಯೂ ಐಸಿಸಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಬಗ್ಗೆಯೂ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಮಹಿಳಾ ಕ್ರಿಕೆಟ್‌, 2022ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತ ತಂಡದ ಪಾಲ್ಗೊಳ್ಳುವಿಕೆ ಮತ್ತು ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗಲು ಅದರಿಂದ ಸಿಗಬಹುದಾದ ಪ್ರೇರಣೆ ಇತ್ಯಾದಿ ವಿಷಯಗಳು ಕೂಡ ಚರ್ಚೆಗೆ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.