ADVERTISEMENT

ಸತತ 12ನೇ ಜಯದ ಮೇಲೆ ವಿಜೇಂದರ್ ಕಣ್ಣು: ಕಾಮನ್‌ವೆಲ್ತ್ ಮಾಜಿ ಚಾಂಪಿಯನ್ ಎದುರಾಳಿ

ನವೆಂಬರ್‌ 22ರಂದು ಸೆಣಸಾಟ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 12:21 IST
Last Updated 18 ನವೆಂಬರ್ 2019, 12:21 IST
ಟ್ವಿಟರ್‌ ಚಿತ್ರ
ಟ್ವಿಟರ್‌ ಚಿತ್ರ   

ದುಬೈ:ಭಾರತದ ವೃತ್ತಿಪರ ಬಾಕ್ಸರ್‌ ವಿಜೇಂದರ್‌ ಸಿಂಗ್‌, ತಮ್ಮ ಮುಂದಿನ ಪಂದ್ಯದಲ್ಲಿ ಘಾನಾದ ಚಾರ್ಲ್ಸ್‌ ಅದಮು ವಿರುದ್ಧ ಕಣಕ್ಕಿಳಿಯಲಿದ್ದಾರೆ.10 ಸುತ್ತುಗಳನ್ನೊಳಗೊಂಡ ಪಂದ್ಯವು ನವೆಂಬರ್‌ 22ರಂದು ನಡೆಯಲಿದೆ.

ಡಬ್ಲೂಬಿಒ ಏಷ್ಯಾ ಫೆಸಿಫಿಕ್‌ ಹಾಗೂ ಓರಿಯೆಂಟಲ್‌ ಸೂಪರ್‌ ಮಿಡ್ಲ್‌ವೇಟ್‌ ಚಾಂಪಿಯನ್‌ ಆಗಿರುವ 34 ವರ್ಷದ ಸಿಂಗ್‌ವೃತ್ತಿಪರ ಬಾಕ್ಸಿಂಗ್‌ನಲ್ಲಿ ಆಡಿರುವ ಎಲ್ಲ(11) ಸ್ಪರ್ಧೆಯಲ್ಲಿಯೂ ಗೆಲುವು ಸಾಧಿಸಿದ್ದಾರೆ.

ಎರಡು ಬಾರಿ ಕಾಮನ್‌ವೆಲ್ತ್‌ ಚಾಂಪಿಯನ್‌ ಆಗಿರುವ ಅದಮು, ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. 42ರ ಹರೆಯದಅವರು ಈವರೆಗೆ ಒಟ್ಟು 47 ಪಂದ್ಯಗಳನ್ನಾಡಿದ್ದು, ಅದರಲ್ಲಿ 26 ನಾಕ್‌ಔಟ್‌ ಮಾದರಿಯವು. ಒಟ್ಟಾರೆ, 33 ಗೆಲುವು ಹಾಗೂ 13 ಸೋಲು ಕಂಡಿರುವ ಅವರು, ವಿಜೇಂದರ್‌ಗೆ ಕಠಿಣ ಸ್ಪರ್ಧೆಯೊಡ್ಡುವ ನಿರೀಕ್ಷೆ ಇದೆ.

ADVERTISEMENT

ಸ್ಪರ್ಧೆ ಬಗ್ಗೆ ಮಾತನಾಡಿರುವ ವಿಜೇಂದರ್‌, ‘ಎರಡು ತಿಂಗಳಿಗೂ ಹೆಚ್ಚು ಸಮಯ ಕಠಿಣ ಅಭ್ಯಾಸ ನಡೆಸಿದ್ದೇನೆ. ಈ ವರ್ಷವನ್ನು ಗೆಲುವಿನೊಂದಿಗೆ ಮುಗಿಸಲು ಸಂಪೂರ್ಣ ಸಜ್ಜಾಗಿದ್ದೇನೆ. ಈ ಪಂದ್ಯವು ನನಗೆ ಮುಂದಿನ ಹಂತಕ್ಕೆ ಮೆಟ್ಟಿಲಾಗಲಿದೆ’ ಎಂದಿದ್ದಾರೆ.

‘ಅದಮು ಅನುಭವಿ ಎದುರಾಳಿ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ನನಗೆ ಕೆಲವು ಹೊಸ ಪರೀಕ್ಷೆಗಳನ್ನು ಒಡ್ಡಲಿದ್ದಾರೆ. ನನಗಿಂತ ಹೆಚ್ಚು ಸುತ್ತಿನ ಹೋರಾಟ ನಡೆಸಿದ್ದಾರೆ. ಆದರೆ ಇದು ನನ್ನ ಸಾಮರ್ಥ್ಯದೊಂದಿಗಿನ ಸ್ಪರ್ಧೆ’ ಎಂದು ಹೇಳಿದ್ದಾರೆ.

ಸತತ 11 ಗೆಲುವುಗಳನ್ನು ಕಂಡಿರುವ ವಿಜೇಂದರ್‌ ಗೆಲುವಿನ ಓಟಕ್ಕೆ ತಡೆಯೊಡ್ಡುವ ವಿಶ್ವಾಸದಲ್ಲಿರುವ ಅದಮು, ‘ನಾನು ನನ್ನ ಅನುಭವವನ್ನು ಆಟದಲ್ಲಿ ಅಳವಡಿಸಿಕೊಂಡು, ವಿಜೇಂದರ್‌ ಮನಸ್ಥಿತಿಯೊಂದಿಗೆ ಸೆಣಸಲಿದ್ದೇನೆ. ಈ ಹಿಂದಿನ ಎಲ್ಲ ಪಂದ್ಯಗಳಲ್ಲಿಯೂ ಎದುರಾಳಿಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅವಲೋಕಿಸಿ ಆಡಿದ್ದೇನೆ’

‘ಒಂದು ವೇಳೆ ವಿಜೇಂದರ್‌ ನನ್ನ ಎದುರಾಳಿ ನನಗಿಂತ ಹಿರಿಯ ಎಂದು ಭಾವಿಸಿದರೆ, ಅದು ದೊಡ್ಡ ತಪ್ಪಾಗುತ್ತದೆ. ನಾನು ಕಾಮನ್‌ವೆಲ್ತ್‌ ಸೂಪರ್‌ಮಿಡ್ಲ್‌ವೆಟ್‌ ಚಾಂಪಿಯನ‌್‌ಷಿಪ್‌ನಲ್ಲಿ ಎರಡು ಬಾರಿಯ ಚಾಂಪಿಯನ್‌. ವಿಜೇಂದರ್‌ಗೆ ಈ ಹಿಂದೆ ಎದುರಿಸಿರದ ತಂತ್ರಗಳನ್ನು ತೋರಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.