ADVERTISEMENT

ಬೇರೊಬ್ಬರನ್ನು ಅನುಸರಿಸದೆ ನಿಮ್ಮದೇ ರೀತಿ ಆಡಿ: ಪಂತ್‌ಗೆ ಮಾಜಿ ಕ್ರಿಕೆಟಿಗನ ಸಲಹೆ

ಏಜೆನ್ಸೀಸ್
Published 19 ಮಾರ್ಚ್ 2020, 5:53 IST
Last Updated 19 ಮಾರ್ಚ್ 2020, 5:53 IST
   

ನವದೆಹಲಿ:ಭಾರತ ಕ್ರಿಕೆಟ್‌ ತಂಡದ ಯುವ ವಿಕೆಟ್‌ಕೀಪರ್‌ ರಿಷಭ್‌ ಪಂತ್‌ ಅವರು ಬೇರೊಬ್ಬರ ಶೈಲಿಯನ್ನು ಅನುಸರಿಸಲು ಪ್ರಯತ್ನಿಸಿ ಒತ್ತಡಕ್ಕೆ ಒಳಗಾಗುವ ಬದಲು, ತಮ್ಮದೇ ರೀತಿಯಲ್ಲಿ ಗುರುತಿಸಿಕೊಳ್ಳಬೇಕು ಎಂದು ಆಸ್ಟ್ರೇಲಿಯಾದಮಾಜಿ ಕ್ರಿಕೆಟಿಗ ಬ್ರಾಡ್‌ ಹಡಿನ್‌ ಸಲಹೆ ನೀಡಿದ್ದಾರೆ.

ಕ್ರೀಡಾನಿಯತಕಾಲಿಕೆ ಸ್ಪೋರ್ಟ್ಸ್‌ಸ್ಟಾರ್‌ ಜೊತೆ ಮಾತನಾಡಿರುವ ಅವರು,‘ನೀವು ನಿಮ್ಮದೇ ಶೈಲಿಯಲ್ಲಿ ತಂಡಕ್ಕಾಗಿ ಆಡಬೇಕು. ಟೆಸ್ಟ್ ಕ್ರಿಕೆಟ್ ಆಡಲು ನನಗೆ ಮೊದಲು ಅವಕಾಶ ಸಿಕ್ಕಾಗ,ಆಡಂ ಗಿಲ್‌ಕ್ರಿಸ್ಟ್ ಅಥವಾ ಇಯಾನ್ ಹೀಲಿ ಅವರಂತೆ ಆಡಲು ಪ್ರಯತ್ನಿಸಲಿಲ್ಲ. ನನ್ನದೇ ವಿಶಿಷ್ಟ ಶೈಲಿಯನ್ನು ಆಟದಲ್ಲಿ ಅಳವಡಿಸಿಕೊಳ್ಳಬೇಕಾಗಿತ್ತು. ನೀವಲ್ಲದ ಇನ್ನೊಬ್ಬರ ಶೈಲಿಯಲ್ಲಿ ಆಡುವುದನ್ನು ಪ್ರಯತ್ನಿಸುವುದೇ ಇಲ್ಲಿರುವ ಮೊದಲ ಸವಾಲು. ನೀವು ನೀವಾಗಿಯೇ ಆಡಬೇಕು’ ಎಂದು ತಿಳಿಸಿದ್ದಾರೆ.ಗಿಲ್‌ಕ್ರಿಸ್ಟ್ ಹಾಗೂ ಹೀಲಿ ಇಬ್ಬರೂಆಸಿಸ್‌ನಮಾಜಿ ವಿಕೆಟ್‌ಕೀಪರ್‌ಗಳು.

‘ಈ ಹಂತದಲ್ಲಿ ಪ್ರತಿಯೊಬ್ಬರಲ್ಲೂ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ನೀವು ನಿಭಾಯಿಸಲೇಬೇಕಾದ ಹಲವು ವಿಚಾರಗಳಲ್ಲಿ ಅದೂ ಒಂದು. ಆದರೆ, ತುಂಬಾ ಮುಖ್ಯವಾದ ವಿಚಾರವೆಂದರೆ, ನೀವು ಜಗತ್ತಿನೆದುರು ಸಾಬೀತು ಮಾಡಬೇಕಿರುವನಿಮ್ಮ ಸಾಮರ್ಥ್ಯ ಹಾಗೂ ಸ್ಥಾನವನ್ನು ನಿಮ್ಮದೇ ರೀತಿಯಲ್ಲಿ ಸೃಷ್ಟಿಸಿಕೊಳ್ಳುವುದು’ ಎಂದು ಕಿವಿಮಾತು ಹೇಳಿದ್ದಾರೆ.

ADVERTISEMENT

ವೃದ್ದಿಮಾನ್‌ ಸಹಾ ಮತ್ತು ರಿಷಭ್ ಪಂತ್‌ ಭಾರತ ಪರ ಟೆಸ್ಟ್‌ ಹಾಗೂ ಏಕದಿನ ಮಾದರಿಯಲ್ಲಿ ವಿಕೆಟ್‌ ಕೀಪರ್‌ಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಕೆ.ಎಲ್‌.ರಾಹುಲ್‌ ಅವರು ವಿಕೆಟ್‌ ಕೀಪರ್‌ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿರುವುದರಿಂದ, ಫಾರ್ಮ್‌ ಸಮಸ್ಯೆಯಿಂದ ಬಳಲುತ್ತಿರುವ ರಿಷಭ್‌ ಪಂತ್‌ ಸ್ಥಾನಕ್ಕೆ ಕುತ್ತುಬಂದಿದೆ.

‘ಕಳೆದ ಹತ್ತು ವರ್ಷಗಳಿಂದ ಕ್ರಿಕೆಟ್‌ ರಂಗದ ಸೂಪರ್‌ಸ್ಟಾರ್ ಆಗಿದ್ದ ಎಂ.ಎಸ್‌. ಧೋನಿ ಅವರುಭಾರತದ ವಿಕೆಟ್‌ಕೀಪರ್‌ ಸ್ಥಾನ ನಿರ್ವಹಿಸಿದ್ದರು. ಹಾಗಾಗಿ, ಆ ಸ್ಥಾನವನ್ನು ತಮ್ಮದೇ ಶೈಲಿಯಲ್ಲಿ ಯಾರು ಮುಂದುವರಿಸುತ್ತಾರೆ ಎಂಬುದು ಮುಖ್ಯ. ಧೋನಿ ಉತ್ತಮ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ. ಭಾರತದ ವಿಕೆಟ್‌ಕೀಪರ್‌ ಆಗಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಳ್ಳುವ ಜವಾಬ್ದಾರಿ ಮುಂದಿನವರ ಮೇಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಟಿ20 ವಿಶ್ವಕಪ್‌ ಕುರಿತು ಮಾತನಾಡಿರುವ ಅವರು, ಸದ್ಯದ ಸ್ಥಿತಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.