ಕ್ರಿಕೆಟ್
(ಸಾಂಕೇತಿಕ ಚಿತ್ರ)
ಅಡಿಲೇಡ್: ಸಂಜೆ ಸೂರ್ಯ ಮುಳುಗುವ ಹೊತ್ತಿನಲ್ಲಿ ಕ್ರೀಡಾಂಗಣದಲ್ಲಿ ಹೊನಲು ಬೆಳಕು ಪ್ರಖರವಾಗುತ್ತದೆ. ಭಾರತ ತಂಡವು ನೆಟ್ಸ್ ಅಭ್ಯಾಸ ಮಾಡಲು ಇದೇ ಸಮಯವನ್ನು ಆಯ್ಕೆ ಮಾಡಿಕೊಂಡಿದೆ.
ಹಗಲು–ರಾತ್ರಿ ಪಂದ್ಯದಲ್ಲಿ ಸಹಜ ಬೆಳಕು ಮಂದವಾಗುತ್ತ, ವಿದ್ಯುದ್ದೀಪಗಳು ಚೆಲ್ಲುವ ಹೊನಲು ಬೆಳಕು ಹೆಚ್ಚುತ್ತ ಹೋಗುವ ಈ ಹೊತ್ತು ಬ್ಯಾಟರ್‌ಗಳಿಗೆ ಸವಾಲಿನದ್ದು. ಮಂಗಳವಾರ ಮುಸ್ಸಂಜೆ ಅಡಿಲೇಡ್ ಓವಲ್‌ನಲ್ಲಿ ಚೆಲ್ಲಿದ್ದ ಇಂತಹದೇ ಬೆಳಕಿನಲ್ಲಿ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಪುಲ್ ಶಾಟ್‌ಗಳನ್ನು ಆಡಿದರು. ಮೂವರು ಥ್ರೋಡೌನ್ ಪರಿಣತರ ಎಸೆತಗಳನ್ನು ಎದುರಿಸಿದರು. ಆ ಮೂವರು ಕೂಡ ಸೈಡ್ ಆರ್ಮ್ ಸಲಕರಣೆಯ ಮೂಲಕ ಶಾರ್ಟ್ ಪಿಚ್ ಎಸೆತಗಳನ್ನು ಪ್ರಯೋಗಿಸುತ್ತಿದ್ದರು.
ಕೆಲಹೊತ್ತಿನ ನಂತರ ಯಶಸ್ವಿ ಅವರು ಆ ಮೂವರಲ್ಲಿ ಒಬ್ಬರಿಗೆ ಮಾತ್ರ ಶಾರ್ಟ್ ಪಿಚ್ ಎಸೆತ ಹಾಕಲು ಹೇಳಿದರು. ಉಳಿದಿಬ್ಬರು ಬೇರೆ ಬೇರೆ ಲೆಂಗ್ತ್ ಎಸೆತಗಳನ್ನು ಹಾಕಿದರು. ಎಡಗೈ ಬ್ಯಾಟರ್ ಯಶಸ್ವಿ ಅವರು ಈಚೆಗೆ ನಡೆದ ಪಿಎಂ ಇಲೆವನ್ ಎದುರಿನ ಅಭ್ಯಾಸ ಪಂದ್ಯದಲ್ಲಿ ಪಿಂಕ್ ಬಾಲ್ ಎಸೆತಗಳನ್ನು ಎದುರಿಸುವಲ್ಲಿ ಹೆಚ್ಚು ಸಫಲರಾಗಿರಲಿಲ್ಲ.ಆದ್ದರಿಂದ ಅಂತಹದೇ ಎಸೆತಗಳನ್ನು ಪದೇ ಪದೇ ಅಭ್ಯಾಸ ಮಾಡಲು ಒತ್ತು ನೀಡಿದರು.
ಪಿಂಕ್ ಬಾಲ್ ಟೆಸ್ಟ್ ಮಾದರಿಯು ಕ್ರಿಕೆಟ್‌ಗೆ ಮಹತ್ವದ ಅಧ್ಯಾಯವಾಗಿ ಸೇರ್ಪಡೆಯಾಗಿದೆ. ಆದರೆ ಇದು ಆಟಗಾರರಿಗೆ ಕೆಲವು ಸವಾಲುಗಳನ್ನೂ ಒಡ್ಡಿದೆ. ಇಲ್ಲಿಯವರೆಗೆ 22 ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳು ನಡೆದಿವೆ. 2009ರ ನವೆಂಬರ್‌ನಲ್ಲಿ ಮೊದಲ ಪಂದ್ಯವು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಣ ನಡೆದಿತ್ತು. ಇದುವರೆಗೂ ಈ ಮಾದರಿಯಲ್ಲಿರುವ ಕೆಲವು ಸವಾಲುಗಳು ಬ್ಯಾಟರ್, ಬೌಲರ್ ಗಳು, ವಿಕೆಟ್‌ಕೀಪರ್ ಮತ್ತು ಫೀಲ್ಡರ್ ಗಳಿಗೆ ಕಗ್ಗಂಟಾಗಿಯೇ ಉಳಿದಿವೆ.
ಇಳಿಸಂಜೆ ಹೊತ್ತಿನಲ್ಲಿ ನೈಸರ್ಗಿಕ ಬೆಳಕು ಸರಿದು, ಕೃತಕ ಬೆಳಕು ಚೆಲ್ಲುವ ಹೊತ್ತಿನಲ್ಲಿ ಚೆಂಡು ಹೆಚ್ಚು ಸ್ವಿಂಗ್ ಆಗುವುದರಿಂದ ಬ್ಯಾಟರ್‌ಗಳಿಗೆ ಕಠಿಣ ಪರಿಸ್ಥಿತಿ ಎದುರಾಗುತ್ತದೆ. ಚೆಂಡಿನ ಚಲನೆಯನ್ನು ಗುರುತಿಸುವುದು ಮತ್ತು ಊಹಿಸುವುದರಲ್ಲಿ ಲೆಕ್ಕಾಚಾರ ತಪ್ಪಾಗುವ ಸಾಧ್ಯತೆಗಳು ಹೆಚ್ಚು. ಇದರಿಂದಾಗಿ ಬ್ಯಾಟರ್‌ಗಳು ಔಟಾಗುವ ಆತಂಕ ಇರುತ್ತದೆ.
ಇದೇ ಹೊತ್ತಿನಲ್ಲಿ ವಿಕೆಟ್‌ಕೀಪರ್ ಮತ್ತು ಫೀಲ್ಡರ್‌ಗಳಿಗೂ ಚೆಂಡಿನ ಚಲನೆ, ವೇಗಗಳನ್ನು ನಿಖರವಾಗಿ ಗುರುತಿಸುವುದು ಕಷ್ಟವಾಗುತ್ತದೆ. ಇದರಿಂದಾಗಿ ವಿಕೆಟ್‌ಕೀಪರ್ ಮತ್ತು ಫೀಲ್ಡರ್‌ಗಳು ಮಿಸ್ ಫೀಲ್ಡ್ ಮಾಡುವ ಸಾಧ್ಯತೆಗಳು ಹೆಚ್ಚು. ಕ್ಯಾಚ್ ಕೈಚೆಲ್ಲುವ ಆತಂಕವೂ ಇರುತ್ತದೆ.
‘ಸಂಜೆ ಬೆಳಕು ಬದಲಾಗುವ ಹೊತ್ತಿನಲ್ಲಿ ಚೆಂಡಿನ ವೇಗ ಊಹಿಸುವುದು ಕಷ್ಟ. ಈ ಸವಾಲನ್ನು ನಿಭಾಯಿಸಲು ಪಂದ್ಯದ ಪ್ರತಿಯೊಂದು ಅವಧಿಯಲ್ಲಿಯೂ ತ್ವರಿತವಾಗಿ ಹೊಂದಿಕೊಳ್ಳಬೇಕು. ನಾವು ಮೂರು ಅವಧಿಯಲ್ಲಿ ಇದನ್ನು ಅಭ್ಯಾಸ ಮಾಡುತ್ತಿದ್ದೇವೆ.
ನಿನ್ನೆ (ಸೋಮವಾರ), ಇಂದು (ಮಂಗಳವಾರ) ಹೊನಲು ಬೆಳಕಿನಡಿಯಲ್ಲಿ ತಾಲೀಮು ಮಾಡುತ್ತೇವೆ. ನಾಳೆಯೂ ಮಾಡುತ್ತೇವೆ’ ಎಂದು ಆಸ್ಟ್ರೇಲಿಯಾ ವಿಕೆಟ್‌ಕೀಪರ್ ಅಲೆಕ್ಸ್ ಕ್ಯಾರಿ ಹೇಳಿದರು.
ಪಿಂಕ್ ಬಾಲ್ ಕೇವಲ ಬ್ಯಾಟರ್, ಫೀಲ್ಡರ್‌ಗಳಿಗಷ್ಟೇ ಅಲ್ಲ. ಬೌಲರ್‌ಗಳಿಗೂ ಕೆಲವೊಂದು ಸವಾಲುಗಳನ್ನು ಒಡ್ಡುತ್ತದೆ.
‘ಕೆಂಪುವರ್ಣದ ಚೆಂಡಿಗಿಂತ ಪಿಂಕ್ ಬಾಲ್ ಭಿನ್ನವಾಗಿದೆ. ಸಿಂಥೆಟಿಕ್ ಮಾದರಿಯಂತಿದೆ. ಕೆಲವು ಗೊಂದಲ ಗಳು ಆಗುತ್ತವೆ. ಆದರೆ ಅದನ್ನು ಪರಿಹರಿಸಿಕೊಳ್ಳಲು ಕಠಿಣ ತಾಲೀಮು ಮತ್ತು ಪಂದ್ಯದಲ್ಲಿ ಅಪಾರ ಏಕಾಗ್ರತೆಯನ್ನು ಸಾಧಿಸುವುದು ಮುಖ್ಯ’ ಎಂದು ಕ್ಯಾನ್‌ಬೆರಾದಲ್ಲಿ ಅಭ್ಯಾಸ ಪಂದ್ಯದ ನಂತರ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಸುದ್ದಿಗಾರರಿಗೆ ಹೇಳಿದ್ದರು.
ಕಳೆದ ಎಲ್ಲ ಪಿಂಕ್ ಬಾಲ್ ಟೆಸ್ಟ್‌ಗಳ ಫಲಿತಾಂಶಗಳನ್ನು ನೋಡಿದರೆ ಬೌಲರ್‌ಗಳೇ ಪಾರಮ್ಯ ಮೆರೆದಿದ್ದಾರೆ. ಕಳೆದ 22 ಪಂದ್ಯಗಳಲ್ಲಿಯೂ ಫಲಿತಾಂಶ ಹೊರಹೊಮ್ಮಿರುವುದು ವಿಶೇಷ. ಅದರಲ್ಲಿ ಐದು ಟೆಸ್ಟ್‌ಗಳು ಮಾತ್ರ ಐದನೇ ದಿನದವರೆಗೂ ನಡೆದಿವೆ. ಎರಡು ಪಂದ್ಯಗಳು ಎರಡನೇ ದಿನವೇ ಮುಕ್ತಾಯವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.