ಇಬ್ರಾಹಿಂ ಜದ್ರಾನ್
ಲಾಹೋರ್ (ಪಾಕಿಸ್ತಾನ): ಇಂಗ್ಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರದೂಡಿರುವ ಉತ್ಸಾಹದಲ್ಲಿರುವ ಅಫ್ಗಾನಿಸ್ತಾನ ಈಗ ಆಸ್ಟ್ರೇಲಿಯಾದ ಕಡೆ ತನ್ನ ಗುರಿಯನ್ನು ನೆಟ್ಟಿದೆ. ಸೆಮಿಫೈನಲ್‌ಗೆ ಸ್ಥಾನ ನಿರ್ಧರಿಸುವ ‘ಬಿ’ ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಹಷ್ಮತ್‌ವುಲ್ಲಾ ಶಾಹಿದಿ ಬಳಗವು ಶುಕ್ರವಾರ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಚಾಂಪಿಯನ್ಸ್ ಟ್ರೋಫಿಗೆ ಪದಾರ್ಪಣೆ ಮಾಡಿರುವ ಅಫ್ಗನ್ ಪಡೆ ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ರೋಚಕ ಹೋರಾಟದಲ್ಲಿ ಎಂಟು ರನ್‌ಗಳಿಂದ ಸೋಲಿಸಿ ಅಚ್ಚರಿಯ ಫಲಿತಾಂಶ ನೀಡಿತ್ತು. ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನಲ್ಲೂ ಆಗ ಹಾಲಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ತಂಡಕ್ಕೆ ಅಫ್ಗಾನಿಸ್ತಾನ ತಂಡವು ಸೋಲುಣಿಸಿತ್ತು.
ಎಂಟು ರಾಷ್ಟ್ರಗಳ ಈ ಟೂರ್ನಿಯಲ್ಲಿ ನಾಲ್ಕರ ಘಟ್ಟ ತಲುಪಬೇಕಾದರೆ ಅಫ್ಗನ್ನರಿಗೆ ಕೊನೆಯ ಲೀಗ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಮೇಲೆ ಗೆಲುವು ಅನಿವಾರ್ಯ. ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ 3 ಅಂಕ ಹೊಂದಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ 351 ರನ್‌ಗಳ ದೊಡ್ಡ ಮೊತ್ತ ಬೆನ್ನಟ್ಟಿ ಜಯಗಳಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಆ ತಂಡದ ಎರಡನೇ ಪಂದ್ಯ ಮಳೆಯ ಪಾಲಾಗಿತ್ತು.
‘ಇಂಥ ಗೆಲುವು ತಂಡದ ವಿಶ್ವಾಸ ಹೆಚ್ಚಿಸಿ ಬಲ ತುಂಬುತ್ತದೆ’ ಎಂದು ಶಾಹೀದಿ, ಇಂಗ್ಲೆಂಡ್ ಮೇಲಿನ ಗೆಲುವಿನ ನಂತರ ಪ್ರತಿಕ್ರಿಯಿಸಿದ್ದಾರೆ.
‘ಮುಂಬರುವ ಪಂದ್ಯ ಸೆಮಿಫೈನಲ್ ದೃಷ್ಟಿಯಿಂದ ಉಭಯ ತಂಡಗಳಿಗೂ ಮಹತ್ವದ್ದು. ಆಸ್ಟ್ರೇಲಿಯಾ ಎದುರಿಸಲು ಕಠಿಣ ಮತ್ತು ಉತ್ತಮ ತಂಡ’ ಎಂದಿದ್ದಾರೆ. ಸೆಮಿಫೈನಲ್ ಧ್ಯಾನದಲ್ಲೇ ಒತ್ತಡ ತಂದುಕೊಳ್ಳಲು ನಾವು ಬಯಸುವುದಿಲ್ಲ ಎಂಬ ಮಾತನ್ನೂ ಆಡಿದ್ದಾರೆ.
ಮಳೆಯಾದರೂ ಅಫ್ಗನ್ನರ ಕನಸು ಜೀವಂತವಾಗಿ ಉಳಿಯಲಿದೆ. ಆದರೆ ಅದರ ಭವಿಷ್ಯ ಇನ್ನೊಂದು ಪಂದ್ಯದ ಫಲಿತಾಂಶ ಮತ್ತು ನೆಟ್ ರನ್ ರೇಟ್ ಮೇಲೆ ಅವಲಂಬಿತವಾಗಿದೆ.
‘ನಮ್ಮ ಸಿದ್ಧತೆಯ ಬಹುಭಾಗ ಟೂರ್ನಿಗೆ ಮೊದಲೇ ಆಗಿದೆ. ಶುಕ್ರವಾರದ ಪಂದ್ಯದಲ್ಲಿ ಗೆಲುವಿಗೆ ಯತ್ನಿಸಿ ಪ್ರೇಕ್ಷಕರ ಸದ್ದಡಗಿಸುವಂತೆ ಆಡುವುದು ನಮ್ಮ ಗುರಿ’ ಎಂದಿದ್ದಾರೆ.
ಅಫ್ಗಾನಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳು ಈ ಹಿಂದೆ ನಾಲ್ಕು ಏಕದಿನ ಪಂದ್ಯಗಳಲ್ಲಿ ಎದುರಾಗಿದ್ದು, ಎಲ್ಲದರಲ್ಲೂ ಆಸ್ಟ್ರೇಲಿಯಾ ಜಯಗಳಿಸಿದೆ. 2023ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾವನ್ನು, ಅಫ್ಗನ್ ಪಡೆ ಒಂದು ಹಂತದಲ್ಲಿ 7 ವಿಕೆಟ್‌ಗೆ 91 ರನ್‌ಗಳಿಗೆ ಸೀಮಿತಗೊಳಿಸಿ ನಡುಕಹುಟ್ಟಿಸಿತ್ತು. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಪವಾಡಸದೃಶ ಅಜೇಯ ದ್ವಿಶತಕ ಹೊಡೆದು ಅಫ್ಗಾನಿಸ್ತಾನದ ಕೈಯಲ್ಲಿದ್ದ ಪಂದ್ಯವನ್ನು ಕಸಿದುಕೊಂಡಿದ್ದರು.
ಹೋದ ವರ್ಷ ಟಿ20 ವಿಶ್ವಕಪ್‌ನಲ್ಲಿ ಅಫ್ಗಾನಿಸ್ತಾನ, ಇದೇ ಎದುರಾಳಿಯನ್ನು ಸೋಲಿಸಿ ಮೊದಲ ಬಾರಿ ಸೆಮಿಫೈನಲ್ ತಲುಪಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿತ್ತು.
ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಅಫ್ಗನ್ನರು, ಹರಿಣಗಳ ತಂಡಕ್ಕೆ 107 ರನ್‌ಗಳಿಂದ ಸೋತರೂ ಪುಟಿದೆದ್ದು, ಇಂಗ್ಲೆಂಡ್ ವಿರುದ್ಧ ಹೋರಾಡಿ ಜಯಗಳಿಸಿದ್ದು ತಮ್ಮನ್ನು ಕಡೆಗಣಿಸುವಂತಿಲ್ಲ ಎಂದು ಸಾರಿದ್ದಾರೆ. 23 ವರ್ಷದ ಇಬ್ರಾಹಿಂ ಜದ್ರಾನ್ ಅವರ 177 ರನ್‌ಗಳು ಟೂರ್ನಿಯ ಅತ್ಯಧಿಕ ಎನಿಸಿದೆ.
‘ಅವರು ಆರು ತಿಂಗಳು ಕ್ರಿಕೆಟ್‌ನಿಂದ ದೂರವಿದ್ದರು. ಗಾಯದ ನಂತರ ಪುನರಾಗಮನ ಮಾಡಿ ಮಹತ್ವದ ಪಂದ್ಯದಲ್ಲಿ ಈ ರೀತಿ ಆಡುವುದು ಯಾವುದೇ ಆಟಗಾರನಿಗೆ ಸುಲಭವಲ್ಲ. ಅವರು ಪ್ರತಿಭಾನ್ವಿತ ಮತ್ತು ಶ್ರಮ ಹಾಕುವ ಆಟಗಾರ’ ಎಂದು ಮೆಚ್ಚುಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.