ADVERTISEMENT

ಸಿಬ್ಬಂದಿ ವೇತನ ಕಡಿತ: ಕ್ರಮ ಸಮರ್ಥಿಸಿಕೊಂಡ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 13:20 IST
Last Updated 21 ಏಪ್ರಿಲ್ 2020, 13:20 IST
   

ಮೆಲ್ಬೋರ್ನ್‌: ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಮಂಡಳಿಯ ಸಿಬ್ಬಂದಿ ವೇತನ ಕಡಿತಗೊಳಿಸುವ ನಿರ್ಧಾರವನ್ನು ಮಂಡಳಿಯ ಸಿಇಒ ಕೆವಿನ್ ರಾಬರ್ಟ್‌ ಸಮರ್ಥಿಸಿಕೊಂಡಿದ್ದಾರೆ. ಕೋವಿಡ್–19ನಿಂದಾಗಿ ಮಂಡಳಿಗೆ ಆಗಿರುವ ಆರ್ಥಿಕ ಹಿನ್ನಡೆಯನ್ನು ನಿಯಂತ್ರಿಸಲು ವೇತನ ಕಡಿತ ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ.

ಸಿಎ ತನ್ನಶೇ. 80 ರಷ್ಟು ಸಿಬ್ಬಂದಿಗೆ ರಜೆ ನೀಡಿದ್ದು, ಅವರಿಗೆ ಜೂನ್‌ 30 ರವರೆಗೆ ಶೇ. 20 ರಷ್ಟು ವೇತನ ನೀಡಲು ನಿರ್ಧರಿಸಿದೆ. ಇದಕ್ಕೆಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.

ಮಂಡಳಿ ಬಳಿ ಸಾಕಷ್ಟು ಹಣವಿದ್ದರೂ ವೇತನ ಕಡಿತ ಮಾಡಲಾಗಿದೆ. ಇದರಿಂದಾಗಿ ಸಿಎಗೆ ಸಮಾರು ₹ 14.54 ಕೋಟಿ ಉಳಿತಾಯವಾಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಕೆವಿನ್‌, ‘ಮುಂದಿನ ನಾಲ್ಕು ವರ್ಷಗಳ ಆಯವ್ಯಯದ ಮೇಲೆ ಕೊರೊನಾ ಕಾರ್ಮೋಡ ಕವಿದಿದೆ. ಹೀಗಾಗಿ ಕ್ರಿಕೆಟ್‌ ಆಸ್ಟ್ರೇಲಿಯಾದ ಸಿಬ್ಬಂದಿಯ ವೇತನ ಕಡಿತ ಮಾಡದೇ ಬೇರೆ ದಾರಿಯೇ ಇಲ್ಲ. ಈಗಿನ ಪರಿಸ್ಥಿತಿಯಲ್ಲಿ ಇಂತಹ ಹಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯ. ನಾವೀಗ ಕಷ್ಟದಲ್ಲಿದ್ದೇವೆ. ಇದನ್ನು ಆಟಗಾರರೂ ಅರ್ಥಮಾಡಿಕೊಳ್ಳುವ ಭರವಸೆ ಇದೆ’ ಎಂದೂ ಹೇಳಿದ್ದಾರೆ.

ಆಟಗಾರರ ವೇತನ ಕಡಿತಕ್ಕೆ ಸಂಬಂಧಿಸಿದಂತೆಯೂ ಮಾತುಕತೆ ನಡೆಸುವುದಾಗಿ ಅವರು ಹೇಳಿದ್ದಾರೆ. ಮಾತ್ರವಲ್ಲದೆ,ಆರ್ಥಿಕ ಹಿನ್ನಡೆಯಿಂದ ಚೇತರಿಸಿಕೊಳ್ಳುವ ಸಲುವಾಗಿ ಭಾರತ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿ ಆಡಲು ಸಿಎ ಯೋಜಿಸಿದೆ. ಈ ವರ್ಷಾಂತ್ಯದಲ್ಲಿ ಭಾರತ–ಆಸ್ಟ್ರೇಲಿಯಾ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ನಿಗದಿಯಾಗಿದೆ.ಆ ವೇಳೆ ನಾಲ್ಕರ ಬದಲು ಐದು ಪಂದ್ಯ ಆಡುವುದು ಆಸೀಸ್‌ ಮಂಡಳಿಯ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.