ADVERTISEMENT

ವೆಸ್ಟ್‌ ಇಂಡೀಸ್‌ ವಿರುದ್ಧ ಸರಣಿ; ಮೊದಲ ಟೆಸ್ಟ್‌ಗೆ ಬ್ರಾಡ್‌ ಇಲ್ಲ?

ಪಿಟಿಐ
Published 6 ಜುಲೈ 2020, 14:10 IST
Last Updated 6 ಜುಲೈ 2020, 14:10 IST
ಸ್ಟುವರ್ಟ್‌ ಬ್ರಾಡ್‌–ರಾಯಿಟರ್ಸ್‌ ಚಿತ್ರ
ಸ್ಟುವರ್ಟ್‌ ಬ್ರಾಡ್‌–ರಾಯಿಟರ್ಸ್‌ ಚಿತ್ರ   

ಸೌತಾಂಪ್ಟನ್‌: ಇಂಗ್ಲೆಂಡ್‌ ತಂಡದ ಕಾರ್ಯತಂತ್ರದ ಭಾಗವಾಗಿ ಅನುಭವಿ ವೇಗಿ ಸ್ಟುವರ್ಟ್‌ ಬ್ರಾಡ್‌ ಅವರು ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ನಿರೀಕ್ಷೆಯಿದೆ. ಬುಧವಾರ ಆರಂಭವಾಗುವ ಪಂದ್ಯದಲ್ಲಿ ಇನ್ನೊಬ್ಬ ವೇಗಿ ಬೌಲರ್‌ ಜೇಮ್ಸ್‌ ಆ್ಯಂಡರ್ಸನ್ ಅವರಿಗೆ ಜೋಫ್ರಾ ಆರ್ಚರ್‌ ಹಾಗೂ ಮಾರ್ಕ್‌ ವುಡ್‌ ಅವರು ಜೊತೆಯಾಗುವ ಸಾಧ್ಯತೆಯಿದೆ.

‘ವೇಗದ ಬೌಲಿಂಗ್‌ ವಿಭಾಗಕ್ಕೆ ಆರಂಭದಲ್ಲಿ ಆರ್ಚರ್‌ ಹಾಗೂ ವುಡ್‌ ಜೋಡಿಯನ್ನು ಪರಿಗಣಿಸುವ ಸಾಧ್ಯತೆಯಿದೆ. ಒಂದೊಮ್ಮೆ ಹೀಗಾದರೆ ತವರಿನಲ್ಲಿ ನಡೆಯುವ ಟೆಸ್ಟ್‌ ಪಂದ್ಯವೊಂದರಲ್ಲಿ ಆಡುವ ಅವಕಾಶವನ್ನು ಎಂಟು ವರ್ಷಗಳಲ್ಲಿ ಮೊದಲ ಬಾರಿ ಬ್ರಾಡ್‌ ಕಳೆದುಕೊಂಡಂತಾಗುತ್ತದೆ’ ಎಂದು ದಿ ಗಾರ್ಡಿಯನ್‌ ಸುದ್ದಿಸಂಸ್ಥೆಯ ವರದಿ ಹೇಳಿದೆ.

2012ರಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ನಡೆದ ಟೆಸ್ಟ್‌ ಪಂದ್ಯಕ್ಕೆ ಬ್ರಾಡ್‌ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.

ADVERTISEMENT

ಟೆಸ್ಟ್‌ ಮಾದರಿಯಲ್ಲಿ ಬ್ರಾಡ್‌ ಅವರು ಇದುವರೆಗೆ 485 ವಿಕೆಟ್‌ ಗಳಿಸಿದ್ದಾರೆ. ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್‌ ಪಡೆದವರ ಸಾಲಿನಲ್ಲಿ ಎರಡನೆಯವರು ಬ್ರಾಡ್‌. ಮೊದಲ ಸ್ಥಾನದಲ್ಲಿ ಆ್ಯಂಡರ್ಸನ್ (584)‌ ಇದ್ದಾರೆ.

ಗಾಯದ ಸಮಸ್ಯೆಗಳಿಗೆ ತುತ್ತಾಗಿದ್ದ ವುಡ್‌ ಹಾಗೂ ಆರ್ಚರ್‌ ಅವರು ಸದ್ಯ ಪಂದ್ಯಕ್ಕೆ ಫಿಟ್‌ ಆಗಿದ್ದಾರೆ. ತಂಡದಲ್ಲಿ ಏಕೈಕ ಸ್ಪಿನ್ನರ್‌ ಡಾಮ್‌ ಬೆಸ್‌ ಅವರಿದ್ದು, ಆಡುವ 11ರ ಬಳಗದಲ್ಲಿ ಬ್ರಾಡ್‌ ಅವರಿಗೆ ಸ್ಥಾನ ಸಿಗುವುದು ಅನುಮಾನ.

ಇನ್ನೊಬ್ಬ ವೇಗಿ ಕ್ರಿಸ್‌ ವೋಕ್ಸ್‌ ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಾರೆ. ಆದರೆ ಏಜಿಸ್‌ ಬೌಲ್‌ನಲ್ಲಿ ನಡೆಯುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅವರಿಗೂ ಸ್ಥಾನ ಸಿಗುವ ನಿರೀಕ್ಷೆಯಿಲ್ಲ.

‘ಇಂಗ್ಲೆಂಡ್‌ ತಂಡವು ವೆಸ್ಟ್‌ ಇಂಡೀಸ್‌ ಹಾಗೂ ಪಾಕಿಸ್ತಾನ ವಿರುದ್ಧ ಸತತ ಆರು ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಹಾಗಾಗಿ ಬೌಲರ್‌ಗಳನ್ನು ರೊಟೇಶನ್‌‌ ಮಾದರಿಯಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ’ ಎಂದು ದಿ ಗಾರ್ಡಿಯನ್‌ ಸುದ್ದಿ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.