ADVERTISEMENT

ರಣಜಿ ಟ್ರೋಫಿ: ಪಂಜಾಬ್‌ ಇನಿಂಗ್ಸ್‌ಗೆ ಎಮನ್ಜೋತ್ ಆಸರೆ

ಪಿಟಿಐ
Published 29 ಜನವರಿ 2026, 15:32 IST
Last Updated 29 ಜನವರಿ 2026, 15:32 IST
<div class="paragraphs"><p>ಕರ್ನಾಟಕ ತಂಡದ ವಿದ್ಯಾಧರ್ ಪಾಟೀಲ ಬೌಲಿಂಗ್‌&nbsp; </p></div>

ಕರ್ನಾಟಕ ತಂಡದ ವಿದ್ಯಾಧರ್ ಪಾಟೀಲ ಬೌಲಿಂಗ್‌ 

   

 –ಪ್ರಜಾವಾಣಿ ಚಿತ್ರ ಸಂಗ್ರಹದಿಂದ

ಮೊಹಾಲಿ: ಎಮನ್ಜೋತ್ ಸಿಂಗ್ ಅವರ ತಾಳ್ಮೆಯ ಬ್ಯಾಟಿಂಗ್ ಬಲದಿಂದ ಪಂಜಾಬ್ ತಂಡವು ಗುರುವಾರ ಆರಂಭವಾದ ರಣಜಿ ಟ್ರೋಫಿ ಬಿ ಗುಂಪಿನಲ್ಲಿ ಕರ್ನಾಟಕ ಎದುರಿನ ಪಂದ್ಯದಲ್ಲಿ ಉತ್ತಮ ಮೊತ್ತ ಪೇರಿಸಿತು. 

ADVERTISEMENT

ಮೊಹಾಲಿಯ ಐ.ಎಸ್. ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಎಮನ್ಜೋತ್ (ಬ್ಯಾಟಿಂಗ್ 77; 134ಎ, 4X8, 6X1) ಅವರ ಆಟದ ಬಲದಿಂದ ತಂಡವು ದಿನದಾಟದ ಮುಕ್ತಾಯಕ್ಕೆ 91 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 303 ರನ್ ಸೇರಿಸಿದರು. 

ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ವಿದ್ಯಾಧರ್ ಪಾಟೀಲ ಅವರ ನಿಖರ ದಾಳಿಯಿಂದಾಗಿ ಪ್ರಭಸಿಮ್ರನ್ ಸಿಂಗ್ ಅವರು ಶಿಖರ್ ಶೆಟ್ಟಿಗೆ ಕ್ಯಾಚಿತ್ತರು. ಈ ಸಂದರ್ಭದಲ್ಲಿ ಅಭಿಜಿತ್ ಗಾರ್ಗ್ (81; 133ಎ, 4X8, 6X2) ಮತ್ತು ನಾಯಕ ಉದಯ್ ಸಹರಾನ್ (44; 72ಎ, 4X6, 6X1) ಎರಡನೇ ವಿಕೆಟ್ ಜೊತೆಯಾಟದಲ್ಲಿ 102 ರನ್ ಸೇರಿಸಿದರು. ಇದರಿಂದಾಗಿ ತಂಡವು ದೊಡ್ಡ ಮೊತ್ತ ಪೇರಿಸುವ ನಿರೀಕ್ಷೆ ಮೂಡಿತ್ತು. 

ಆದರೆ ವಿದ್ಯಾಧರ್ (46ಕ್ಕೆ3) ಮತ್ತು ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ (48ಕ್ಕೆ3) ಅವರ ಉತ್ತಮ ಬೌಲಿಂಗ್ ಎದುರು  ಪಂಜಾಬ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವಿಫಲರಾದರು. ಇದರಿಂದಾಗಿ ತಂಡವು  168 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. 60 ರನ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್‌ಗಳು ಪತನವಾದವು. 

ಈ ಸಂದರ್ಭದಲ್ಲಿ ಚಾಹಲ್ ಅವರು ತಂಡಕ್ಕೆ ಆಸರೆಯಾದರು. ಆಯುಷ್ ಗೋಯಲ್ (23; 82ಎ) ಜೊತೆಗೂಡಿ 81 ರನ್ ಕಲೆಹಾಕಿದರು. ಇದರಿಂದಾಗಿ ಪಂಜಾಬ್ ಇನಿಂಗ್ಸ್‌ಗೆ ಮರುಜೀವ ಬಂದಿತು. ಎಮನ್ಜೋತ್ ಅವರು ಎರಡು ವರ್ಷಗಳ ನಂತರ ಪಂಜಾಬ್ ತಂಡಕ್ಕೆ ಮರಳಿದ್ದಾರೆ. ಎಡಗೈ ಸ್ಪಿನ್ನರ್ ಮತ್ತು ಬಲಗೈ ಬ್ಯಾಟರ್ ಆಗಿರುವ ಸಿಂಗ್ ಕರ್ನಾಟಕದ ಸ್ಪಿನ್ನರ್‌ಗಳನ್ನು ಎಚ್ಚರಿಕೆಯಿಂದ ಎದುರಿಸಿದರು. ಸ್ವೀಪ್, ಬ್ಯಾಕ್‌ಫುಟ್ ಪಂಚ್ ಪ್ರಯೋಗಿಸಿದರು. ಭಾರತ ತಂಡದ ವೇಗಿ ಪ್ರಸಿದ್ಧ ಎಂ ಕೃಷ್ಣ ಅವರನ್ನೂ ಏಕಾಗ್ರತೆಯಿಂದ ಎದುರಿಸಿದ ಸಿಂಗ್ ಅವರು ಎರಡನೇ ದಿನಕ್ಕೂ ಆಟ ಉಳಿಸಿಕೊಂಡಿದ್ದಾರೆ. ಹತ್ತನೇ ಕ್ರಮಾಂಕದ ಬ್ಯಾಟರ್ ಸುಖದೀಪ್ ಭಜ್ವಾ (20; 13ಎ, 4X4) ಅವರಿಗೆ ಶಿಖರ್ ಶೆಟ್ಟಿ ಅವರು ಕ್ಯಾಚ್ ಬಿಟ್ಟು ಜೀವದಾನ ನೀಡಿದರು. 89ನೇ ಓವರ್‌ನಲ್ಲಿ ಪ್ರಸಿದ್ಧ ಕೃಷ್ಣ ಸುಖದೀಪ್ ಅವರ ವಿಕೆಟ್ ಕಬಳಿಸಿದರು. 

ನಾಕೌಟ್ ಹಂತ ಪ್ರವೇಶಿಸಲು ಕರ್ನಾಟಕ ತಂಡಕ್ಕೆ ಈ ಪಂದ್ಯದಲ್ಲಿ ಜಯ ಸಾಧಿಸುವ ಒತ್ತಡವಿದೆ. ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ಈ ಪಂದ್ಯದ ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿದರು. 

ಸಂಕ್ಷಿಪ್ತ ಸ್ಕೋರು:

ಪಂಜಾಬ್: 91 ಓವರ್‌ಗಳಲ್ಲಿ 9ಕ್ಕೆ303 (ಅಭಿಜಿತ್ ಗಾರ್ಗ್ 81, ಉದಯ ಸಹರಾನ್ 44, ಎಮನ್ಜೋತ್ ಸಿಂಗ್ ಚಾಹಲ್ ಬ್ಯಾಟಿಂಗ್ 77, ಆಯುಷ್ ಗೋಯಲ್ 23, ಸುಖದೀಪ್ ಭಜ್ವಾ 20, ವಿದ್ಯಾಧರ್ ಪಾಟೀಲ 46ಕ್ಕೆ3, ಮೊಹ್ಸಿನ್ ಖಾನ್ 85ಕ್ಕೆ2, ಶ್ರೇಯಸ್ ಗೋಪಾಲ್ 48ಕ್ಕೆ3) ವಿರುದ್ಧ ಕರ್ನಾಟಕ. 

ಹಂಗರಗೇಕರ್ ದಾಳಿಗೆ ಕುಸಿದ ಮಧ್ಯಪ್ರದೇಶ

ಇಂದೋರ್: ಮಹಾರಾಷ್ಟ್ರದ ವೇಗಿ ರಾಜವರ್ಧನ್ ಹಂಗರಗೇಕರ್ (44ಕ್ಕೆ5) ಅವರ ಪರಿಣಾಮಕಾರಿ ದಾಳಿಯ ಮುಂದೆ ಮಧ್ಯಪ್ರದೇಶ ತಂಡವು ಅಲ್ಪಮೊತ್ತಕ್ಕೆ ಕುಸಿಯಿತು.  ಗುರುವಾರ ಹೋಳ್ಕರ್ ಮೈದಾನದಲ್ಲಿ ಆರಂಭವಾದ ರಣಜಿ ಟ್ರೋಫಿ ಕೊನೆಯ ಸುತ್ತಿನ ಪಂದ್ಯದಲ್ಲಿ ಆತಿಥೇಯ ಮಧ್ಯಪ್ರದೇಶ ತಂಡವು 61 ಓವರ್‌ಗಳಲ್ಲಿ 187 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.

ವೆಂಕಟೇಶ್ ಅಯ್ಯರ್ (39; 50ಎ 4X4 6X2) ಅವರು ತಂಡದ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ಬ್ಯಾಟರ್ ಆದರು.  ಇನಿಂಗ್ಸ್ ಆರಂಭಿಸಿದ ಮಹಾರಾಷ್ಟ್ರ ತಂಡವು ಮೊದಲ ದಿನದಾಟದ ಮುಕ್ತಾಯಕ್ಕೆ 13.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 52 ರನ್‌ ಗಳಿಸಿದೆ. ಪೃಥ್ವಿ ಶಾ 17 ಎಸೆತಗಳಲ್ಲಿ 14 ರನ್ ಗಳಿಸಿದರು. ಕುಲದೀಪ್ ಸೇನ್ ಬೌಲಿಗ್‌ನಲ್ಲಿ ಹಿಮಾಂಶು ಮಂತ್ರಿಗೆ ಕ್ಯಾಚಿತ್ತರು. 

ಅರ್ಷಿನ್ ಕುಲಕರ್ಣಿ (27; 33ಎ 4X5) ಅವರು ಕುಮಾರ್ ಕಾರ್ತಿಕೆಯ ಸಿಂಗ್ ಅವರ ಬೌಲಿಂಗ್‌ನಲ್ಲಿ ರಜತ್ ಪಾಟೀದಾರ್‌ ಅವರಿಗೆ ಕ್ಯಾಚಿತ್ತರು. ನೀರಜ್ ಜೋಶಿ (ಔಟಾಗದೇ 4) ಕ್ರೀಸ್‌ನಲ್ಲಿದ್ದಾರೆ.  ಈಚೆಗೆ ಮಧ್ಯಪ್ರದೇಶ ತಂಡವು ಬೆಂಗಳೂರು ಸನಿಹದ ಆಲೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ  ಕರ್ನಾಟಕದ ಎದುರು ಜಯಭೇರಿ ಬಾರಿಸಿತ್ತು

ಸೌರಾಷ್ಟ್ರಕ್ಕೆ ಮುನ್ನಡೆ

ಚಂಡೀಗಡ: ನಾಕೌಟ್ ಹಂತ ಪ್ರವೇಶಿಸುವ ಪೈಪೋಟಿಯಲ್ಲಿರುವ ಸೌರಾಷ್ಟ್ರ ತಂಡವು ಚಂಡೀಗಡ  ಎದುರಿನ ಪಂದ್ಯದ ಮೊದಲ ದಿನವೇ ಪ್ರಥಮ ಇನಿಂಗ್ಸ್‌ ಮುನ್ನಡೆ ಸಾಧಿಸಿತು.  ಸೆಕ್ಟರ್ –16 ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅನುಭವಿ ಮಧ್ಯಮವೇಗಿ ಜಯದೇವ್ ಉನದ್ಕರ್ (44ಕ್ಕೆ4) ಚೇತನ್ ಸಕಾರಿಯಾ (43ಕ್ಕೆ2) ಮತ್ತು ಚಿರಾಗ್ ಜಾನಿ (18ಕ್ಕೆ2) ಅವರ ಅಮೋಘ ದಾಳಿಯಿಂದಾಗಿ ಚಂಡೀಗಡ ತಂಡವು 136 ರನ್‌ಗಳಿಗೆ ಕುಸಿಯಿತು. 

ಇದಕ್ಕುತ್ತರವಾಗಿ ಸೌರಾಷ್ಟ್ರ ತಂಡವು ದಿನದಾಟದ ಮುಕ್ತಯಕ್ಕೆ38 ಓವರ್‌ಗಳಲ್ಲಿ 1 ವಿಕೆಟ್‌ಗೆ 167 ರನ್ ಗಳಿಸಿತು. ಹರ್ವಿಕ್ ದೇಸಾಯಿ (ಔಟಾಗದೇ 80) ಮತ್ತು ಜೈ ಗೋಹಿಲ್ (ಬ್ಯಾಟಿಂಗ್ 61) ಕ್ರೀಸ್‌ನಲ್ಲಿದ್ದಾರೆ. ಸೌರಾಷ್ಟ್ರವು ಒಟ್ಟು 31 ರನ್‌ಗಳ ಮುನ್ನಡೆ ಸಾಧಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.