ADVERTISEMENT

ಮುಂದಿನ ವರ್ಷ ಭಾರತದಲ್ಲಿ ಟಿ20 ವಿಶ್ವಕಪ್: ಯಶಸ್ಸಿಗೆ ಕಟಿಬದ್ಧವೆಂದ ಬಿಸಿಸಿಐ

ಪಿಟಿಐ
Published 12 ನವೆಂಬರ್ 2020, 16:09 IST
Last Updated 12 ನವೆಂಬರ್ 2020, 16:09 IST
ಟಿ20 ವಿಶ್ವಕಪ್ ಕೌಂಟ್‌ಡೌನ್‌ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಐಸಿಸಿ ಸಿಇಎಒ ಮನು ಸವಾನಿ ಇದ್ದಾರೆ  – ಬಿಸಿಸಿಐ ಚಿತ್ರ
ಟಿ20 ವಿಶ್ವಕಪ್ ಕೌಂಟ್‌ಡೌನ್‌ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಐಸಿಸಿ ಸಿಇಎಒ ಮನು ಸವಾನಿ ಇದ್ದಾರೆ  – ಬಿಸಿಸಿಐ ಚಿತ್ರ   

ದುಬೈ: ಮುಂದಿನ ವರ್ಷ ಭಾರತದಲ್ಲಿ ಟ್ವೆಂಟಿ–20 ವಿಶ್ವಕಪ್ ಟೂರ್ನಿಯನ್ನು ಅದ್ದೂರಿಯಾಗಿ ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕಟಿಬದ್ಧವಾಗಿದೆ ಎಂದು ಮಂಡಳಿಯ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಟೂರ್ನಿಯ ಕೌಂಟ್‌ಡೌನ್‌ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ವರ್ಷದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ 2022ಕ್ಕೆ ಮುಂದೂಡಲಾಗಿತ್ತು. ಆದರೆ ಭಾರತದ ಆತಿಥ್ಯದಲ್ಲಿ ನಿಗದಿಯಾಗಿದ್ದ 2021ರ ವಿಶ್ವಕಪ್ ಟೂರ್ನಿಯು ನಡೆಯಲಿದೆ.

ADVERTISEMENT

’ಆಟಗಾರರು ಮತ್ತು ವಿಶ್ವಕಪ್ ಟೂರ್ನಿಗೆ ಸಂಬಂಧಿಸಿದೆ ಎಲ್ಲ ವ್ಯಕ್ತಿಗಳ ಆರೋಗ್ಯ ರಕ್ಷಣೆ ಮತ್ತು ಸುರಕ್ಷತೆಯನ್ನು ನೋಡಿಕೊಳ್ಳುವುದು ಬಿಸಿಸಿಐ ಹೊಣೆ. ಯಾವ ಲೋಪವೂ ಆಗದಂತೆ ಇಂದಿನ ಪರಿಸ್ಥಿತಿಯ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುತ್ತೇವೆ‘ ಎಂದು ಹೇಳಿದರು.

’ಭಾರತವು ಆತ್ಮೀಯ ಆತಿಥ್ಯಕ್ಕೆ ಮೊದಲಿನಿಂದಲೂ ಖ್ಯಾತಿಯಾಗಿದೆ. ಶ್ರೇಷ್ಠವಾದ ಆತಿಥ್ಯವನ್ನು ನಾವು ಈ ಸಲವೂ ನೀಡುತ್ತೇವೆ. ಐಸಿಸಿ ಮತ್ತು ಸದಸ್ಯ ಮಂಡಳಿಗಳಿಗೆ ಇದು ನಮ್ಮ ವಾಗ್ದಾನ‘ ಎಂದು ಶಾ ಹೇಳಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ’ನಾನು ಆಟಗಾರನಾಗಿ ಐಸಿಸಿಯ ಪ್ರಮುಖ ಟೂರ್ನಿಗಳಲ್ಲಿ ಆಡಿದ್ದೇನೆ. ಈಗ ಐಸಿಸಿ ಟೂರ್ನಿಯೊಂದರ ಆತಿಥ್ಯ ವಹಿಸುವ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇನೆ. ವಿಶ್ವಕಪ್‌ ಟೂರ್ನಿಯ ಪಂದ್ಯಗಳ ವಾತಾವರಣವೇ ಅಮೋಘ. ಅದಕ್ಕೆ ಸರಿಸಾಟಿ ಮತ್ತೊಂದಿಲ್ಲ‘ ಎಂದರು.

’ಸುರಕ್ಷಿತವಾದ ಮತ್ತು ಆರೋಗ್ಯಕರವಾದ ಟೂರ್ನಿಯನ್ನು ಆಯೋಜಿಸುವುದೇ ನಮ್ಮ ಆದ್ಯತೆಯಾಗಲಿದೆ. ನಮ್ಮ ಪ್ರಯತ್ನಿಂದ ಇಡೀ ವಿಶ್ವವು ಕ್ರೀಡೆಯ ಮನರಂಜನೆಯನ್ನು ಅನುಬವಿಸಬೇಕು‘ ಎಂದು ಹೇಳಿದರು.

ಟೂರ್ನಿಯಲ್ಲಿ ಆತಿಥೇಯ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಡೀಸ್, ಬಾಂಗ್ಲಾದೇಶ, ಆಫ್ಗಾನಿಸ್ತಾನ, ಐರ್ಲೆಂಡ್, ನಮಿಬಿಯಾ, ನೆದರ್ಲೆಂಡ್ಸ್‌, ಒಮನ್, ಪಪುವಾ ನ್ಯೂಗಿನಿ ಮತ್ತು ಸ್ಕಾಟ್‌ಲೆಂಡ್ ತಂಡಗಳು ಆಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.