ADVERTISEMENT

ರಾಷ್ಟ್ರೀಯ ಕ್ರೀಡಾ ಮಸೂದೆ ವ್ಯಾಪ್ತಿಗೆ ಬಿಸಿಸಿಐ

ಪಿಟಿಐ
Published 22 ಜುಲೈ 2025, 16:38 IST
Last Updated 22 ಜುಲೈ 2025, 16:38 IST
--
--   

ನವದೆಹಲಿ: ಲೋಕಸಭೆಯಲ್ಲಿ ಬುಧವಾರ ಮಂಡಿಸಲು ಸಿದ್ಧವಾಗಿರುವ ರಾಷ್ಟ್ರೀಯ ಕ್ರೀಡಾ ಮಸೂದೆಯ ವ್ಯಾಪ್ತಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ಬರಲಿದೆ. 

ಬಿಸಿಸಿಐ ಕೇಂದ್ರ ಕ್ರೀಡಾ ಸಚಿವಾಲಯದಿಂದ ಯಾವುದೇ ಅನುದಾನವನ್ನು ತೆಗೆದುಕೊಳ್ಳುವುದಿಲ್ಲ. ಆದರೂ ಕ್ರೀಡಾ ಮಸೂದೆಯ ವ್ಯಾಪ್ತಿಗೆ ಸೇರಿಕೊಳ್ಳಲಿದೆ. ಉದ್ದೇಶಿತ ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್‌ಎಸ್‌ಬಿ)ಯ ಮಾನ್ಯತೆ ಪಡೆಯುವುದು ಕೂಡ ಬಿಸಿಸಿಐಗೆ ಅಗತ್ಯವಾಗಲಿದೆ. 

‘ಉಳಿದೆಲ್ಲ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ (ಎನ್‌ಎಸ್‌ಎಫ್‌) ಗಳ ಮಾದರಿಯಲ್ಲಿಯೇ ನೆಲದ ಕಾನೂನು ಪಾಲನೆ ಮಾಡುವುದು ಬಿಸಿಸಿಐ ಕರ್ತವ್ಯ. ಒಂದೊಮ್ಮೆ ಮಸೂದೆಯು ಕಾಯಿದೆಯಾಗಿ ಜಾರಿಯಾದರೆ ಬಿಸಿಸಿಐ ಕೂಡ ಎನ್‌ಎಸ್‌ಜಿ ವ್ಯಾಪ್ತಿಗೊಳಪಡಲಿದೆ. ಮಂಡಳಿಯು ಸರ್ಕಾರಿ ಅನುಧನ ಪಡೆಯದಿದ್ದರೂ ಲೋಕಸಭೆಯ ಕಾನೂನು ಅನ್ವಯವಾಗಲಿದೆ’ ಎಂದು ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.

ADVERTISEMENT

‘ಎಲ್ಲ ಎನ್‌ಎಸ್‌ಎಫ್‌ಗಳಂತೆ ಬಿಸಿಸಿಐ ಕೂಡ ಸ್ವಾಯತ್ತವಾಗಿ ಉಳಿಯಲಿದೆ. ಆದರೆ ಯಾವುದೇ ತಕರಾರುಗಳು ತಲೆದೋರಿದಾಗ ಮುಂಬರುವ ದಿನಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ ಯು (ಎನ್‌ಎಸ್‌ಟಿ) ವ್ಯಾಜ್ಯ ಪರಿಹಾರ ವೇದಿಕೆಯಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.

‘ಈ ಮಸೂದೆಯು ಫೆಡರೇಷನ್‌ಗಳ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶ ಹೊಂದಿಲ್ಲ. ಆದರೆ ಫೆಡರೇಷನ್‌ಗಳು ಸುಸೂತ್ರವಾಗಿ ಕಾರ್ಯನಿರ್ವಹಣೆ ಮತ್ತು ಪಾರದರ್ಶಕ ಆಡಳಿತ ನಡೆಸುವಂತೆ ನೋಡಿಕೊಳ್ಳುವ ಸಾಧನವಾಗಿದೆ’ ಎಂದೂ ಮೂಲಗಳು ತಿಳಿಸಿವೆ. 

‘ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿಯು ಮುಕ್ತ, ತ್ವರಿತ, ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದಲ್ಲಿ ಕ್ರೀಡಾ ವ್ಯಾಜ್ಯಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತದೆ. ನ್ಯಾಯಮಂಡಳಿ ನೀಡಿದ ತೀರ್ಪುಗಳನ್ನು ಕೇವಲ ಸುಪ್ರೀಂ ಕೋರ್ಟ್‌ನಲ್ಲಿ ಮಾತ್ರ ಪ್ರಶ್ನಿಸುವ ಅವಕಾಶ ಇದೆ’ ಎಂದು ಸಚಿವಾಲಯದ ಮೂಲಗಳು ಸ್ಪಷ್ಟಪಡಿಸಿವೆ.

ಒಲಿಂಪಿಕ್ಸ್‌ ದೃಷ್ಟಿಕೋನ: ಲಾಸ್‌ ಏಂಜಲೀಸ್‌ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ ಕೂಟದಲ್ಲಿ ಟಿ20 ಕ್ರಿಕೆಟ್‌ ಸೇರ್ಪಡೆಯಾಗಿದೆ. ಇದರಿಂದಾಗಿ ಬಿಸಿಸಿಐ ಕೂಡ ಈಗ ಒಲಿಂಪಿಕ್ ಆಂದೋಲನದ ಭಾಗವಾಗಿದೆ. ಆದ್ದರಿಂದ ನೂತನ ಮಸೂದೆಯ ವ್ಯಾಪ್ತಿಗೆ ಮಂಡಳಿಯನ್ನು ತರಲಾಗಿದೆ ಎಂದೂ ಹೇಳಲಾಗಿದೆ. 

ಅಂತರರಾಷ್ಟ್ರೀಯ ಫೆಡರೇಷನ್‌ಗಳು ಮತ್ತು ಒಲಿಂಪಿಕ್ ಚಾರ್ಟರ್ ನಿಯಮಗಳ ಪಾಲನೆಗೂ ಇದು ಮುಖ್ಯವಾಗಿದೆ. 

ಈ ಮಸೂದೆಯ  ಅನ್ವಯ ಪದಾಧಿಕಾರಿಗಳ ನಿವೃತ್ತಿ ವಯೋಮಿತಿಯು 70 ರಿಂದ 75 ವರ್ಷಕ್ಕೆ ಹೆಚ್ಚಳವಾಗಲಿದೆ. 

ಮುಂದುವರಿಯುವರೇ ಬಿನ್ನಿ?

ಬೆಂಗಳೂರು: ಬಿಸಿಸಿಐ ಅಧ್ಯಕ್ಷರಾಗಿರುವ ರೋಜರ್ ಬಿನ್ನಿ ಅವರು ಈಚೆಗಷ್ಟೇ 70 ವರ್ಷ ಪೂರೈಸಿದರು. ಪ್ರಸ್ತುತ ಜಾರಿಯಲ್ಲಿರುವ ನಿಯಮಾವಳಿಯ ಪ್ರಕಾರ ಅವರ ಕಾರ್ಯಾವಧಿಯು ಮುಗಿಯಿತು.   ನಿಯಮದ ಪ್ರಕಾರ ಪದಾಧಿಕಾರಿಗಳಿಗೆ ಗರಿಷ್ಠ ವಯೋಮಿತಿಯು 70 ವರ್ಷವಾಗಿತ್ತು. ಇದೀಗ ನೂತನ ಕ್ರೀಡಾ ಮಸೂದೆಯು ಕಾಯಿದೆಯಾಗಿ ರೂಪುಗೊಂಡರೆ ವಯೋಮಿತಿಯು 75 ವರ್ಷಕ್ಕೆ ಹೆಚ್ಚಳವಾಗುವ ಸಾಧ್ಯತೆ ಇದೆ. ಆಗ ರೋಜರ್ ಬಿನ್ನಿ ಅವರನ್ನು ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.  1983ರ ವಿಶ್ವಕಪ್ ವಿಜೇತ ಭಾರತ ತಂಡದ ಆಲ್‌ರೌಂಡರ್ ಬಿನ್ನಿ ಅವರು 2022ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.