ಸಿಡ್ನಿ: ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅಂತಿಮ ಪಂದ್ಯದ ಮೂರನೇ ದಿನ ಜಸ್‌ಪ್ರೀತ್ ಬೂಮ್ರಾ ಫಿಟ್ ಆಗಿದ್ದಿದ್ದರೆ ಏನಾಗಿರುತಿತ್ತು? ಪಂದ್ಯದ ನಿರ್ಣಾಯಕ ದಿನವೇ ವಿಶ್ವದ ಶ್ರೇಷ್ಠ ವೇಗದ ಬೌಲರ್ ಅಲಭ್ಯರಾಗಿ ಭಾರತ ತಂಡದ ದಾಳಿ ಗಣನೀಯವಾಗಿ ದುರ್ಬಲವಾಯಿತು. ಆಸ್ಟ್ರೇಲಿಯಾ 162 ರನ್‌ಗಳ ಗುರಿಯನ್ನು ಆರಾಮವಾಗಿ ತಲುಪಿ ಆರು ವಿಕೆಟ್‌ಗಳಿಂದ ಜಯಗಳಿಸಿತು.
ಬೂಮ್ರಾ ಬೌಲಿಂಗ್ ಮಾಡಿದ್ದಿದ್ದರೆ ಪಂದ್ಯದ ಸ್ಥಿತಿ ಬದಲಾಗುವ ಸಾಧ್ಯತೆ ಹೆಚ್ಚಿತ್ತು. ಸಿಡ್ನಿ ಟೆಸ್ಟ್‌ನಲ್ಲಿ ಗೆದ್ದರೆ ಸರಣಿ ಸಮಬಲವಾಗಿ, ತಂಡದ ಸೋಲಿನ ಪರಾಮರ್ಶೆಯ ಕಡೆ ಈಗಿನಷ್ಟು ಗಮನ ಹರಿಯುತ್ತಿರಲಿಲ್ಲ. ತಂಡದ ಅನುಭವಿಗಳ ಕಳಪೆ ಫಾರ್ಮ್‌ಗಿಂತ ಬೂಮ್ರಾ ಅವರು ಸಾಧಿಸಿದ ಪ್ರಾಬಲ್ಯ ಇನ್ನೂ ಹೆಚ್ಚು ಮಹತ್ವ ಪಡೆಯುತಿತ್ತು. ಹೊರದೇಶಗಳಲ್ಲಿ ತಂಡದ ಯುವ ಆಟಗಾರರು ಪ್ರದರ್ಶನದ ಕಡೆ ಹೆಚ್ಚು ಒತ್ತು ಇರುತ್ತಿರಲಿಲ್ಲ. ತರಬೇತು ಸಿಬ್ಬಂದಿ ಬಗ್ಗೆಯೂ ಹೆಚ್ಚು ಮಾತುಗಳು ಕೇಳಿಬರುತ್ತಿರಲಿಲ್ಲ.
ಭಾರತ ತಂಡದ ಆಟ ಸರಣಿಯ ಅಂತರ (3–1) ಹೇಳುವಷ್ಟು ಕಳಪೆಯಾಗಿರಲಿಲ್ಲ. ಆದರೆ ಹೆಡ್ ಕೋಚ್ ಅವರ ಮಾತುಗಳೂ ಇಲ್ಲಿ ಮುಖ್ಯವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಅವರು ಅದನ್ನು ಹೇಳುತ್ತ ಬಂದಿದ್ದಾರೆ. ‘ಕ್ರೀಡೆಯಲ್ಲಿ ಅಂತಿಮವಾಗಿ ಫಲಿತಾಂಶಗಳೇ ಮುಖ್ಯವಾಗುತ್ತದೆ. ಅದರ ಅನುಪಸ್ಥಿತಿಯಲ್ಲಿ ಕಠಿಣ ಪ್ರಶ್ನೆಗಳು ಎದುರಾಗುತ್ತವೆ. ಉತ್ತರದಾಯಿತ್ವಕ್ಕೆ ಆಗ್ರಹ ಕೇಳಿಬರುತ್ತದೆ’ ಎಂದಿದ್ದರು.
ಸರಣಿಯಲ್ಲಿ ಭಾರತದ ಪತನಕ್ಕೆ ಮುಖ್ಯ ಕಾರಣ ಬ್ಯಾಟಿಂಗ್‌ನಲ್ಲಿ ಅಸ್ಥಿರ ಪ್ರದರ್ಶನ ಮತ್ತು ಪ್ರಶ್ನಾರ್ಹ ತಂತ್ರಗಾರಿಕೆಗಳು. ಮೊದಲ ಸಲ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಯಶಸ್ವಿ ಜೈಸ್ವಾಲ್, ಮೇಲಿನ ಕ್ರಮಾಂಕದಲ್ಲಿ ಕೆ.ಎಲ್.ರಾಹುಲ್, ನಿತೀಶ್ ರೆಡ್ಡಿ ಅವರನ್ನು ಹೊರತುಪಡಿಸಿದರೆ, ಉಳಿದ ಬ್ಯಾಟರ್‌ಗಳು ಸ್ಥಿರಪ್ರದರ್ಶನಕ್ಕೆ ಪರದಾಡಿದರು. ಅವರ ಈ ಅಸ್ಥಿರ ಆಟದಿಂದ ಬೌಲರ್‌ಗಳ ಮೇಲೆ ಹೆಚ್ಚು ಒತ್ತಡ ಉಂಟಾಯಿತು; ವಿಶೇಷವಾಗಿ ಮೊದಲ ಇನಿಂಗ್ಸ್ ವೇಳೆ.
ಪರ್ತ್‌ನ ಎರಡನೇ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದು ಬಿಟ್ಟರೆ ನಂತರ ವಿರಾಟ್ ಕೊಹ್ಲಿ ಅವರ ಕಾಣಿಕೆ ಅತ್ಯಲ್ಪ. ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ ಸಹ ಒಂದಿಷ್ಟೂ ಪರಿಣಾಮ ಬೀರಲಿಲ್ಲ. ಅವರ ಬ್ಯಾಟಿಂಗ್ ಕ್ರಮಾಂಕ ಒಮ್ಮೆ ಬದಲಾದರೂ ಏನೂ ಪ್ರಯೋಜನವಾಗಲಿಲ್ಲ. ಅಂತಿಮ ಟೆಸ್ಟ್‌ನಲ್ಲಿ ರಿಷಭ್ ಪಂತ್ ಅಮೋಘ ಆಟವಾಡಿದರೂ, ಅದು ತಡವಾಗಿ ಬಂತು. ಉಳಿದ ಪಂದ್ಯಗಳಲ್ಲಿ ಅವರ ಆಟ ಅಂಥ ವ್ಯತ್ಯಾಸವನ್ನೇನೂ ಮಾಡಲಿಲ್ಲ.
ಶುಭಮನ್ ಗಿಲ್, ತವರಿನಲ್ಲಿ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಪ್ರಭಾವಶಾಲಿ ಎನಿಸಿದ್ದರು. ಆದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನೆಲದಲ್ಲಿ ಅವರ ಪರದಾಟ ಮುಂದುವರಿಯಿತು. ಅವರು ಲಯಕ್ಕೆ ಬರುವಂತೆ ಕಾಣುವಾಗಲೇ ವಿಕೆಟ್ ನೀಡುತ್ತಿದ್ದರು. ಇದು ತಾಂತ್ರಿಕ ಮತ್ತು ಮಾನಸಿಕ ಸವಾಲಿನ ವಿಷಯ.
2020ರಲ್ಲಿ ಪದಾರ್ಪಣೆ ಮಾಡಿದ ನಂತರ ತವರಿನಂದಾಚೆಗೆ ಗಿಲ್ ಅವರ ನಿರಾಶಾದಾಯಕ ಆಟ ಅಂಕಿಅಂಶಗಳಿಂದಲೂ ವ್ಯಕ್ತವಾಗುತ್ತದೆ. ಏಷ್ಯಾ ಮತ್ತು ವೆಸ್ಟ್ ಇಂಡೀಸ್ ಹೊರಗಡೆ ಅವರು 21 ಇನಿಂಗ್ಸ್‌ಗಳಿಂದ ಕೇವಲ 514 ರನ್ ಗಳಿಸಿದ್ದಾರೆ. ಗಮನಾರ್ಹ ಎಂದರೆ ಇದರಲ್ಲಿ 259 ರನ್‌ಗಳನ್ನು ಮೊದಲ ಆರು ಇನಿಂಗ್ಸ್‌ಗಳಲ್ಲಿ (2020–21) ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಗಳಿಸಿದ್ದರು. ಬ್ರಿಸ್ಬೇನ್‌ನಲ್ಲಿ ಗಳಿಸಿದ ವೀರೋಚಿತ 91 ರನ್ ಬಿಟ್ಟರೆ, ನಂತರ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ 15 ಇನಿಂಗ್ಸ್‌ಗಳಲ್ಲಿ ಅವರ ಅತ್ಯಧಿಕ ಮೊತ್ತ ಬರೇ 36.
ಭಾರತದ ಬ್ಯಾಟಿಂಗ್ ದೌರ್ಬಲ್ಯದ ಬಗ್ಗೆ ಗಂಭೀರ್ ಅವರಿಗೆ ತಡೆದುಕೊಳ್ಳಲಾಗಲಿಲ್ಲ. ವಿಶೇಷವಾಗಿ ಮೊದಲ ಇನಿಂಗ್ಸ್‌ಗಳಲ್ಲಿ ಭಾರತ ಉತ್ತಮ ಮೊತ್ತ ಪೇರಿಸಲಿಲ್ಲ. ಹೀಗಾಗಿ ಬೌಲರ್‌ಗಳಿಗೆ ಬೆವರಿಳಿಸುವಂಥ ಪರಿಸ್ಥಿತಿ ಎದುರಾಯಿತು. ಇದು ಬರೇ ಆಸ್ಟ್ರೇಲಿಯಾ ವಿರುದ್ಧ ಮಾತ್ರವಲ್ಲ, ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧವೂ ಇದೇ ಕಥೆ.
‘ಅಗ್ರ ಎಂಟರಲ್ಲಿ ನಿತೀಶ್ ಮತ್ತು ಯಶಸ್ವಿ ಬಿಟ್ಟರೆ ಉಳಿದವರಿಗೆ ಇಲ್ಲಿ (ಆಸ್ಟ್ರೇಲಿಯಾದಲ್ಲಿ) ಆಡಿದ ಅನುಭವವಿತ್ತು’ ಎಂದು ಗಂಭೀರ್ ಹೇಳಿದ್ದಾರೆ. ‘ಯುವ ಆಟಗಾರರಷ್ಟೇ ಹೊಣೆಯಲ್ಲ, ಸಾಕಷ್ಟು ಅನುಭವಿಗಳೂ ತಂಡದಲ್ಲಿದ್ದರು. ಪಿಚ್‌ಗಳು ಕೆಲಮಟ್ಟಿಗೆ ಈ ಸ್ಥಿತಿಗೆ ಕಾರಣವಾಗಿರಬಹುದು. ಆದರೆ ಇದು ಆಸ್ಟ್ರೇಲಿಯಾ ವಿರುದ್ಧ ಮಾತ್ರ ಅಲ್ಲ. ತವರಿನಲ್ಲಿ (ನ್ಯೂಜಿಲೆಂಡ್ ವಿರುದ್ಧ) ನಮಗೆ ಇದೇ ರೀತಿಯಾಯಿತು’ ಎನ್ನುತ್ತಾರೆ ಕೋಚ್.
ತಮ್ಮ ಕಾಲದಲ್ಲಿ ದಿಟ್ಟ ಆಟಕ್ಕೆ ಹೆಸರಾಗಿದ್ದ ಗಂಭೀರ್ ಸಂಯಮದ ಮೂಲಕ ತಮ್ಮ ಬ್ಯಾಟಿಂಗ್‌ನಲ್ಲಿದ್ದ ತಾಂತ್ರಿಕ ಲೋಪಗಳನ್ನು ತಿದ್ದಿಕೊಂಡವರು.
‘ಎಲ್ಲವೂ ಮನೋಧರ್ಮವನ್ನು ಅವಲಂಬಿಸಿದೆ. ಕಠಿಣ ಪರಿಸ್ಥಿತಿಗಳಲ್ಲಿ ಹೇಗೆ ಆಡುತ್ತೇವೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಟೆಸ್ಟ್ ಕ್ರಿಕೆಟ್ ಎಂದರೆ ಒಂದೊಂದು ಅವಧಿಯನ್ನು ಕಳೆಯುವ, ಕೆಲವು ಬಾರಿ ಒಂದೊಂದು ಸ್ಪೆಲ್‌ಗಳನ್ನು ಆಡಿ ಮುಗಿಸುವುದಾಗಿರುತ್ತದೆ. ಹೀಗಾಗಿ ನಾವು ಗಮನಹರಿಸಬೇಕಾದ ಮುಖ್ಯ ವಿಷಯವೆಂದರೆ ಮೊದಲ 20, 30 ಮತ್ತು 40 ರನ್‌ಗಳನ್ನು ಶತಕವನ್ನಾಗಿ ಪರಿವರ್ತಿಸುವುದು ಹೇಗೆ ಎನ್ನುವುದರ ಕಡೆ ಗಮನಹರಿಸುವುದು. ಅದು ಶತಕ ಮಾತ್ರವಲ್ಲ, ಭರ್ಜರಿ ಶತಕವಾಗಬೇಕು. ನಂತರ ನಮ್ಮ ಬೌಲರ್‌ಗಳಿಗೆ ಬಿಟ್ಟುಕೊಡಬೇಕು. ಮೊದಲ ಇನಿಂಗ್ಸ್‌ನಲ್ಲಿ ನಾವು ದೊಡ್ಡ ಮೊತ್ತ ಗಳಿಸದಿದ್ದರೆ ಬೌಲಿಂಗ್ ವಿಭಾಗವು ಸದಾ ಒತ್ತಡದಲ್ಲೇ ಇರಬೇಕಾಗುತ್ತದೆ’ ಎಂದು ಗಂಭೀರ್ ಆತ್ಮಾವಲೋಕನದ ಮಾತುಗಳನ್ನಾಡಿದರು.
ಭಾರತ ಈ ಸರಣಿಯ ಟೆಸ್ಟ್ ಪಂದ್ಯಗಳಲ್ಲಿ ಮೂರು ಬಾರಿ ಮೊದಲ ಇನಿಂಗ್ಸ್‌ನಲ್ಲಿ 200ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.