ADVERTISEMENT

ಬ್ಯಾಡ್ಮಿಂಟನ್ ವಿಶ್ವ ರ‍್ಯಾಂಕಿಂಗ್: ಅಗ್ರ 10ರಲ್ಲಿ ಪುರುಷರ ಪ್ರಾತಿನಿಧ್ಯವಿಲ್ಲ

ಪಿಟಿಐ
Published 11 ಮಾರ್ಚ್ 2025, 16:12 IST
Last Updated 11 ಮಾರ್ಚ್ 2025, 16:12 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ನವದೆಹಲಿ: ಭಾರತದ ಪ್ರಮುಖ ಆಟಗಾರ ಲಕ್ಷ್ಯ ಸೇನ್ ಮತ್ತು ಡಬಲ್ಸ್‌ನಲ್ಲಿ ದೇಶದ ಅಗ್ರ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಅವರು ಮಂಗಳವಾರ ಪ್ರಕಟವಾದ ಬಿಡಬ್ಲ್ಯುಎಫ್‌ ರ್‍ಯಾಂಕಿಂಗ್‌ನಲ್ಲಿ ಐದು ಸ್ಥಾನಗಳನ್ನು ಹಿಂಬಡ್ತಿ ಪಡೆದಿದ್ದಾರೆ. ಇದರಿಂದಾಗಿ ಪುರುಷರ ವಿಭಾಗದಲ್ಲಿ ವಿಶ್ವದ ಅಗ್ರ 10ರಲ್ಲಿ ಭಾರತದ ಪ್ರಾತಿನಿಧ್ಯ ಇಲ್ಲದಂತಾಗಿದೆ.

ಈ ಹಿಂದೆ ವಿಶ್ವ ಕ್ರಮಾಂಕದಲ್ಲಿ ಒಮ್ಮೆ ಆರನೇ ಸ್ಥಾನಕ್ಕೇರಿದ್ದ ಸಿಂಗಲ್ಸ್‌ ಆಟಗಾರ ಲಕ್ಷ್ಯ ಪ್ರಸ್ತುತ 15ನೇ ಸ್ಥಾನದಲ್ಲಿದ್ದಾರೆ. ಸಾತ್ವಿಕ್‌– ಚಿರಾಗ್‌ ಜೋಡಿ ಕಳೆದ ವಾರದ ಏಳನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಸರಿದಿದೆ. 2021ರ ನವೆಂಬರ್‌ ನಂತರ ಮೊದಲ ಬಾರಿ ಅಗ್ರ 10ರಲ್ಲಿ ಭಾರತದ ಆಟಗಾರರು ಕಾಣಿಸಿಕೊಂಡಿಲ್ಲ.

ಮಹಿಳಾ ಸಿಂಗಲ್ಸ್‌ನಲ್ಲಿ ಒಲಿಂಪಿಕ್ಸ್‌ನ ಅವಳಿ ಪದಕ ವಿಜೇತೆ ಪಿ.ವಿ.ಸಿಂಧು, ಒಂದು ಸ್ಥಾನ ಕೆಳಕ್ಕೆ ಇಳಿದಿದ್ದು ಈಗ 16ನೇ ಕ್ರಮಾಂಕದಲ್ಲಿದ್ದಾರೆ.

ADVERTISEMENT

ಆದರೆ ಡಬಲ್ಸ್‌ನಲ್ಲಿ ಟ್ರೀಸಾ ಜೋಳಿ– ಗಾಯತ್ರಿ ಗೋಪಿಚಂದ್ ಜೋಡಿ ಒಂಬತ್ತನೇ ಸ್ಥಾನದಲ್ಲಿದ್ದು, ಅಗ್ರ 10ರ ಒಳಗೆ ಇರುವುದು ಕೊಂಚ ಸಮಾಧಾನ ಮೂಡಿಸಿದೆ.

ಮಿಶ್ರ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ– ಧ್ರುವ್ ಕಪಿಲಾ ಅವರು ಜೀವನಶ್ರೇಷ್ಠ 19ನೇ ಸ್ಥಾನಕ್ಕೇರಿದ್ದಾರೆ. ಕಳೆದ ವಾರ ಆರ್ಲಿಯನ್ ಮಾಸ್ಟರ್‌ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದ ಆಯುಷ್‌ ಶೆಟ್ಟಿ ಐದು ಸ್ಥಾನ ಬಡ್ತಿ ಪಡೆದಿದ್ದು 43ನೇ ಸ್ಥಾನದಲ್ಲಿದ್ದಾರೆ. ಇದು ಅವರ ಶ್ರೇಷ್ಠ ರ್‍ಯಾಂಕಿಂಗ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.