ADVERTISEMENT

ಮಹಿಳಾ ಕ್ರಿಕೆಟ್ ತಂಡವನ್ನು ಕಡೆಗಣಿಸಿಲ್ಲ: ಶಾಂತಾ ರಂಗಸ್ವಾಮಿ

ಪಿಟಿಐ
Published 27 ಜುಲೈ 2020, 12:28 IST
Last Updated 27 ಜುಲೈ 2020, 12:28 IST
ಶಾಂತಾ ರಂಗಸ್ವಾಮಿ
ಶಾಂತಾ ರಂಗಸ್ವಾಮಿ   

ನವದೆಹಲಿ: ಮಹಿಳಾ ಕ್ರಿಕೆಟ್ ತಂಡದ ಇಂಗ್ಲೆಂಡ್ ಪ್ರವಾಸ ರದ್ದುಮಾಡಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಹಲವರು ಟೀಕಿಸಿದ್ದರು. ಪ್ರವಾಸ ರದ್ದತಿಗೆ ಸಂಬಂಧಿಸಿ ಇದೇ ಮೊದಲ ಬಾರಿ ಬಿಸಿಸಿಐ ಅಧಿಕೃತವಾಗಿ ಹೇಳಿಕೆ ನೀಡಿದೆ.

ಮಂಡಳಿಯ ಅಪೆಕ್ಸ್ ಸಮಿತಿ ಸದಸ್ಯೆ ಶಾಂತಾ ರಂಗಸ್ವಾಮಿ ಅವರು ಸೋಮವಾರ ಮಾತನಾಡಿ ‘ಕೋವಿಡ್–19 ಹಾವಳಿ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆಯೇ ಹೊರತು ಮಹಿಳಾ ತಂಡವನ್ನು ಕಡೆಗಣಿಸುವುದಕ್ಕಾಗಿ ಅಲ್ಲ’ ಎಂದಿದ್ದಾರೆ. ‘ಟೀಕಾಸ್ತ್ರ ಪ್ರಯೋಗ ಮಾಡುವವರು ಮೊದಲು ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಿ. ಎಲ್ಲವೂ ಸಹಜಸ್ಥಿತಿಗೆ ಬರುವವರೆಗೆ ಕಾದು ನೋಡೋಣ’ ಎಂದೂ ಅವರು ಹೇಳಿದ್ದಾರೆ.

ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಒಳಗೊಂಡ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ತಂಡ ಪಾಲ್ಗೊಳ್ಳಬೇಕಾಗಿತ್ತು. ಆದರೆ ತಂಡವನ್ನು ಕಳುಹಿಸುವುದಿಲ್ಲ ಎಂದು ಬಿಸಿಸಿಐಕಳೆದ ವಾರ ತಿಳಿಸಿತ್ತು. ಯುಎಇಯಲ್ಲಿ ಸೆಪ್ಟೆಂಬರ್‌ನಿಂದ ನವೆಂಬರ್ ವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಯೋಜಿಸಲು ಸಜ್ಜಾಗಿರುವ ಬಿಸಿಸಿಐ, ಮಹಿಳಾ ತಂಡವನ್ನು ಇಂಗ್ಲೆಂಡ್‌ಗೆ ಕಳುಹಿಸಲು ಹಿಂದೇಟು ಹಾಕುತ್ತಿರುವುದು ಹಾಸ್ಯಾಸ್ಪದ ಎಂಬ ಮಾತು ಕೇಳಿಬಂದಿತ್ತು. ಈ ಮಾತಿಗೆ ಶಾಂತಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಇದು ನಿರ್ಲಕ್ಷ್ಯವಲ್ಲ. ಯಾವುದೇ ಟೂರ್ನಿಗೆ ಸಿದ್ಧವಾಗಬೇಕಾದರೆ ಕನಿಷ್ಠ ಆರು ವಾರ ಫಿಟ್ ಆಗಿರಬೇಕು. ಭಾರತದ ಬಹುತೇಕ ಎಲ್ಲ ಭಾಗಗಳಲ್ಲೂ ಕೋವಿಡ್ ಭಾದಿಸಿರುವುದರಿಂದ ಅಭ್ಯಾಸ ಮಾಡಲು ಆಗುತ್ತಿಲ್ಲ. ಆದ್ದರಿಂದ ಆಟಗಾರ್ತಿಯರ ಫಿಟ್‌ನೆಸ್ ಬಗ್ಗೆ ಏನೂ ಹೇಳಲಾಗದು. ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಿದರೆ 14 ದಿನ ಪ್ರತ್ಯೇಕತಾ ವಾಸದಲ್ಲೂ ಇರಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಕಷ್ಟಸಾಧ್ಯ’ ಎಂದು ಅವರು ವಿವರಿಸಿದರು.

ಮಹಿಳಾ ತಂಡವನ್ನು ಕಡೆಗಣಿಸಲಾಗುತ್ತಿದೆ ಎಂದಾದರೆ ಐಪಿಎಲ್ ಸಂದರ್ಭದಲ್ಲಿ ಮಹಿಳೆಯರ ಪ್ರದರ್ಶನ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ಮುಂದಾಗುತ್ತಿತ್ತಾ ಎಂದು ಪ್ರಶ್ನಿಸಿದ ಅವರು ಮುಂದಿನ ವರ್ಷ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಮಹಿಳೆಯರ ವಿಶ್ವಕಪ್ ಟೂರ್ನಿಗೆ ಸಜ್ಜಾಗಲು ಇಂಗ್ಲೆಂಡ್ ಸರಣಿ ಉಪಯೋಗವಾಗುತ್ತಿತ್ತು ನಿಜ. ಆದರೆ ಕೋವಿಡ್–19 ವಿಶ್ವ ಕ್ರಿಕೆಟ್‌ಗೆ ಭಾರಿ ಪೆಟ್ಟು ನೀಡಿದೆ. ವಿಶೇಷವಾಗಿ ಮಹಿಳಾ ಕ್ರಿಕೆಟ್ ಇದರಿಂದ ತುಂಬ ತೊಂದರೆಗೆ ಒಳಗಾಗಿದೆ. ಆಸ್ಟ್ರೇಲಿಯಾದ ಎಂಸಿಜಿಯಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ದಾಖಲೆ ಸಂಖ್ಯೆಯ ಪ್ರೇಕ್ಷಕರು ಸೇರಿದ್ದು ಈಗಲೂ ನೆನಪಾಗುತ್ತಿದೆ‘ ಎಂದು ಭಾವುಕರಾದರು.

ಯುಎಇಯಲ್ಲಿ ನಡೆಸಲು ಉದ್ದೇಶಿಸಿರುವ ಐಪಿಎಲ್ ಟೂರ್ನಿಯಲ್ಲಿ ಮಹಿಳಾ ಚಾಲೆಂಜ್ ಪಂದ್ಯಗಳನ್ನು ಆಯೋಜಿಸುವುದು ಸಂದೇಹ. ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಮಹಿಳಾ ಟೂರ್ನಿ ಅದೇ ಸಂದರ್ಭದಲ್ಲಿ ನಡೆಯಲಿರುವುದರಿಂದ ಮಹಿಳಾ ಚಾಲೆಂಜ್ ಟೂರ್ನಿಗೆ ಬಿಸಿಸಿಐ ಕೊಕ್ ನೀಡುವ ಸಾಧ್ಯತೆ ಇದೆ. ಬಿಗ್ ಬ್ಯಾಷ್‌ನಲ್ಲಿ ಭಾರತದ ಮೂವರು ಅಥವಾ ನಾಲ್ಕು ಮಂದಿ ಆಡಲು ಸಜ್ಜಾಗುತ್ತಿದ್ದಾರೆ.

‘ಈ ಬಾರಿ ಪರಿಸ್ಥಿತಿಮಹಿಳಾ ಕ್ರಿಕೆಟ್‌ಗೆ ಪೂರಕವಾಗಿಲ್ಲ ಎಂದೆನಿಸುತ್ತದೆ. ಕಳೆದ ಬಾರಿ ಐಪಿಎಲ್ ಮಹಿಳಾ ಚಾಲೆಂಜ್‌ನಲ್ಲಿ ಮೂರು ತಂಡಗಳು ಇದ್ದವು. ಈ ಬಾರಿ ನಾಲ್ಕು ತಂಡಗಳನ್ನು ಆಡಿಸುವ ಉದ್ದೇಶವಿತ್ತು. ಆದರೆ ಕೋವಿಡ್‌ನಿಂದಾಗಿ ಎಲ್ಲವೂ ಅನಿಶ್ಚಿತವಾಗಿದೆ. ಐಪಿಎಲ್ ಆಡಳಿತ ಮಂಡಳಿ ಈ ವಿಷಯದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡೋಣ. ಸದ್ಯದ ಪರಿಸ್ಥಿತಿಯಲ್ಲಿ ಕ್ರಿಕೆಟ್ ಮೇಲೆ, ವಿಶೇಷವಾಗಿ ಮಹಿಳಾ ಕ್ರಿಕೆಟ್ ಮೇಲೆ ಬಿಸಿಸಿಐಗೆ ಇರುವ ಬದ್ಧತೆಯನ್ನು ಅಳೆಯಲು ಮಾನದಂಡ ಇಲ್ಲ. ಅಳೆಯುವುದು ಸರಿಯೂ ಅಲ್ಲಲ’ ಎಂದು ಶಾಂತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.