ADVERTISEMENT

ಐಪಿಎಲ್‌ನಲ್ಲಿ 30 ಸಾವಿರ ಆರ್‌ಟಿಪಿಸಿಆರ್ ಟೆಸ್ಟ್

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 16:47 IST
Last Updated 8 ಸೆಪ್ಟೆಂಬರ್ 2021, 16:47 IST
ವಿರಾಟ್ ಕೊಹ್ಲಿ–ರೋಹಿತ್ ಶರ್ಮಾ   –ಸಾಂದರ್ಭಿಕ ಚಿತ್ರ
ವಿರಾಟ್ ಕೊಹ್ಲಿ–ರೋಹಿತ್ ಶರ್ಮಾ   –ಸಾಂದರ್ಭಿಕ ಚಿತ್ರ   

ದುಬೈ (ಪಿಟಿಐ): ಇದೇ ತಿಂಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ 30 ಸಾವಿರ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.

ವೈದ್ಯಕೀಯ ಸೇವೆ ನೀಡುವ ವಿಪಿಎಸ್‌ ಹೆಲ್ತ್‌ಕೇರ್ ಈ ಪರೀಕ್ಷೆಗಳನ್ನು ನಡೆಸುವುದು. ಇದೇ 19ರಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಒಟ್ಟು 31 ಪಂದ್ಯಗಳು ಇಲ್ಲಿ ನಡೆಯಲಿವೆ. ಈ ಸಂದರ್ಭದಲ್ಲಿ ಆಟಗಾರರ ಆರೋಗ್ಯ ಪರೀಕ್ಷೆ, ಚಿಕಿತ್ಸೆ ಮತ್ತು ಔಷಧೋಪಚಾರಗಳನ್ನು ಈ ಸಂಸ್ಥೆಯೇ ನಿರ್ವಹಿಸಲಿದೆ.

ಆಟಗಾರರು ಗಾಯಗೊಂಡಾಗ ಅಥವಾ ಇನ್ನಿತರ ಅನಾರೋಗ್ಯದಿಂದ ಬಳಲಿದಾಗ ಚಿಕಿತ್ಸೆಗಾಗಿ ಐಪಿಎಲ್ ಬಯೋಬಬಲ್‌ನಿಂದ ಹೊರಗಡೆ ಹೋಗುವುದನ್ನು ತಡೆಯಲು ಕ್ರಮಕೈಗೊಳ್ಳಲಾಗಿದೆ. ಅದಕ್ಕಾಗಿ ವೈದ್ಯಕೀಯ ಮತ್ತು ನರ್ಸಿಂಗ್ ಸಿಬ್ಬಂದಿಯನ್ನು ಬಯೋಬಬಲ್‌ ಇರುವ ಹೋಟೆಲ್‌ನೊಳಗೇ ನಿಯೋಜಿಸಲಾಗಿದೆ.

ADVERTISEMENT

ದುಬೈ ಮತ್ತು ಅಬುಧಾಬಿಯಲ್ಲಿ ತಂಡಗಳು ತಂಗಲಿರುವ 14 ಹೋಟೆಲ್‌ಗಳ 750 ಸಿಬ್ಬಂದಿಯನ್ನು ಆರ್‌ಟಿಪಿಸಿಆರ್ ಪರೀಕ್ಷೆಗೊಳಪಡಿಸಲಾಗಿದೆ.

ಟೂರ್ನಿಯ ಸಂದರ್ಭದಲ್ಲಿ ಪ್ರತಿದಿನವೂ ಎರಡು ಸಾವಿರ ಆರ್‌ಟಿಪಿಸಿಆರ್ ಪರೀಕ್ಷೆ ಮಾಡುವ ಸಾಮರ್ಥ್ಯವನ್ನು ವಿಪಿಎಸ್ ಹೆಲ್ತ್‌ಕೇರ್ ತಂಡವು ಹೊಂದಿದೆ.

ಹೋದ ಏಪ್ರಿಲ್‌–ಮೇ ನಲ್ಲಿ ಐಪಿಎಲ್ ಟೂರ್ನಿಯ ಮೊದಲ ಹಂತವು ಭಾರತದಲ್ಲಿಯೇ ಆಯೋಜನೆಗೊಂಡಿತ್ತು. ಆದರೆ ಬಯೋಬಬಲ್‌ ವ್ಯವಸ್ಥೆಯಲ್ಲಿಯೇ ಕೊರೊನಾ ಸೋಂಕು ಹರಡಿ, ಕೆಲವು ಆಟಗಾರರು ಸೋಂಕಿತರಾಗಿದ್ದರು. ಅದರಿಂದಾಗಿ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿತ್ತು.

ಐಪಿಎಲ್ ಎರಡನೇ ಲೇಗ್‌ ನಂತರ ಐಸಿಸಿ ಟ್ವೆಂಟಿ–20 ವಿಶ್ವಕಪ್ ಟೂರ್ನಿಗೂ ಯುಎಇ ಆತಿಥ್ಯ ವಹಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.