ADVERTISEMENT

ಸಿದ್ಧಾರ್ಥನಿಗೆ ವರದಾನವಾದ ಲಾಕ್‌ಡೌನ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 14:35 IST
Last Updated 5 ಜನವರಿ 2021, 14:35 IST
ಕೆ.ವಿ. ಸಿದ್ಧಾರ್ಥ್
ಕೆ.ವಿ. ಸಿದ್ಧಾರ್ಥ್   

‘ಕೋವಿಡ್ 19 ಪ್ರಸರಣಕ್ಕೆ ತಡೆಯೊಡ್ಡಲು ಲಾಕ್‌ಡೌನ್ ವಿಧಿಸಿದ್ದು ಒಂದು ರೀತಿಯಲ್ಲಿ ನನಗೆ ವರದಾನವಾಯಿತು. ಬಹಳ ಸಮಯದಿಂದ ಕಾಡುತ್ತಿದ್ದ ನನ್ನ ಭುಜದ ಗಾಯವನ್ನು ಶಮನ ಮಾಡಿಕೊಳ್ಳಲು ಅನುಕೂಲವಾಯಿತು’–

ಕರ್ನಾಟಕ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಕೆ.ವಿ. ಸಿದ್ಧಾರ್ಥ್ ಅವರ ನುಡಿಗಳಿವು. ಅವರು ಇದೇ 10ರಿಂದ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಸಿದ್ಧರಾಗಿದ್ದಾರೆ. 2018ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದಲ್ಲಿ ಪದಾರ್ಪಣೆ ಮಾಡಿದ್ದ ಸಿದ್ಧಾರ್ಥ್‌ ರನ್‌ಗಳ ಹೊಳೆ ಹರಿಸಿದ್ದರು. ಆದರೆ ಮರುವರ್ಷ ಅವರಿಗೆ ಭುಜದ ನೋವು ಕಾಡಿತ್ತು. ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿತ್ತು.

ಕರ್ನಾಟಕ ತಂಡದಲ್ಲಿರುವ ಅಪಾರ ಪೈಪೋಟಿಯನ್ನು ಎದುರಿಸಲು ಸಿದ್ಧಾರ್ಥ್, ಫಿಸಿಯೊಥೆರಪಿ ಮತ್ತು ಗುಳಿಗೆಗಳ ಮೂಲಕವೇ ನೋವು ಕಡಿಮೆ ಮಾಡಿಕೊಂಡು ಆಡಿದರು. ಸ್ಥಾನ ಉಳಿಸಿಕೊಳ್ಳುವ ಒತ್ತಡದಲ್ಲಿ ಸರ್ಜರಿ, ದೀರ್ಘ ವಿಶ್ರಾಂತಿಗೆ ಆದ್ಯತೆ ಕೊಡಲಿಲ್ಲ. ಆದರೂ ಕೆಲವು ಪಂದ್ಯಗಳಲ್ಲಿ ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ.

ADVERTISEMENT

ಆದರೆ ಹೋದ ಮಾರ್ಚ್‌ನಿಂದ ಡಿಸೆಂಬರ್‌ವರೆಗೆ ಕ್ರಿಕೆಟ್ ಚಟುವಟಿಕೆಗಳು ಬಹುತೇಕ ಸ್ಥಗಿತವಾದವು. ಹೋದ ತಿಂಗಳು ವೈಎಸ್‌ಆರ್ ಟ್ರೋಫಿ ಟೂರ್ನಿಯೊಂದಿಗೆ ಕರ್ನಾಟಕದಲ್ಲಿ ಮತ್ತೆ ಕ್ರಿಕೆಟ್ ಗರಿಗೆದರಿತು. ಈಗ ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್ ಭಾರತ ತಂಡದಲ್ಲಿ ಆಡಲು ತೆರಳಿದ್ದಾರೆ. ಮನೀಷ್ ಪಾಂಡೆ ಗಾಯಗೊಂಡಿರುವುದರಿಂದ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಡುತ್ತಿಲ್ಲ. ಆದ್ದರಿಂದ ಸಿದ್ಧಾರ್ಥ್ ಮೇಲೆ ನಿರೀಕ್ಷೆ ಹೆಚ್ಚಿದೆ.

‘ನಾಲ್ಕು ತಿಂಗಳ ಅವಧಿಯಲ್ಲಿ ನನ್ನ ಗಾಯವನ್ನು ಶಮನ ಮಾಡಿಕೊಳ್ಳಲು ಒತ್ತು ನೀಡಿದೆ. ವೈದ್ಯರು ಮತ್ತು ತಜ್ಞರ ಸಲಹೆಗಳ ಅನ್ವಯ ಫಿಟ್‌ನೆಸ್‌ ಹೆಚ್ಚಿಸಿಕೊಳ್ಳಲೂ ಆದ್ಯತೆ ನೀಡಿದೆ. ಅಭ್ಯಾಸವನ್ನೂ ಚೆನ್ನಾಗಿ ಮಾಡಿದ್ದೇನೆ’ ಎಂದು ಹೇಳುತ್ತಾರೆ.

‘ಆ ಮೂವರು ಆಟಗಾರರ ಗೈರು ಹಾಜರಿಯಲ್ಲಿ ಆಡುವುದು ದೊಡ್ಡ ಹೊಣೆ. ಜೊತೆಗೆ ನಮಗೂ ಒಂದು ಒಳ್ಳೆಯ ಅವಕಾಶವೂ ಹೌದು. ಬೆಂಚ್‌ ಶಕ್ತಿಯ ಪರೀಕ್ಷೆಯೂ ಇದಾಗಿದೆ. ನಮ್ಮ ಸಾಮರ್ಥ್ಯವನ್ನು ತೋರಿಸುವ ಸುವರ್ಣವಕಾಶ ಇದು’ ಎಂದು ಸಿದ್ಧಾರ್ಥ್ ಹೇಳುತ್ತಾರೆ.

16 ಪ್ರಥಮ ದರ್ಜೆ ಪಂದ್ಯ ಗಳಿಂದ 1059 ರನ್‌ಗಳನ್ನು ಸಿದ್ಧಾರ್ಥ್ ಗಳಿಸಿದ್ದಾರೆ. ಅದರಲ್ಲಿ ಎರಡು ಶತಕ ಮತ್ತು ಎಂಟು ಅರ್ಧಶತಕಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.