ADVERTISEMENT

ಬಿಸಿಸಿಐ ವೈದ್ಯಕೀಯ ತಂಡದ ಮುಖ್ಯಸ್ಥ ಪಟೇಲ್ ರಾಜೀನಾಮೆ

ಪಿಟಿಐ
Published 16 ಮಾರ್ಚ್ 2025, 13:43 IST
Last Updated 16 ಮಾರ್ಚ್ 2025, 13:43 IST
ನಿತಿನ್ ಪಟೇಲ್ (ಎಡದಿಂದ ಮೊದಲನೇಯವರು)
ನಿತಿನ್ ಪಟೇಲ್ (ಎಡದಿಂದ ಮೊದಲನೇಯವರು)   

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವೈದ್ಯಕೀಯ ಮತ್ತು ಕ್ರೀಡಾ ವಿಜ್ಞಾನ ತಂಡದ ಮುಖ್ಯಸ್ಥ ನಿತಿನ್ ಪಟೇಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮೂರು ವರ್ಷಗಳ ಯಶಸ್ವಿ ಕಾರ್ಯನಿರ್ವಹಣೆ ಮಾಡಿದ್ದಾರೆ.

ಬಿಸಿಸಿಐ ಈಚೆಗಷ್ಟೇ ಬೆಂಗಳೂರಿನಲ್ಲಿ ಶ್ರೇಷ್ಠತಾ ಕೇಂದ್ರ (ಸಿಒಇ) ವನ್ನು ಉದ್ಘಾಟಿಸಿತ್ತು. ಇದೀಗ ಇಲ್ಲಿಯ ಸಿಬ್ಬಂದಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವತ್ತ ಕಾರ್ಯೋನ್ಮುಖವಾಗಿದೆ. ರಾಜೀನಾಮೆಯ ಕುರಿತು ಪ್ರತಿಕ್ರಿಯೆಗಾಗಿ ಪಟೇಲ್ ಅವರನ್ನು ಸುದ್ದಿಸಂಸ್ಥೆಯು ಸಂಪರ್ಕಿಸಿತ್ತು. ಆದರೆ ಅವರು ಲಭ್ಯರಾಗಲಿಲ್ಲ.  

‘ನಿತಿನ್ ಅವರು ರಾಜೀನಾಮೆ ನೀಡಿರುವುದು ನಿಜ. ಅವರು ತಮ್ಮ ಕರ್ತವ್ಯದ ಅವಧಿಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸಿಒಇಯಲ್ಲಿ (ಈ ಮೊದಲು ಎನ್‌ಸಿಎ) ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ತಂಡವು ಬೆಳೆಯುವಲ್ಲಿ ಅವರೇ ಪ್ರಮುಖ ಕಾರಣರಾಗಿದ್ದರು. ಅವರು ಕಾರ್ಯನಿರ್ವಹಿಸಿದ ಅವಧಿಯಲ್ಲಿ ಗಾಯಗೊಂಡು ಬಂದಿದ್ದ ಆಟಗಾರರೆಲ್ಲರೂ ಮರಳಿ ಶೇ 100ರಷ್ಟು ಫಿಟ್ ಆಗಿ ತಂಡಕ್ಕೆ ಮರಳಿದ್ದಾರೆ. ಜೊತೆಗೆ ಉತ್ತಮವಾಗಿ ಆಡಿದ್ದಾರೆ. ಪಟೇಲ್ ಅವರ ಕಾರ್ಯಕ್ಷಮತೆ ಆ ರೀತಿಯದಾಗಿತ್ತು. ಆದರೆ ಪಟೇಲ್ ಅವರು ಕುಟುಂಬವು ವಿದೇಶದಲ್ಲಿ ನೆಲೆಸಿದೆ. ಸಿಒಇಯಲ್ಲಿ ವರ್ಷಪೂರ್ತಿ ಕಾರ್ಯನಿರ್ವಹಿಸುವುದು ಅವರಿಗೆ ಕಷ್ಟವಾಗಿತ್ತು. ಆದ್ದರಿಂದ ಅವರು ರಾಜೀನಾಮೆ ನಿರ್ಧಾರ ತೆಗೆದುಕೊಂಡಿರಬಹುದು’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ADVERTISEMENT

ಪಟೇಲ್ ಅವರ ಚಿಕಿತ್ಸೆ ಮತ್ತು ಮಾರ್ಗದರ್ಶನದಲ್ಲಿ ಭಾರತ ತಂಡದ ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಬ್ಯಾಟರ್ ಕೆ.ಎಲ್. ರಾಹುಲ್, ಸ್ಪಿನ್ನರ್ ಕುಲದೀಪ್ ಯಾದವ್ ಅವರು ಗಾಯದಿಂದ ಚೇತರಿಸಿಕೊಂಡು ಆಟಕ್ಕೆ ಮರಳಿದ್ದರು. 

ಈ ವರ್ಷದ ಕೊನೆಯಲ್ಲಿ ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರ ಕಾರ್ಯಾವಧಿಯೂ ಮುಕ್ತಾಯಗೊಳ್ಳಲಿದೆ. 2027ರ ವಿಶ್ವಕಪ್ ಟೂರ್ನಿಯವರೆಗೂ ಅವರನ್ನು ಮುಂದುವರಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

ಎನ್‌ಸಿಎನಲ್ಲಿ ಕೋಚ್ ಆಗಿದ್ದ ಸಾಯಿರಾಜ್ ಬಹುತುಳೆ ಅವರು ಈಚೆಗೆ ರಾಜೀನಾಮೆ ನೀಡಿದ್ದರು. ಅವರು ರಾಜಸ್ಥಾನ ರಾಯಲ್ಸ್ ನೆರವು ಸಿಬ್ಬಂದಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.