ADVERTISEMENT

ಇಶಾನ್‌ ವೇಗಕ್ಕೆ ಕುಸಿದ ಇಂಡಿಯಾ ಬ್ಲೂ

ದುಲೀಪ್‌ ಟ್ರೋಫಿ: ಅಲ್ಪ ಮೊತ್ತ ಗಳಿಸಿದ ಗಿಲ್‌ ಪಡೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 3:13 IST
Last Updated 18 ಆಗಸ್ಟ್ 2019, 3:13 IST
ಜಲಜ್‌ ಸಕ್ಸೇನಾ ವಿಕೆಟ್‌ ಗಳಿಸಿದ ಇಶಾನ್‌ ಪೊರೆಲ್‌ (ಎಡದಿಂದ ಎರಡನೇವರು) ಅವರನ್ನು ಸಹ ಆಟಗಾರರು ಅಭಿನಂದಿಸಿದರು –ಪ್ರಜಾವಾಣಿ ಚಿತ್ರ/ಶ್ರೀಕಂಠ ಶರ್ಮಾ.ಆರ್‌
ಜಲಜ್‌ ಸಕ್ಸೇನಾ ವಿಕೆಟ್‌ ಗಳಿಸಿದ ಇಶಾನ್‌ ಪೊರೆಲ್‌ (ಎಡದಿಂದ ಎರಡನೇವರು) ಅವರನ್ನು ಸಹ ಆಟಗಾರರು ಅಭಿನಂದಿಸಿದರು –ಪ್ರಜಾವಾಣಿ ಚಿತ್ರ/ಶ್ರೀಕಂಠ ಶರ್ಮಾ.ಆರ್‌   

ಬೆಂಗಳೂರು: ಬಂಗಾಳದ ಬೌಲರ್‌ ಇಶಾನ್‌ ಪೊರೆಲ್‌ ಅವರ ವೇಗಕ್ಕೆ ಇಂಡಿಯಾ ಬ್ಲೂ ತಂಡ ನಲುಗಿತು. ದುಲೀಪ್‌ ಟ್ರೋಫಿಯ ಮೊದಲ ಪಂದ್ಯದಲ್ಲಿ ಶುಭಮನ್‌ ಗಿಲ್‌ ಪಡೆಯು ಇಂಡಿಯಾ ಗ್ರೀನ್‌ ತಂಡದ ಎದುರು 112 ರನ್‌ ಗಳಿಸಿ ಆರು ವಿಕೆಟ್‌ ಕಳೆದುಕೊಂಡಿದೆ.

ಜಸ್ಟ್‌ ಕ್ರಿಕೆಟ್‌ ಅಕಾಡಮಿ ಮೈದಾನದಲ್ಲಿ ಮೊದಲ ದಿನದಾಟಕ್ಕೆ ಮಳೆ ಕಾಡಿತು. ಕೇವಲ 49 ಓವರ್‌ಗಳನ್ನಷ್ಟೇ ಆಡಿಸಲು ಸಾಧ್ಯವಾಯಿತು. ಟಾಸ್‌ ಗೆದ್ದ ಇಂಡಿಯಾ ಗ್ರೀನ್‌ ನಾಯಕ ಫಯಾಜ್‌ ಫಜಲ್‌ ಫೀಲ್ಡಿಂಗ್‌ ಆಯ್ದುಕೊಂಡರು.

ರಾಜಸ್ತಾನದ ಎಡಗೈ ವೇಗಿ ತನ್ವೀರ್‌ ಉಲ್‌ ಹಕ್‌ ಅವರು ಆರಂಭಿಕ ಆಟಗಾರ ಸ್ನೆಲ್‌ ಪಟೇಲ್‌ (5) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಆ ಬಳಿಕ ಪೊರೆಲ್‌ ಪ್ರತಾಪ ಆರಂಭವಾಯಿತು. ನಾಯಕ ಶುಭಮನ್‌ ಗಿಲ್‌ (6) ಅವರನ್ನು ಪೊರೆಲ್‌, ವಿಕೆಟ್‌ ಕೀಪರ್‌ ಅಕ್ಷಯ್‌ ವಾಡಕರ್‌ಗೆ ಕ್ಯಾಚ್‌ ನೀಡುವಂತೆ ಮಾಡಿ ಗ್ರೀನ್‌ ಪಡೆಯಲ್ಲಿ ಸಂತಸ ಉಕ್ಕಿಸಿದರು.

ADVERTISEMENT

ಸೊಗಸಾದ ಬೌಲಿಂಗ್‌ನಿಂದ ಬಲಗೈ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಪೊರೆಲ್‌ ತಮ್ಮ 12 ಓವರ್‌ಗಳ ಸ್ಪೆಲ್‌ನಲ್ಲಿ 26 ರನ್‌ ನೀಡಿ ಮೂರು ವಿಕೆಟ್‌ ತಮ್ಮದಾಗಿಸಿಕೊಂಡರು.

ಋತುರಾಜ್‌ ಗಾಯಕವಾಡ (30) ಎರಡು ಸಿಕ್ಸರ್‌ ಮೂರು ಬೌಂಡರಿ ಬಾರಿಸಿ ಇಂಡಿಯಾ ಗ್ರೀನ್‌ ಬೌಲರ್‌ಗಳಿಗೆ ಅಲ್ಪ ಪ್ರತಿರೋಧ ತೋರಿದರು. ಅವರನ್ನು ಬೌಲ್ಡ್‌ ಮಾಡಿದ ತನ್ವೀರ್‌ ಉಲ್‌ ಹಕ್‌ ಅವರು ಗ್ರೀನ್‌ ತಂಡದ ಸಂಭ್ರಮಕ್ಕೆ ಕಾರಣವಾದರು.

ಅನ್ಮೋಲ್‌ ಪ್ರೀತ್‌ ಸಿಂಗ್‌ ಅವರು ಪೊರೆಲ್‌ಗೆ ಎರಡನೇ ವಿಕೆಟ್‌ ಆಗಿ ಪೆವಿಲಿಯನ್‌ ಸೇರಿದರು. ಜಲಜ್‌ ಸಕ್ಸೇನಾ (19) ರೂಪದಲ್ಲಿ ಪೊರೆಲ್‌ಗೆ ಮೂರನೇ ವಿಕೆಟ್‌ ದಕ್ಕಿತು.

ಇನ್ನೊಂದೆಡೆ ರಿಕಿ ಭುಯಿ (2) ಅಂಕಿತ್‌ ರಾಜಪೂತ್‌ಗೆ ವಿಕೆಟ್‌ ಕೈಚೆಲ್ಲಿದರು. ಅನುಭವಿ ಆಟಗಾರ ಅಂಕಿತ್ ಭಾವ್ನೆ (ಔಟಾಗದೆ 21) ಹಾಗೂ ಸೌರಭ್‌ ಕುಮಾರ್‌ (2) ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರು: ಇಂಡಿಯಾ ಬ್ಲೂ ಪ್ರಥಮ ಇನಿಂಗ್ಸ್: 49 ಓವರ್‌ಗಳಲ್ಲಿ 6 ವಿಕೆಟ್‌ಗೆ 112 (ಋತುರಾಜ್‌ ಗಾಯಕವಾಡ 30, ಅಂಕಿತ್‌ ಭಾವ್ನೆ ಔಟಾಗದೆ 21; ಇಶಾನ್‌ ಪೊರೆಲ್‌ 26ಕ್ಕೆ 3, ತನ್ವೀರ್‌ ಉಲ್‌ ಹಕ್‌ 36ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.