ADVERTISEMENT

ಕೋವಿಡ್‌ಗೆ ಸೆಡ್ಡು ಹೊಡೆಯಲು ಬಯೋ ಸೆಕ್ಯುರ್ ಕ್ರಿಕೆಟ್

ಗಿರೀಶದೊಡ್ಡಮನಿ
Published 14 ಜೂನ್ 2020, 19:30 IST
Last Updated 14 ಜೂನ್ 2020, 19:30 IST
ಶ್ರೀಲಂಕಾದ ವಾನಿಂದು ಹಸರಂಗಾ ಈಚೆಗೆ ಅಭ್ಯಾಸಕ್ಕೆ ತೆರಳುವ ಮುನ್ನ ಸಾಬೂನು ನೀರಿನಿಂದ ಕೈ ತೊಳೆದರು  –ಎಎಫ್‌ಪಿ ಚಿತ್ರ
ಶ್ರೀಲಂಕಾದ ವಾನಿಂದು ಹಸರಂಗಾ ಈಚೆಗೆ ಅಭ್ಯಾಸಕ್ಕೆ ತೆರಳುವ ಮುನ್ನ ಸಾಬೂನು ನೀರಿನಿಂದ ಕೈ ತೊಳೆದರು –ಎಎಫ್‌ಪಿ ಚಿತ್ರ   
""

ಎರಡ್ಮೂರು ತಿಂಗಳುಗಳ ಹಿಂದೆ. ಯಾವುದಾದರೂ ದೇಶದ ಕ್ರಿಕೆಟ್ ತಂಡವು ಇನ್ನೊಂದು ದೇಶಕ್ಕೆ ಸರಣಿ ಆಡಲು ಹೆಚ್ಚೆಂದರೆ ಒಂದು ವಾರ ಮುಂಚಿತವಾಗಿ ಹೋಗುತ್ತಿತ್ತು. ಆತಿಥೇಯ ದೇಶಕ್ಕೆ ಬಂದ ಪ್ರವಾಸಿ ತಂಡದವರು ಅಭ್ಯಾಸ ಮಾಡುವ, ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ತೆರಳಿದ, ಹೋಟೆಲ್‌ಗಳಲ್ಲಿ ಮೋಜು ಮಾಡಿದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಜೃಂಭಿಸುತ್ತಿದ್ದವು.

ಆದರೆ ಈಗ..

ಜುಲೈ 8ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮೂರು ಟೆಸ್ಟ್‌ಗಳ ಸರಣಿ ಆಡಲು ವೆಸ್ಟ್ ಇಂಡೀಸ್ ಜೂನ್ 9ರಂದೇ ಅಂದರೆ ಒಂದು ತಿಂಗಳು ಮುನ್ನವೇ ವಿಶೇಷ ವಿಮಾನದಲ್ಲಿ ಬಂದಿಳಿದಿದೆ. ವಿಮಾನ ನಿಲ್ದಾಣದಲ್ಲಿಯೇ ಎಲ್ಲ ಆಟಗಾರರಿಗೂ ಕೊರೊನೊ ವೈರಸ್‌ ಸೋಂಕಿನ ಪರೀಕ್ಷೆಗೊಳಪಡಿಸಲಾಯಿತು. ಎಲ್ಲರ ವರದಿಯೂ ’ನೆಗೆಟಿವ್‘ ಬಂದಿದೆ. ಅವರೆಲ್ಲರಿಗೂ ಈಗ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ!

ADVERTISEMENT

ಇದು ಕೊರೊನೊತ್ತರ ಕ್ರಿಕೆಟ್‌ನ ಮೊದಲ ಸರಣಿಯಾಗಿದೆ. ಮೊದಲ ಪಂದ್ಯವು ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಉಳಿದೆರಡು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಭವಿಷ್ಯದ ಕ್ರಿಕೆಟ್‌ಗೆ ಈ ಸರಣಿಯು ದಿಕ್ಸೂಚಿಯಾಗಲಿದೆ. ’ಜೀವ ಸುರಕ್ಷಾ‘ (ಬಯೋ ಸೆಕ್ಯುರ್) ವಾತಾವರಣದಲ್ಲಿ ಈ ಟೆಸ್ಟ್ ಸರಣಿಗಳನ್ನು ನಡೆಸುವುದಾಗಿ ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಸಂಸ್ಥೆ ಹೇಳಿಕೊಂಡಿದೆ. ಅದರಿಂದಾಗಿ ಇಂಗ್ಲೆಂಡ್‌ ಮೇಲೆ ಈಗ ಜಗದ ಕಣ್ಣು ನೆಟ್ಟಿದೆ.

ಪಂದ್ಯ ನಡೆಯುವ ಒಂದೀಡಿ ಪ್ರದೇಶವನ್ನು ಸೋಂಕು ಮುಕ್ತಗೊಳಿಸುವುದು. ವೈರಸ್‌, ಬ್ಯಾಕ್ಟಿರಿಯಾ ಮತ್ತಿತರ ಯಾವುದೇ ಸ್ವಾಸ್ಥ್ಯ ಹಾನಿಕಾರಕಗಳು ಬರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು. ಅತ್ಯುನ್ನತ ರೀತಿಯ ನೈರ್ಮಲ್ಯ ಕ್ರಮಗಳನ್ನು ಅನುಸರಿಸುವುದು ಬಯೋ ಸೆಕ್ಯುರ್‌ನ ಅಂಶಗಳು. ಹಾಗಿದ್ದರೆ ಇಂಗ್ಲೆಂಡ್ ಏನೇನು ವ್ಯವಸ್ಥೆ ಮಾಡಿದೆ?

ಕ್ರೀಡಾಂಗಣದಲ್ಲಿಯೇ ಹೋಟೆಲ್!

ಈ ಮೊದಲು ಪಂಚತಾರಾ ಹೋಟೆಲ್‌ನಲ್ಲಿ ತಂಡಗಳ ಆಟಗಾರರು, ನೆರವು ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿತ್ತು. ಬಸ್ ಮೂಲಕ ಹೋಟೆಲ್‌ ನಿಂದ ಕ್ರೀಡಾಂಗಣಕ್ಕೆ ಕರೆತರುವುದು ವಾಡಿಕೆ.

ಆದರೆ ಈ ಬಾರಿ ಹಾಗಿಲ್ಲ. ಪಂದ್ಯಗಳು ನಡೆಯುವ ಎರಡೂ ತಾಣಗಳಲ್ಲಿ ಕ್ರೀಡಾಂಗಣದಲ್ಲಿಯೇ ಹಿಲ್ಟನ್‌ ಗಾರ್ಡನ್ ಸ್ಕೈ ಹೋಟೆಲ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಬಸ್‌ಪ್ರಯಾಣವನ್ನು ತಪ್ಪಿಸಲಾಗಿದೆ. ಹೋಟೆಲ್ ಮತ್ತು ಕ್ರೀಡಾಂಗಣಕ್ಕೆ ಸಂಪರ್ಕಕ್ಕಾಗಿ ಸೇತುವೆಗಳನ್ನು ನಿರ್ಮಿಸಲಾಗಿದೆ. ಹೊರಜಗತ್ತಿನ ಯಾವುದೇ ಸಂಪರ್ಕ ಇಲ್ಲದಂತೆ ನೋಡಿಕೊಳ್ಳಲಾಗಿದೆ.

ಮಾರ್ಚ್‌ನಲ್ಲಿ ಕೊರೊನಾ ಸೋಂಕಿನ ಕಾರಣ ರದ್ದಾದ ದಕ್ಷಿಣ ಆಫ್ರಿಕಾ ಎದುರಿನ ಕ್ರಿಕೆಟ್ ಸರಣಿಯ ನಂತರ ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿ –ಪಿಟಿಐ ಚಿತ್ರ

ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ

ಹೋಟೆಲ್ ಸಿಬ್ಬಂದಿ, ಅಡುಗೆ ಸಹಾಯಕರಿಗೆ ಖಡಕ್ ಸೂಚನೆ ನೀಡಲಾಗಿದೆ. ಯಾರೊಂದಿಗೂ ನೇರ ಸಂಪರ್ಕಕ್ಕೆ ಬರದಂತೆ ಊಟ, ತಿಂಡಿ, ಪಾನೀಯಗಳ ಸರಬರಾಜು ಮಾಡುವ ವ್ಯವಸ್ಥೆಯನ್ನು ಪಾಲಿಸಲಾಗುತ್ತಿದೆ. ಕಡಿಮೆ ಸಿಬ್ಬಂದಿಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಕೋಣೆ, ಶೌಚಾಲಯಗಳ ಬಾಗಿಲುಗಳಿಗೆ ಡಿಜಿಟಲ್ ಸೆನ್ಸಾರ್ ಲಾಕ್‌ಗಳನ್ನು ಹಾಕಲಾಗಿದೆ. ಕೈಯಿಂದ ಮುಟ್ಟದೇ ಬಾಗಿಲನ್ನು ತೆಗೆದು, ಮುಚ್ಚುವ ವ್ಯವಸ್ಥೆ ಇದೆ.

ಐಸಿಸಿ ಮಾರ್ಗಸೂಚಿ

ಕ್ರೀಡಾಂಗಣದಲ್ಲಿ ಆಟಗಾರರು, ಸಿಬ್ಬಂದಿಯ ನಡವಳಿಕೆಗಳ ಕುರಿತ ಮಾರ್ಗಸೂಚಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಚೆಂಡಿಗೆ ಎಂಜಲು ಹಚ್ಚುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಪಂದ್ಯವು ನಡೆಯುವ ಸಂದರ್ಭದಲ್ಲಿಯೇ ಯಾವುದಾದರೂ ಆಟಗಾರ ಕೋವಿಡ್ ಸೋಂಕಿಗೆ ತುತ್ತಾದರೆ ಬದಲೀ ಆಟಗಾರನನ್ನು ಕಣಕ್ಕಿಳಿಸಲಾಗುತ್ತದೆ. ಚೆಂಡು, ಬ್ಯಾಟ್ ಮತ್ತು ಕೈಗಳಿಗೆ ಸ್ಯಾನಿಟೈಸರ್‌ ಬಳಕೆಯಾಗಲಿದೆ. ವಿಜಯೋತ್ಸವದಲ್ಲಿ ಕೈ ಕೈ ತಾಡಿಸಿ ಸಂಭ್ರಮಿಸುವಂತಿಲ್ಲ.

ಇಷ್ಟೆಲ್ಲ ನಿರ್ಬಂಧಗಳನ್ನು ರೂಢಿಸಿಕೊಂಡು ಪ್ರೇಕ್ಷಕರೇ ಇಲ್ಲದ ಕ್ರೀಡಾಂಗಣದಲ್ಲಿ ಆಡಿ ಕೋವಿಡ್‌ಗೆ ಸೆಡ್ಡು ಹೊಡೆಯಲು ಕ್ರಿಕೆಟ್ ಲೋಕ ಸಜ್ಜಾಗಿದೆ. ಇಂಗ್ಲೆಂಡ್ ಸರಣಿಯು ಯಶಸ್ಸು ಸಾಧಿಸಿದರೆ ಇನ್ನುಳಿದ ದೇಶಗಳೂ ಮೈಕೊಡವಿ ಏಳಬಹುದು.

***

‘ಜೀವ ಸುರಕ್ಷಾ ವಾತಾವರಣ’ದಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಡೆಸುವ ಪರಿಕಲ್ಪನೆಯು ಅವಾಸ್ತವಿಕ. ಸದ್ಯ ಇರುವ ವೇಳಾಪಟ್ಟಿಯಲ್ಲಿ ಎಲ್ಲರಿಗೂ ಇಸಿಬಿ ಸಲಹೆಯನ್ನು ಪಾಲಿಸುವುದು ಸಾಧ್ಯವಾಗುವುದಿಲ್ಲ.

– ರಾಹುಲ್ ದ್ರಾವಿಡ್,ಎನ್‌ಸಿಎ ಮುಖ್ಯಸ್ಥ

***

ವಿಂಡೀಸ್ ಆಟಗಾರರು ಇಂತಹ ಕಷ್ಟ ಕಾಲದಲ್ಲಿಯೂ ಇಲ್ಲಿಗೆ ಬಂದು ಸರಣಿ ಆಡುವ ದಿಟ್ಟತನ ತೋರಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಅವರ ಈ ಸಾಹಸವು ಕ್ರಿಕೆಟ್‌ ಉಳಿವಿಗೆ ಬಲ ತುಂಬಲಿದೆ.

– ಜೇಮ್ಸ್ ಆ್ಯಂಡರ್ಸನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.